
ಮೊಳಕಾಲ್ಮುರು: ಗೌರಸಮುದ್ರ ಮಾರಮ್ಮದೇವಿ ದೊಡ್ಡ ಪರಿಷೆಗೆ ಕ್ಷಣಗಣನೆ
ಮೊಳಕಾಲ್ಮುರು: ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜನರನ್ನು ಒಂದೆಡೆ ಬೆಸೆಯುವ ಜಾತ್ರೆ ಎಂಬ ಖ್ಯಾತಿ ಹೊಂದಿರುವ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ ದೊಡ್ಡ ಪರಿಷೆ ಸೆಪ್ಟೆಂಬರ್ 15 ರಂದು ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
ಪ್ರತಿವರ್ಷ ಶ್ರಾವಣಮಾಸ ಆರಂಭದ ಪ್ರಥಮ ಮಂಗಳವಾರ ಇಲ್ಲಿ ದೇವಿಯ ದೊಡ್ಡ ಪರಿಷೆ ನಡೆಸಿಕೊಂಡು ಬರುವುದು ವಾಡಿಕೆ. ದೇವಿಯ ಮೂಲ ಆಂಧ್ರಪ್ರದೇಶದ ನಿಡಗಲ್ಲು ಆಗಿರುವ ಕಾರಣ ರಾಜ್ಯ ಮತ್ತು ಆಂಧ್ರದ ಸಾವಿರಾರು ಭಕ್ತರು ಜಂಟಿಯಾಗಿ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಕನ್ನಡ, ತೆಲುಗು ಭಾಷೆಗಳ ಜುಗಲ್ ಬಂದಿಯನ್ನು ಜಾತ್ರೆಯಲ್ಲಿ ಕಾಣಬಹುದು.
15 ದಿನ ಮುಂಚಿತವಾಗಿ ದೇವಿಯ ಒಪ್ಪಿಗೆ ಪಡೆದು ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಅನುಮತಿ ಕೋರುವ ದಿನ ಊರಿನಲ್ಲಿ ಸಾರು ಚೆಲ್ಲಲಾಗುತ್ತದೆ. ಇದಾದ ನಂತರ ಜಾತ್ರೆ ತನಕ ಗ್ರಾಮಸ್ಥರು ಸ್ನಾನ, ಅಡುಗೆ, ಉಡುಗೆ ತೊಡಿಗೆ ವಿಚಾರದಲ್ಲಿ ಹಲವು ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಜಾತ್ರೆ ಜತೆ ಗಣಪತಿ ಹಬ್ಬವೂ ಪ್ರತಿವರ್ಷ ಬರುತ್ತದೆ. ಆದರೆ, ಈ ಗ್ರಾಮದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಯನ್ನು ಯಾರೊಬ್ಬರೂ ಮಾಡದಿರುವುದು ವಿಶೇಷಗಳಲ್ಲಿ ಒಂದು ಎನ್ನುತ್ತಾರೆ ವಕೀಲ ಟಿ. ಚಂದ್ರಣ್ಣ.
ಮಾರಮ್ಮದೇವಿ ರೋಗ- ರುಜಿನಗಳ ನಿವಾರಕಿ ಎಂಬ ಖ್ಯಾತಿ ಹೊಂದಿದ್ದು, ನಾನಾ ಕಾರಣಕ್ಕಾಗಿ ಸಾವಿರಾರು ಭಕ್ತರು ಜಾತ್ರೆ ಸಮಯದಲ್ಲಿ ಹರಕೆಗಳನ್ನು ತೀರಿಸಲು ಆಗಮಿಸುತ್ತಾರೆ. ಇದರಲ್ಲಿ ಬೇವಿನಸೀರೆ ಹರಕೆ, ಬಾಯಿಗೆ ಬೀಗ, ಜಾನುವಾರು ಪ್ರದಕ್ಷಿಣೆ, ಕುರಿ, ಕೋಳಿ ಅರ್ಪಣೆ, ವಸ್ತ್ರ, ದವಸ, ಧಾನ್ಯಗಳ ಅರ್ಪಣೆ ಸೇರಿದಂತೆ ಇನ್ನಿತರ ಹರಕೆಗಳನ್ನು ತೀರಿಸುತ್ತಾರೆ. ಜಾತ್ರೆಯ ಬಹುತೇಕ ಆಚರಣೆಗಳು ಮಧ್ಯಾಹ್ನದ ವೇಳೆಗೆ ಪೂರ್ಣವಾಗುವ ಕಾರಣ ದೇವಿಗೆ ‘ಮಧ್ಯಾಹ್ನಮಾರಿ’ ಎಂಬ ಅನ್ವರ್ಥ ಹೆಸರೂ ಇದೆ ಎಂದು ಗ್ರಾಮದ ವಕೀಲ ಶಶಿಕುಮಾರ್ ತಿಳಿಸಿದರು.
ಆಂಧ್ರಪ್ರದೇಶದ ನಿಡಗಲ್ಲು ಮಾರಮ್ಮ ದೇವಿಯ ತವರೂರು. ಗೌರಸಮುದ್ರದ ಭಕ್ತೆಯೊಬ್ಬರ ಮನವಿಯಂತೆ ಗೌರಸಮುದ್ರಕ್ಕೆ ಬಂದು ದೇವಿ ನೆಲೆಸಿದಳು ಎಂಬ ಐತಿಹ್ಯವಿದೆ. ಪವಾಡಗಳ ಮೂಲಕ ಲೋಕಕಲ್ಯಾಣ ಕಾರ್ಯಗಳನ್ನು ಮಾಡಿದ ಮಾರಮ್ಮ ದೇವಿ ಭಕ್ತರ ಮನದಲ್ಲಿ ಸ್ಥಾನ ಪಡೆದುಕೊಂಡಳು ಎನ್ನಲಾಗಿದೆ. ಗೌರಸಮುದ್ರದಲ್ಲಿ ಮನೆಗಳಿಗೆ ಪಾಯ ತೆಗೆಯುವಾಗ ದೇವಿ ಕುರಿತ ಅನೇಕ ಐತಿಹ್ಯಗಳು ಸಿಕ್ಕಿವೆ ಎಂದು ಗ್ರಾಮಸ್ಥರು ಹೇಳಿದರು.
ದೊಡ್ಡ ಜಾತ್ರೆಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತರಲಾಗುತ್ತದೆ. ಜತೆಗೆ ದೇವಿಯ ಆಭರಣ, ವಸ್ತ್ರಗಳನ್ನು ಬುಡಕಟ್ಟು ಸಂಸ್ಕೃತಿಯ ವಾದ್ಯಗಳೊಂದಿಗೆ ತರುತ್ತಾರೆ. ತುಂಬಲಿಗೆ ದೇವಿಯನ್ನು ಕರೆ ತರುವ ದೃಶ್ಯವನ್ನು ನೋಡುವುದು ಜಾತ್ರೆಯ ಪ್ರಮುಖ ಘಟ್ಟ. ಸಂಜೆ ನಂತರ ಭಕ್ತರು ತುಂಬಲಿನಲ್ಲಿ ತಂಗಬಾರದು ಎಂಬ ವಾಡಿಕೆಯಿದ್ದು, ಪರೀಕ್ಷಿಸಲು ತಂಗಿದ್ದ ಭಕ್ತನೊಬ್ಬ ಅಲ್ಲಿಯೇ ಮೃತಪಟ್ಟ ಎಂಬ ಐತಿಹ್ಯವಿದೆ.
ದೊಡ್ಡ ಜಾತ್ರೆ ನಡೆದ ಒಂದು ತಿಂಗಳ ಕಾಲ ಸುತ್ತಮುತ್ತಲಿನ ಜಿಲ್ಲೆಗಳ ಗ್ರಾಮಗಳಲ್ಲಿ ಮಾರಮ್ಮದೇವಿ ಜಾತ್ರೆಯನ್ನು ಆಚರಿಸಿ ಬಾಡೂಟ ಹಾಕುತ್ತಾರೆ. ಐದನೇ ಮಂಗಳವಾರ ಮರಿ ಪರಿಷೆ ಮೂಲಕ ಜಾತ್ರೆಗೆ ತೆರೆ ಬೀಳಲಿದೆ ಎಂದು ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಓಬಣ್ಣ ತಿಳಿಸಿದರು.
ಭಾನುವಾರ ಹುತ್ತಕ್ಕೆ ಅಭಿಷೇಕ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗಿದೆ. ಸೆ.14 ರಂದು (ಸೋಮವಾರ) ದೇವಿಯ ಮೂಲ ಸನ್ನಿಧಿಗೆ ಅಭಿಷೇಕ ನಡೆಯಲಿದೆ. 15ರಂದು (ಮಂಗಳವಾರ) ತುಂಬಲು ಪ್ರದೇಶದಲ್ಲಿ ದೇವಿ ಜಾತ್ರೆ ನಡೆಯಲಿದೆ. ಸಂಜೆ ಗ್ರಾಮಕ್ಕೆ ದೇವಿ ವಾಪಸ್ ಆಗಲಿದ್ದು, ಮೆರವಣಿಗೆ ನಂತರ ಗುಡಿದುಂಬಿಸಲಾಗುವುದು. 16 ರಂದು ಸಂಜೆ ದೇವಸ್ಥಾನ ಮಂಭಾಗದಲ್ಲಿ ದೇವಿಗೆ ಸಿಡಿ ಮೂಲಕ ಭಕ್ತಿ ಸಮರ್ಪಣೆ ನಡೆಯಲಿದೆ. 17 ರಂದು ಸಂಜೆ ಓಕಳಿ, ಮಹಾಮಂಗಳಾರತಿ, ದೇವರನ್ನು ಗರ್ಭಗುಡಿಗೆ ಪ್ರವೇಶಿಸುವ ಮೂಲಕ ಜಾತ್ರೆಗೆ ತೆರೆಬೀಳಲಿದೆ. ಮರಿಪರಿಷೆಯು ಅ.10 ರಂದು ನಿಗದಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರತಿವರ್ಷ ದೇವಿಯ ತಮ್ಮನಾದ ಬೊಮ್ಮಲಿಂಗೇಶ್ವರ ಸ್ವಾಮಿ ಕಡೆಯವರಾದ ಕೋನಸಾಗರದ ನಾಯಕ ಜನಾಂಗದ ಬುಟುಗಲು ಬೆಡಗಿನ ಎನಮಲರು ಮೇಟಿ ವಂಶಸ್ಥರು ಸಿಡಿ ಉಸ್ತುವಾರಿ ನಡೆಸಿಕೊಂಡು ಬಂದಿದ್ದಾರೆ. ಬುಧವಾರ ಬೆಳಿಗ್ಗೆ ಕೋನಸಾಗರದ ಬೊಮ್ಮ ಲಿಂಗೇಶ್ವರ ದೇವಸ್ಥಾನದಲ್ಲಿ ಸಿಡಿ ಆಡುವ ವ್ಯಕ್ತಿಯನ್ನು ಪೂಜೆ ಮಾಡಿಕೊಂಡು ಕಾಲ್ನಡಿಗೆಯಲ್ಲಿ ಗೌರಸಮುದ್ರಕ್ಕೆ ಕರೆದುಕೊಂಡು ಹೋಗಲಾಗುವುದು. ಈ ವರ್ಷ ಕೋನಸಾಗರದ ಹನುಮಂತಪ್ಪ ಅವರ ಪುತ್ರ ರಾಮು ಎನ್ನುವವರು ಸಿಡಿ ಆಡಲಿದ್ದಾರೆ ಎಂದು ರೇಷ್ಮೆ ವೀರೇಶ್ ಮಾಹಿತಿ ನೀಡಿದರು.