
ಭಾಲ್ಕಿ: ಸ್ಮಶಾನ ಭೂಮಿಗಳಲ್ಲಿ ಮೂಲಸೌಲಭ್ಯ ಕೊರತೆ
ಭಾಲ್ಕಿ: ಸುಗಮ ಹಾಗೂ ಗೌರವಯುತವಾದ ಶವಸಂಸ್ಕಾರ ನೆರವೇರಿಸಲು ಪಟ್ಟಣದ ಸ್ಮಶಾನ ಭೂಮಿಗಳಲ್ಲಿ ಸಮರ್ಪಕ ಮೂಲಸೌಲಭ್ಯಗಳಿಲ್ಲದೆ ಸಾರ್ವಜನಿಕರು ಅಂತಿಮ ಸಮಯದಲ್ಲಿ ಪರಿತಪಿಸುವಂತಾಗಿದೆ.
ಪಟ್ಟಣದ ಕೆಲ ಸ್ಮಶಾನಭೂಮಿಗಳಲ್ಲಿ ನೆರಳು ಮತ್ತು ಆಸನಗಳ ವ್ಯವಸ್ಥೆಯಿದೆ. ಇನ್ನುಳಿದ ಬಹುತೇಕ ಸ್ಮಶಾನ ಭೂಮಿಗಳಲ್ಲಿ ನೆರಳು, ಆಸನಗಳ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪಗಳ, ಸುಗಮವಾಗಿ ತೆರಳಲು ರಸ್ತೆಯಿಲ್ಲದೆ ಸೊರಗಿವೆ.
ಮಾಸುಮ್ ಪಾಷಾ ಕಾಲೊನಿಯ ಸ್ಮಶಾನ ಭೂಮಿಯಲ್ಲಿ ಬಿಸಿಲು ಮತ್ತು ಮಳೆಯ ಹೊಡೆತದಿಂದ ಜನರಿಗೆ ಅನುಕೂಲವಾಗಲೆಂದು ಸ್ವಲ್ಪ ಜನರು ನಿಂತುಕೊಳ್ಳಲು ನೆರಳು ಮತ್ತು ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ವಿದ್ಯುತ್ ವ್ಯವಸ್ಥೆಯೂ ಇದೆ. ಆದರೆ ಕೊಳವೆ ಬಾವಿಗೆ ನಳ ಮತ್ತು ಮೋಟಾರ್ ವ್ಯವಸ್ಥೆಯಿಲ್ಲ. ಶೌಚಾಲಯ ವ್ಯವಸ್ಥೆಯೂ ಇಲ್ಲ.
ಸ್ಮಶಾನಭೂಮಿಗೆ ತೆರಳಲು ಜನರು ಮೂಗು ಮುಚ್ಚಿಕೊಂಡು ಹೋಗುವಂತಹ ಸಂಕಷ್ಟದ ಸ್ಥಿತಿಯಿದೆ. ರಸ್ತೆ ಅಕ್ಕಪಕ್ಕ ಹುಲ್ಲು ಬೆಳೆದಿದ್ದು, ಅದೇ ಸ್ಥಳವನ್ನು ಜನರು ಬಯಲು ಶೌಚಕ್ಕೆ ಬಳಸುವುದರಿಂದ ಸದಾ ಗಬ್ಬುನಾರುತ್ತದೆ. ರಾತ್ರಿ ಸಮಯದಲ್ಲಿ ಈ ರಸ್ತೆ ಮಾರ್ಗವಾಗಿ ಸಂಚರಿಸಲು ವಿದ್ಯುತ್ ದೀಪಗಳ ವ್ಯವಸ್ಥೆಯಿಲ್ಲ. ಈ ಸ್ಮಶಾನ ಭೂಮಿ ಮುಂಭಾಗದಲ್ಲಿ 2 ಸೋಲಾರ್ ವಿದ್ಯುತ್ ದೀಪಗಳು ಇದ್ದರೂ, ಬೆಳಗುವುದಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಆನಂದವಾಡಿ ರಸ್ತೆಯ ಬಟಿಯಾಳ ಸಮೀಪದ ಸ್ಮಶಾನ ಭೂಮಿಯಲ್ಲಿಯೂ ಹೆಚ್ಚು ಕಡಿಮೆ ಇವೇ ಸಮಸ್ಯೆಗಳು ತಾಂಡವಾಡುತ್ತಿವೆ. ಇಲ್ಲಿ ನೆರಳಿನ ವ್ಯವಸ್ಥೆಗೆ ನಿರ್ಮಿಸಿರುವ ಕಟ್ಟೆ ಬಿರುಕು ಬಿಟ್ಟಿದೆ. ಸಮೀಪವೇ ಮೃತ ಪ್ರಾಣಿಗಳನ್ನು ಬಿಸಾಡುವುದರಿಂದ ವರ್ಷದ ಬಹುತೇಕ ದಿನಗಳಲ್ಲಿ ದುರ್ನಾತ ಬೀರುತ್ತಿರುತ್ತದೆ. ಸ್ಮಶಾನ ಭೂಮಿಯ ಸ್ಥಳ ತುಂಬಾ ಕಿರಿದಾಗಿದೆ ಎಂದು ಪಟ್ಟಣ ವಾಸಿಗಳಾದ ಸಚಿನ್ ಜಾಧವ್, ಪಂಢರಿ ಮೇತ್ರೆ ಅಳಲು ತೋಡಿಕೊಂಡರು.
ಭಾಲ್ಕಿಯ ಕೆರೆ ಸಮೀಪದ ಲಿಂಗಾಯತ ಸ್ಮಶಾನ ಭೂಮಿ ವಿಶಾಲವಾಗಿದೆ. ಆದರೆ ಸ್ಥಳ ಮೂಲಸೌಕರ್ಯಗಳ ಕೊರತೆಯಿಂದ ಬಡವಾಗಿದೆ. ಸ್ಮಶಾನ ಭೂಮಿಯ ಬಹುಭಾಗ ಕಾಂಪೌಂಡ್ ನಿರ್ಮಿಸಲಾಗಿದೆ. ಆದರೆ ಪೂರ್ಣಗೊಂಡಿಲ್ಲ. ಗೇಟ್ ವ್ಯವಸ್ಥೆಯಿಲ್ಲ. ನೆರಳು, ಕುಡಿಯುವ ನೀರು, ಶೌಚಾಲಯ, ರಸ್ತೆ ವ್ಯವಸ್ಥೆಯೂ ಇಲ್ಲಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಸ್ಮಶಾನ ಭೂಮಿಗೆ ತೆರಳುವುದು ಮತ್ತು ಅಂತ್ಯ ಸಂಸ್ಕಾರ ನೆರವೇರಿಸುವುದು ಸಾರ್ವಜನಿಕರಿಗೆ ಹಾಗೂ ಕುಟುಂಬಸ್ಥರಿಗೆ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಶಂಭುಲಿಂಗ ಕಾಮಣ್ಣ.
ಬಸ್ ಸ್ಟ್ಯಾಂಡ್ ಹಿಂಭಾಗದ ಸ್ಮಶಾನ ಭೂಮಿ ಸೇರಿದಂತೆ ಇತರ ಕಡೆಯ ಸ್ಮಶಾನ ಭೂಮಿಗಳಿಗೆ ಕಾಂಪೌಂಡ್ ಸೇರಿದಂತೆ ಮೂಲ ಸೌಕರ್ಯಗಳ ಅಗತ್ಯವಿದೆ. ಸಂಬಂಧಪಟ್ಟವರು ಕೂಡಲೇ ಎಲ್ಲ ಸ್ಮಶಾನ ಭೂಮಿಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು ಎನ್ನುವುದು ಪಟ್ಟಣ ವಾಸಿಗಳ ಒಕ್ಕೊರಲಿನ ಒತ್ತಾಯವಾಗಿದೆ.
ಕಾಲುದಾರಿ ವ್ಯಾಜ್ಯ ಹೈಕೋರ್ಟ್‌ನಲ್ಲಿದೆ...
ಭಾಲ್ಕಿ ಕೆರೆಯ ಸಮೀಪದ ಸ್ಮಶಾನ ಭೂಮಿಗೆ ರಸ್ತೆ ನಿರ್ಮಾಣ ಸಂಬಂಧ ಸಚಿವರ ಸೂಚನೆಯಂತೆ ಖಾಸಗಿ ಭೂಮಿ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಮೊದಲು ರಸ್ತೆ ನಿರ್ಮಿಸಿ ಉಳಿದ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಭಾರಿ ಹೇಳಿದರು.
ಮಾಸುಮ್ ಪಾಷಾ ಕಾಲೊನಿಯ ಸ್ಮಶಾನ ಭೂಮಿಗೆ ತೆರಳಲು ಬೊಮ್ಮಗೊಂಡೇಶ್ವರ ವೃತ್ತದಿಂದ ಇದ್ದ ಕಾಲು ದಾರಿ ರಸ್ತೆ ಸಂಬಂಧದ ವ್ಯಾಜ್ಯ ಹೈಕೋರ್ಟ್‌ನಲ್ಲಿ ಇದೆ. ಸ್ಮಶಾನ ಭೂಮಿಗಳಲ್ಲಿನ ಕುಡಿಯುವ ನೀರಿನ ಮೋಟಾರ್‌ಗಳನ್ನು ಕಳವು ಮಾಡಲಾಗಿದೆ. ಪುರಸಭೆ ವತಿಯಿಂದ ಸ್ಮಶಾನಭೂಮಿಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಶ್ರಮಿಸುತ್ತಿದ್ದೇವೆ. ನಮ್ಮ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಕೂಡ ಅತ್ಯಗತ್ಯವಾಗಿದೆ ಎಂದು ಹೇಳಿದರು.