
ಸುದ್ದಿಒನ್, ಬೆಂಗಳೂರು, ಸೆಪ್ಟೆಂಬರ್. 09 : ದೇಶದಲ್ಲೇ ಖ್ಯಾತಿ ಪಡೆದಿರುವ ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಹೀಗಾಗಿ ಸುರಕ್ಷತೆ ಬಹಳ ಮುಖ್ಯವಾಗುತ್ತದೆ. ಈ ಹಿನ್ನೆಲೆ ಇಂದು ಗೃಹ ಸಚಿವರನ್ನ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಭೇಟಿಯಾಗಿ ಮನವಿ ಮಾಡಿಕೊಂಡು ಬಂದಿದ್ದಾರೆ.
ಸದಾಶಿವನಗರದಲ್ಲಿರುವ ಗೃಹ ಸಚಿವರ ನಿವಾಸಕ್ಕೆ ತೆರಳಿದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು, ದೇಶದ ಬಹುದೊಡ್ಡ ಗಣೇಶೋತ್ಸವ ಎಂಬ ಖ್ಯಾತಿ ಪಡೆದಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸೆಪ್ಟೆಂಬರ್ 13 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಧ್ವನಿವರ್ಧಕ (ಡಿಜೆ) ಬಳಕೆಗೆ ಅವಕಾಶ ಕಲ್ಪಿಸುವಂತೆ ಹಾಗೂ ಶೋಭಾಯಾತ್ರೆ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಶ್ರೀಗಳ ಮನವಿಯನ್ನು ಪುರಸ್ಕರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ವೇಳೆ ಚಿತ್ರದುರ್ಗದ ಮಾಜಿ ಸಂಸತ್ ಸದಸ್ಯರಾದ ಬಿ.ಎನ್ ಚಂದ್ರಪ್ಪ ಇದ್ದರು.




