
ಬೀದರ್| ಗಣೇಶ ಚತುರ್ಥಿ ಸಂಭ್ರಮ; ಪ್ರತಿಷ್ಠಾಪನೆಗೆ ಮಂಟಪ ಸಿದ್ಧಪಡಿಸಿದ ಮಂಡಳಿಗಳು
ಜನವಾಡ: ಗಣೇಶ ಚತುರ್ಥಿ ನಿಮಿತ್ತ ಬೀದರ್ ತಾಲ್ಲೂಕಿನ ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿದೆ. ವಿಘ್ನ ನಿವಾರಕನ ಸ್ವಾಗತಕ್ಕೆ ಗಣೇಶ ಮಂಡಳಗಳ ಸದಸ್ಯರು ಹಾಗೂ ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ.
ಜನವಾಡ, ಕಮಠಾಣ, ಬಗದಲ್, ಮನ್ನಳ್ಳಿ, ಮಾಳೆಗಾಂವ್, ಅಲಿಯಂಬರ್, ಚಿಲ್ಲರ್ಗಿ ಚಿಮಕೋಡ್ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಗಣೇಶ ಪ್ರತಿಷ್ಠಾಪನೆ ತಯಾರಿಗಳು ಭರದಿಂದ ನಡೆದಿದೆ.
ಗಣೇಶ ಮಂಡಳದವರು ಬೆನಕನನ್ನು ಕೂಡಿಸುವುದಕ್ಕಾಗಿ ಆಕರ್ಷಕ ಮಂಟಪಗಳನ್ನು ಸಿದ್ಧಪಡಿಸುತ್ತಿದ್ದಾರೆ. ಹೂ, ಅಲಂಕಾರಿಕ ವಸ್ತುಗಳು ಹಾಗೂ ವಿದ್ಯುತ್ ದೀಪಗಳಿಂದ ಶೃಂಗರಿಸುತ್ತಿದ್ದಾರೆ. ಅನೇಕ ಗಣೇಶ ಮಂಡಳದವರು ಹೈದರಾಬಾದ್, ಬೀದರ್ ಸೇರಿದಂತೆ ವಿವಿಧೆಡೆಯಿಂದ ಗಣೇಶನ ಬೃಹತ್ ಗಾತ್ರದ ಮೂರ್ತಿಗಳನ್ನು ವಾಹನಗಳಲ್ಲಿ ತರಿಸಿದ್ದಾರೆ. ಅನೇಕ ಮಂಡಳದವರು ಕ್ರೇನ್ ಬಳಸಿ ಮಂಟಪದಲ್ಲಿ ಮೂರ್ತಿಗಳನ್ನು ಇಟ್ಟಿದ್ದಾರೆ.
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಐದು ದಿನಗಳ ಗಣೇಶ ಪ್ರತಿಷ್ಠಾಪನೆ ಆಗಲಿವೆ. ಕೆಲ ಗ್ರಾಮಗಳಲ್ಲಿ ಏಳು ದಿನ ಗಣೇಶನ ಆರಾಧನೆ ನಡೆಯಲಿದೆ. ಜನವಾಡದಲ್ಲಿ ಈ ಬಾರಿ 30ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಆಗಲಿವೆ. ಯುವ ಗಣೇಶ ಮಂಡಳ, ಜನವಾಡ ಕಾ ರಾಜ, ಶಿವಸೇನಾ ಗಣೇಶ, ಟಿ.ಜೆ.ಎಂ., ಹಿಂದು ಮಹಾ ಗಣಪತಿ, ಕನಕ ಗಣೇಶ, ಚಿಂತಾಮಣಿ ಗಣೇಶ, ಯುವ ಹಿಂದು ಸೇನಾ ಮೊದಲಾದವು ಇವುಗಳಲ್ಲಿ ಪ್ರಮುಖವಾಗಿವೆ.
ಗಣೇಶ ಚತುರ್ಥಿಗಾಗಿ ಒಂದು ವಾರದಿಂದ ಸಿದ್ಧತೆಯಲ್ಲಿ ತೊಡಗಿದ್ದೇವೆ. ಬೆನಕನಳ್ಳಿಯಿಂದ 13ವರೆ ಅಡಿ ಎತ್ತರದ ನವಿಲಿನ ಮೇಲೆ ನೃತ್ಯ ಮಾಡುವ ಗಣೇಶನ ಮೂರ್ತಿ ತರಿಸಿದ್ದೇವೆ. ಬಹುತೇಕ ತಯಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸುತ್ತಾರೆ ಜನವಾಡದ ಯುವ ಗಣೇಶ ಮಂಡಳದ ಅಭಿಷೇಕ, ಮಣಿಕಂಠ ಹಾಗೂ ಇತರರು.
ಏಳು ದಿನ ಗಣೇಶನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಸಂಭ್ರಮ ಇಮ್ಮಡಿಗೊಳಿಸಲಿವೆ ಎಂದು ಹೇಳುತ್ತಾರೆ.
ಹೈದರಾಬಾದ್‌ನಿಂದ 11 ಅಡಿ ಎತ್ತರದ ಕುಳಿತ ಭಂಗಿಯ ಲಂಬೋದರನ ಮೂರ್ತಿ ತಂದಿದ್ದೇವೆ. ಈಗಾಗಲೇ ಮಂಟಪ ಸಿದ್ಧಪಡಿಸಿದ್ದೇವೆ ಎಂದು ತಿಳಿಸುತ್ತಾರೆ ಶಿವಸೇನಾ ಗಣೇಶ ಮಂಡಳದ ಅಧ್ಯಕ್ಷ ವಿಕ್ರಮ ಸಿಂಗ್.