
ಔರಾದ್‌ನಲ್ಲಿ ಗೋಮಯದಿಂದ ಗಣೇಶ ಮೂರ್ತಿ ತಯಾರಿಸಿ ಪರಿಸರ ಸಂರಕ್ಷಣೆಗೆ ಹೊಸ ಹೆಜ್ಜೆ
ಔರಾದ್: ಗಣೇಶೋತ್ಸವದ ಸಂಭ್ರಮಕ್ಕೆ ಪರಿಸರ ಕಾಳಜಿಯ ಸ್ಪರ್ಶ ನೀಡುವ ಉದ್ದೇಶದಿಂದ ಗೋಮಯದಿಂದ ಗಣೇಶ ಮೂರ್ತಿಗಳನ್ನು ತಯಾರಿಸಿ ಪರಿಸರ ಸ್ನೇಹಿ ಆಚರಣೆಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಕಾವೇರಿ ವೀರೇಶ ಮುದ್ದಾ ದಂಪತಿಗಳು ಕೈಗೊಂಡಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳ ಬಳಕೆಯಿಂದ ಜಲಮೂಲಗಳು ಹಾಗೂ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಗೋಮಯದಿಂದ ತಯಾರಿಸಿದ ಮೂರ್ತಿಗಳು ಪರಿಸರ ಸಂರಕ್ಷಣೆಯ ಪರ್ಯಾಯವಾಗಿ ಗಮನ ಸೆಳೆಯುತ್ತಿವೆ. ಪ್ರಸಕ್ತ ವರ್ಷ ಒಟ್ಟು 150 ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಈ ಪೈಕಿ 5 ಇಂಚಿನ 100 ಮೂರ್ತಿಗಳು ಹಾಗೂ 9 ಇಂಚಿನ 50 ಮೂರ್ತಿಗಳು ಸೇರಿವೆ. 5 ಇಂಚಿನ ಮೂರ್ತಿಗೆ ₹50 ಹಾಗೂ 9 ಇಂಚಿನ ಮೂರ್ತಿಗೆ ₹250 ದರ ನಿಗದಿಪಡಿಸಲಾಗಿದೆ.
ಮೂರ್ತಿಗಳ ತಯಾರಿಕೆಗೆ ಸುಮಾರು ₹15 ಸಾವಿರ ಖರ್ಚಾಗಿದೆ. ಇದರಲ್ಲಿ ಲಾಭ ಗಳಿಸುವುದಕ್ಕಿಂತ ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದು ಹಾಗೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಯನ್ನು ಉತ್ತೇಜಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ವೀರೇಶ ಮುದ್ದಾ ತಿಳಿಸಿದರು.
ಗಣೇಶ ಮೂರ್ತಿಗಳ ಜತೆಗೆ ಗೋಮ ಯದಿಂದ ತಯಾರಿಸಿದ ವಿಭೂತಿಗೂ ಬೇಡಿಕೆ ವ್ಯಕ್ತವಾಗಿದೆ. ಈ ವರ್ಷ ಸುಮಾರು 5 ಸಾವಿರದಷ್ಟು ವಿಭೂತಿ ಮಾರಾಟವಾಗಿದ್ದು, ಇದರಿಂದಲೂ ಲಾಭ ದೊರೆತಿದೆ. ಗೋಮಯವನ್ನು ಕೇವಲ ತ್ಯಾಜ್ಯವೆಂದು ಪರಿಗಣಿಸದೆ, ಅದರಿಂದ ವಿವಿಧ ಉಪಯುಕ್ತ ವಸ್ತು ತಯಾರಿಸಬಹುದು ಎಂಬುದನ್ನು ಈ ಪ್ರಯತ್ನ ತೋರಿಸಿಕೊಟ್ಟಿದೆ. ಇದರಿಂದ ಗೋವು ಸಂರಕ್ಷಣೆಯ ಜತೆಗೆ ಸ್ವಾವಲಂಬನೆಗೂ ಉತ್ತೇಜನ ದೊರೆಯುತ್ತದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮೂರ್ತಿಗಳನ್ನು ತಯಾರಿಸಲಾಗುವುದು. ಲಾಭಕ್ಕಿಂತ ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವುದೇ ನಮ್ಮ ಉದ್ದೇಶ ಎಂದು ವಿವರಿಸಿದರು.