
ಚಿತ್ರದುರ್ಗ: ವಿನಾಯಕನ ಸ್ವಾಗತಕ್ಕೆ ಕೋಟೆನಾಡು ಸಜ್ಜು; ಪಿಒಪಿ ಮೂರ್ತಿಗಳ ಹಾವಳಿ
ಚಿತ್ರದುರ್ಗ: ಬರದ ಛಾಯೆಯ ನಡುವೆಯೇ ಭದ್ರಾ ನೀರು ಜಿಲ್ಲೆಗೆ ಹರಿದು ಬಂದಿರುವುದು ಕೋಟೆನಾಡಿನ ಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಇದರ ಬೆನ್ನಲ್ಲೇ ಜಿಲ್ಲೆಯಾದ್ಯಂತ ಗೌರಿ–ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಯುವಜನರಲ್ಲಿ ಹಬ್ಬದ ಉತ್ಸಾಹ ಹೆಚ್ಚಿದ್ದು, ಮನೆಮನೆಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಸಿದ್ಧತೆಗಳು ಜೋರಾಗಿವೆ. ಆದರೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವ ಕುಟುಂಬಗಳ ನೋವು ಮಾತ್ರ ಮುಂದುವರಿದಿದೆ.
ಪ್ರತಿ ವರ್ಷವೂ ಅಧಿಕಾರಿಗಳು ಒಂದೇ ವಿಷಯ ಹೇಳುತ್ತಾರೆ. ಆದರೆ ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸುವವರ ವಿರುದ್ಧ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಣ್ಣಿನ ಮೂರ್ತಿಗಳನ್ನು ತಯಾರಿಸುವವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಗಣೇಶನ ಬಳಗಗಳು ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುತ್ತಿವೆ. ಪಿಒಪಿ ಮೂರ್ತಿಗಳ ಬಳಕೆ ಹೆಚ್ಚುತ್ತಿರುವುದರಿಂದ ಪಾರಂಪರಿಕವಾಗಿ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದ ಕೆಲವು ಕುಟುಂಬಗಳು ವೃತ್ತಿಯಿಂದ ಹಿಂದೆ ಸರಿದಿವೆ. ಇದರಿಂದ ಮಣ್ಣಿನ ಗಣಪನ ತಯಾರಿಕೆಯ ಕುಲಕಸುಬು ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
ಪಿಒಪಿ ಮೂರ್ತಿಗಳನ್ನು ಕಡಿಮೆ ಅವಧಿಯಲ್ಲಿ ಸಿದ್ಧಪಡಿಸಬಹುದು. ಆದರೆ, ಮಣ್ಣಿನ ಗಣೇಶ ಮೂರ್ತಿಯೊಂದನ್ನು ತಯಾರಿಸಲು ಕನಿಷ್ಠ ಎರಡು–ಮೂರು ದಿನ ಬೇಕಾಗುತ್ತದೆ. ಮಣ್ಣಿನ ಮೂರ್ತಿಗಳಿಗೆ ಹೋಲಿಸಿದರೆ ಪಿಒಪಿ ಮೂರ್ತಿಗಳ ಬೆಲೆಯೂ ಕಡಿಮೆ. ಹೀಗಾಗಿ ಮಾರುಕಟ್ಟೆಯಲ್ಲಿ ಎರಡರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ವರ್ಷದಿಂದ ವರ್ಷಕ್ಕೆ ಪರಿಸರಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಚಿಕ್ಕ ಹಾಗೂ ದೊಡ್ಡ ಮೂರ್ತಿಗಳು ಸೇರಿ ಅಂದಾಜು 500 ರಿಂದ 600 ಮೂರ್ತಿಗಳನ್ನು ತಯಾರಿಸುವುದೇ ಹೆಚ್ಚಾಗಿದೆ. ಪಿಒಪಿ ಮೂರ್ತಿಗಳಿಂದ ಮೂಲ ಕಸಬುದಾರರಿಗೆ ತೊಂದರೆಯಾಗುತ್ತಿದೆ. ಹೊರಗಡೆಯಿಂದ ಪಿಒಪಿ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸುವುದಕ್ಕೆ ಸಂಬಂಧಿಸಿದ ಇಲಾಖೆಗಳು ಕಡಿವಾಣ ಹಾಕಬೇಕಿದೆ.
ಜಿಲ್ಲೆಯಲ್ಲಿ ಒಟ್ಟು 1,783 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 3ನೇ ದಿನ ಅಂದಾಜು 927, 5ನೇ ದಿನ 453 ಗಣಪತಿ ಮೂರ್ತಿಗಳ ವಿಸರ್ಜನೆ ಮೆರವಣಿಗೆ ನಡೆಯಲಿದೆ.
ಹೊಳಲ್ಕೆರೆ: ಪಟ್ಟಣದ ಈಶ್ವರಪ್ಪ ಅವರ ಕುಟುಂಬವು ನೈಸರ್ಗಿಕ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಗೆ ಜೀವನ ಮುಡಿಪಾಗಿಸಿದೆ.
ಚಿಕ್ಕಮಗಳೂರು ಭಾಗದಿಂದ ಜೇಡಿ ಮಣ್ಣನ್ನು ತರಿಸಿ ಹದಗೊಳಿಸಿ ಗಣಪತಿ ಮೂರ್ತಿ ತಯಾರಿಸುತ್ತಾರೆ. ಮುಕ್ಕಾಲು ಅಡಿಯಿಂದ 7 ಅಡಿ ಎತ್ತರದ ಗಣಪತಿ ಮೂರ್ತಿಗಳನ್ನು ಸಿದ್ಧಗೊಳಿಸುತ್ತಾರೆ. ಇವರು ಪ್ರತಿ ವರ್ಷ 300 ಗಣಪ, 50 ಗೌರಿ ಮೂರ್ತಿಗಳನ್ನು ತಯಾರು ಮಾಡುತ್ತಾರೆ. ಮುಕ್ಕಾಲು ಅಡಿ ಗಣಪನಿಗೆ ₹ 300 ಇದ್ದರೆ, 7 ಅಡಿ ಗಣಪನಿಗೆ ₹ 20,000 ಬೆಲೆ ಇದೆ.
‘ಗಣಪತಿ ಮೂರ್ತಿ ತಯಾರಿಕೆ ಮತ್ತು ಮಾರಾಟ ಕೇವಲ ವ್ಯಾಪಾರವಲ್ಲ. ಅದನ್ನು ಶಾಸ್ತ್ರೋಕ್ತವಾಗಿ ಮಾಡಬೇಕು. ನಮ್ಮಲ್ಲಿ ಗಣಪತಿ ಖರೀದಿ ಮಾಡುವವರು ಮಡಿಲಕ್ಕಿ ತಂದು ಪೂಜೆ ಮಾಡಿಕೊಂಡು ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ’ ಎನ್ನುತ್ತಾರೆ ಗಣಪತಿ ತಯಾರಕ ಪ್ರಸನ್ನ.
ಹಬ್ಬದ ಮೇಲೆ ಮಾರಮ್ಮನ ನೆರಳು
ಮೊಳಕಾಲ್ಮುರು: ಗಣಪತಿ ಹಬ್ಬವನ್ನು ತಾಲ್ಲೂಕಿನಲ್ಲಿ ತುಂಬಾ ಅದ್ದೂರಿಯಾಗಿ ಆಚರಿಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿಲ್ಲ. ಗಣಪತಿ ಹಬ್ಬದ ಜತೆ ಜತೆಗೆ ಪ್ರತಿವರ್ಷವೂ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ನಡೆಯುವುದೇ ಇದಕ್ಕೆ ಮುಖ್ಯ ಕಾರಣ.
ಗೌರಸಮುದ್ರ ಮಾರಮ್ಮ ಈ ಭಾಗದ ಬಹುತೇಕರ ಮನೆ ದೇವತೆ, ಅದರಲ್ಲೂ ಪರಿಶಿಷ್ಟ ಜಾತಿ, ಪಂಗಡದವರು ಹೆಚ್ಚು ಪೂಜಿಸುತ್ತಾರೆ. ಈ ಕಾರಣಕ್ಕಾಗಿ ಮನೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ವಿರಳ. ಊರಿನಲ್ಲಿ ಸಾಮೂಹಿಕವಾಗಿ ಕೂರಿಸುವ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ.
ಹಬ್ಬಕ್ಕೆ ಸೀಮಿತವಾದ ಕಸುಬು
ಚಿಕ್ಕಜಾಜೂರು: ವರ್ಷದಲ್ಲಿ ಗೌರಿ ಗಣೇಶ ಹಬ್ಬದಂದು ಮಾತ್ರ ನಮಗೆ ಕೆಲಸ. ಉಳಿದ ಅವಧಿಯಲ್ಲಿ ಕೃಷಿ ಮತ್ತಿತರ ಕೆಲಸಗಳೇ ಗತಿ ಎಂಬುದು ಮಣ್ಣಿನ ಗಣೇಶ ಮೂರ್ತಿ ತಯಾರಕರ ಮಾತಾಗಿದೆ.
‘ನಮ್ಮ ಪೂರ್ವಿಕರು ಜೇಡಿ ಮಣ್ಣಿನಿಂದ ಮಡಿಕೆ, ಕುಡಿಕೆ, ದೀಪಗಳು ಮತ್ತಿತರ ಅಲಂಕಾರಿಕ ವಸ್ತುಗಳನ್ನು ತಯಾರಿಸಿ, ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ, ಈಗ ಜೇಡಿ ಮಣ್ಣಿನ ವಸ್ತುಗಳಿಗೆ ಬೇಡಿಕೆ ಇಲ್ಲದಂತಾಗಿ, ನಮ್ಮ ಕಲೆ ಗೌರಿ– ಗಣೇಶ ಹಬ್ಬಕ್ಕೆ ಸೀಮಿತವಾಗುತ್ತಿದೆ’ ಎಂಬುದು ಗಣಪತಿ ಮೂರ್ತಿ ತಯಾರಕರಾದ ರುದ್ರೇಶ್ ಹಾಗೂ ವೀರೇಶ್ ಹೇಳಿದರು.
‘ಮೊದಲು ಬಣ್ಣ ಹಾಗೂ ಇತರ ವಸ್ತುಗಳ ಬೆಲೆ ಕಡಿಮೆ ಇತ್ತು. ಈಗ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಮನೆಗಳಲ್ಲಿ ಮೂರ್ತಿಗಳನ್ನು ತಯಾರಿಸಿ, ಪಟ್ಟಣಗಳಲ್ಲಿ ಮಳಿಗೆಗಳನ್ನು ಬಾಡಿಗೆ ಪಡೆದು ಇಡಬೇಕು. ಮಣ್ಣು, ಬಣ್ಣ, ವಸ್ತ್ರಗಳು, ಅಲಂಕಾರಿಕ ಸಾಮಗ್ರಿಗಳ ದರ ಏರಿಕೆಯಿಂದಾಗಿ, ಮೂರ್ತಿಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. 4.5 ಅಥವಾ 5 ಅಡಿ ಎತ್ತರದ ಗಣಪತಿ ಮೂರ್ತಿಗಳಿಗೆ ಕನಿಷ್ಠವೆಂದರೂ ₹ 3,500 ರಿಂದ ₹ 4,500ರವರೆಗೆ ಖರ್ಚು ತಗುಲುತ್ತಿದೆ’ ಎಂದರು.
ಗಣೇಶೋತ್ಸವಕ್ಕೆ ಕುಗ್ಗದ ಉತ್ಸಾಹ
ಹಿರಿಯೂರು: ಗಣಪತಿ ಪ್ರತಿಷ್ಠಾಪನೆಗೆ ಸರ್ಕಾರ ಕಠಿಣ ನಿಯಮಾವಳಿಗಳನ್ನು ರೂಪಿಸಿದ್ದರೂ, ಭಕ್ತರಲ್ಲಿ ವಿಶೇಷವಾಗಿ ಯುವಕರಲ್ಲಿ ವರ್ಷದಿಂದ ವರ್ಷಕ್ಕೆ ಉತ್ಸಾಹ ಹೆಚ್ಚುತ್ತಿದೆ.
ನಗರದ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಣ್ಣಿನ ಗಣಪನ ಮೂರ್ತಿಗಳ ದರ ಹೆಚ್ಚಾಗಿದೆ ಎಂದು ಉತ್ಸವ ಸಮಿತಿಯವರು ಹೇಳಿದರು. ‘ಮಣ್ಣಿನ ಗಣಪನನ್ನು ಬಿರುಕು ಬರದಂತೆ ನಿರ್ಮಿಸುವುದು, ಮಾಸದ ರೀತಿಯಲ್ಲಿ ಬಣ್ಣ ಹಚ್ಚುವುದು ದೊಡ್ಡ ಸವಾಲು. ನಾವು ಖರೀದಿಸುವ ಎಲ್ಲಾ ವಸ್ತುಗಳ ಬೆಲೆಗಳು ಏರಿವೆ. ಹೀಗಾಗಿ ಗಣಪನ ಮೂರ್ತಿಗಳ ದರವೂ ಹೆಚ್ಚಾಗಿದೆ’ ಎನ್ನುತ್ತಾರೆ ಸಿರಾದ ರಾಮನಹಳ್ಳಿಯ ರಮೇಶ್.
ತಾತ್ಕಾಲಿಕ ನೀರಿನ ತೊಟ್ಟಿ ವ್ಯವಸ್ಥೆ
ಗಣೇಶ ಮೂರ್ತಿಗಳ ವಿಸರ್ಜನೆಗೆ ನಗರಸಭೆ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ನಿರ್ಮಿಸಿದೆ. ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದ ಮುಂಭಾಗ, ಐಯುಡಿಪಿ ಬಡಾವಣೆ ರಾಜಕುಮಾರ್ ಪಾರ್ಕ್, ಏಕನಾಥೇಶ್ವರಿ ಪಾದಗುಡಿ, ಜೆಸಿಆರ್ ಗಣೇಶ ದೇವಸ್ಥಾನ, ಸಿಹಿನೀರು ಹೊಂಡದ ಆವರಣ, ಪತಂಜಲಿ ಆಸ್ಪತ್ರೆ, ಕೆಳಗೋಟೆ ಚನ್ನಕೇಶವಸ್ವಾಮಿ ದೇವಸ್ಥಾನ, ತುರುವನೂರು ರಸ್ತೆ ತಿಪ್ಪೇರುದ್ರಸ್ವಾಮಿ ದೇವಸ್ಥಾನ, ದವಳಗಿರಿ ಬಡಾವಣೆ ಗಣೇಶ ದೇವಸ್ಥಾನ, ಗೋಪಾಲಪುರ ನೀರಿನ ಟ್ಯಾಂಕ್, ಗುಮಾಸ್ತರ ಕಾಲೊನಿ, ಜೋಗಿಮಟ್ಟಿ ರಸ್ತೆ ತಿಪ್ಪಿನಘಟ್ಟಮ್ಮ ದೇವಸ್ಥಾನ, ಚಂದ್ರವಳ್ಳಿ ಕೆರೆ ಹತ್ತಿರ ಸ್ಥಳ ನಿಗದಿಗೊಳಿಸಿದೆ.