
ನರಸಿಂಹರಾಜಪುರ: 13 ಅಲೆಮಾರಿ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ
ನರಸಿಂಹರಾಜಪುರ: ಅಲೆಮಾರಿ ಜನಾಂಗದವರಿಗೆ ಕಾಯಂ ನೆಲೆ ಕಲ್ಪಿಸುವ ದಶಕಗಳ ಕನಸು ನನಸಾಗಿದೆ. ತಾಲ್ಲೂಕಿನ ಅರಳಿಕೊಪ್ಪ ಗ್ರಾಮದ ಸರ್ವೆ ನಂ.108ರಲ್ಲಿ ಗುರುತಿಸಲಾಗಿರುವ ಜಾಗದಲ್ಲಿ 13 ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ದೊರೆತಿದೆ.
ತಾಲ್ಲೂಕಿನ ಬಿ.ಎಚ್. ಕೈಮರ ಗ್ರಾಮದ ವ್ಯಾಪ್ತಿಯ ಖಾಸಗಿ ಜಾಗ ದಲ್ಲಿ ಆರಂಭದಲ್ಲಿ 15ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದವು. ಹಾವು ಹಿಡಿದುಪ್ರದರ್ಶಿಸಿ ಭಿಕ್ಷೆ ಬೇಡುವುದು ಈ ಕುಟುಂಬಗಳ ವೃತ್ತಿಯಾಗಿತ್ತು. ಕಾಲ ಬದಲಾದಂತೆ ವೃತ್ತಿಯನ್ನೂ ಬದಲಿಸಿ ಕೊಂಡು ಬದುಕು ಸಾಗಿಸುತ್ತಿದ್ದರು.
ಬಿ.ಎಚ್. ಕೈಮರದಲ್ಲಿ ವಾಸವಾಗಿದ್ದ ಕುಟುಂಬಗಳಿಗೆ ತಾಲ್ಲೂಕಿನ ಬಾಳೆಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗುವಾನಿ ಸರ್ಕಲ್ ಬಳಿಯ ನಿವೇಶನದಲ್ಲಿ ಟೆಂಟ್ ನಿರ್ಮಿಸಿಕೊಂಡು ವಾಸಿಸಲು ಅವಕಾಶ ಕಲ್ಪಿಸಲಾಗಿತ್ತು. ಪಡಿತರ ಚೀಟಿ, ಆಧಾರ್ ಕಾರ್ಡ್, ಅನಿಲ ಸಂಪರ್ಕ ಹಾಗೂ ಸಾಮೂಹಿಕ ಶೌಚಾಲಯದ ಸೌಲಭ್ಯವನ್ನೂ ಒದಗಿಸಲಾಗಿತ್ತು.
ಆದರೆ ಮನೆ ನಿರ್ಮಿಸಿಕೊಳ್ಳಲು ಅರಣ್ಯ ಮತ್ತು ಕಂದಾಯ ಇಲಾಖೆ ಜಾಗದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಹಕ್ಕುಪತ್ರ ಪಡೆಯಲು ಸಾಧ್ಯವಾಗದೆ ಸ್ವಂತ ಮನೆ ಹೊಂದುವ ಕನಸು ಈಡೇರಿರಲಿಲ್ಲ. ಸುಮಾರು 15 ವರ್ಷಗಳ ಕಾಲ ಇದೇ ಸ್ಥಳದಲ್ಲಿ ಕುಟುಂಬಗಳು ವಾಸವಾಗಿದ್ದವು.
ಮೂಢನಂಬಿಕೆಗೆ ಹೆದರಿ ಸ್ಥಳಾಂತರ: ಈ ಸ್ಥಳದಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಅಲೆಮಾರಿ ಜನಾಂಗದ 29ಕ್ಕೂ ಹೆಚ್ಚು ಮಂದಿ ಅಸಹಜವಾಗಿ ಮೃತಪಟ್ಟಿದ್ದರು. ಇದಕ್ಕೆ ಮಾಟ– ಮಂತ್ರವೇ ಕಾರಣ ಎಂದು ಜ್ಯೋತಿಷಿ ಯೊಬ್ಬರು ಹೇಳಿದ್ದನ್ನು ನಂಬಿದ ಕುಟುಂಬಗಳು, ‘ಇಲ್ಲಿಯೇ ಉಳಿದರೆ ಇನ್ನಷ್ಟು ಮಂದಿ ಮೃತಪಟ್ಟಾರು’ ಎಂಬ ಭಯದಿಂದ 2018ರ ಜುಲೈ 26ರಂದು ಸಂಜೆ 6 ಗಂಟೆಯೊಳಗೆ ಬಡಾವಣೆಯನ್ನು ಖಾಲಿ ಮಾಡಿದ್ದರು.
ಈ ಘಟನೆ 2018ರ ಜುಲೈ 27ರಂದು ‘ಪ್ರಜಾವಾಣಿ’ಯಲ್ಲಿ ಈ ಸುದ್ದಿ ಪ್ರಕಟವಾಗತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಕೊಪ್ಪ ಮತ್ತು ತೀರ್ಥಹಳ್ಳಿ ಭಾಗಗಳಿಗೆ ವಲಸೆ ಹೋಗಿದ್ದ ಅಲೆಮಾರಿ ಜನಾಂಗದವರನ್ನು ಮನವೊಲಿಸಿ, ತಾಲ್ಲೂಕಿಗೆ ಕರೆತಂದಿತು. ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಕೊಪ್ಪದಲ್ಲಿ ಬಾಗಿಲು ಮುಚ್ಚಿದ್ದ ಸರ್ಕಾರಿ ಶಾಲೆಯ ಆವರಣದಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಯಿತು.
ಒಂದು ಎಕರೆ ಮೀಸಲು: ತಾಲ್ಲೂಕು ಆಡಳಿತದ ನಿರಂತರ ಪ್ರಯತ್ನದ ಫಲವಾಗಿ ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದ ಸರ್ವೆ ನಂ. 108ರಲ್ಲಿ ಒಂದು ಎಕರೆ ಜಾಗ ಗುರುತಿಸಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಹಾವಾಡಿಗರ ವಸತಿ ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸಿ ಜಿಲ್ಲಾಡಳಿತ 2023ರ ಮೇ 5ರಂದು ಆದೇಶ ಹೊರಡಿಸಿತು.
ತಾಲ್ಲೂಕು ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ₹3 ಲಕ್ಷ ವೆಚ್ಚ ದಲ್ಲಿ ನಿವೇಶನ ಗುರುತಿಸುವ ಕಾಮಗಾರಿ ಕೈಗೊಳ್ಳಲಾಯಿತು. ಜತೆಗೆ ಸಮುದಾಯ ಶೌಚಾಲಯ ನಿರ್ಮಿಸಲಾಯಿತು.
ಜಾತಿ ಪ್ರಮಾಣಪತ್ರದ ಸಮಸ್ಯೆ: ಅಲೆಮಾರಿ ಜನಾಂಗದವರಿಗೆ ಮನೆ ನಿರ್ಮಿಸಿಕೊಳ್ಳಲು ಅಗತ್ಯವಿದ್ದ ಜಾತಿ ಪ್ರಮಾಣಪತ್ರ ಪಡೆಯುವುದು ಮತ್ತೊಂದು ಸವಾಲಾಗಿತ್ತು. ಜನಾಂಗದವರು ವಾಸಿಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ಹಿಂದಿನ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಅವರು ಈ ಸಮಸ್ಯೆ ಗಮನಿಸಿದರು.
ಚೆನ್ನರಾಯಪಟ್ಟಣದಲ್ಲಿ ಅಲೆಮಾರಿ ಜನಾಂಗದವರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿರುವುದರ ಕುರಿತು ಮಾಹಿತಿ ಪಡೆದು, ಅಲ್ಲಿಂದ ಕಂದಾಯ ಇಲಾಖೆಯ ಮೂಲಕ ನೈಜತೆಯ ಪ್ರಮಾಣಪತ್ರ ತರಿಸಿ ಜಾತಿ ಪ್ರಮಾಣಪತ್ರ ಕೊಡಿಸುವ ವ್ಯವಸ್ಥೆ ಮಾಡಿದರು.
ಜಾತಿ ಪ್ರಮಾಣಪತ್ರ ದೊರೆತ ಬಳಿಕ ಕಂದಾಯ ಇಲಾಖೆ 13 ಕುಟುಂಬಗಳಿಗೆ ಹಕ್ಕುಪತ್ರ ಸಿದ್ಧಪಡಿಸಿತು. ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ. ರಾಜೇಗೌಡ ಅವರು ಕುಟುಂಬದವರಿಗೆ ಹಕ್ಕುಪತ್ರಗಳನ್ನು ಹಸ್ತಾಂತರಿಸಿದರು.