
ಇರಾನ್ ವ್ಯಾಪಾರಕ್ಕೆ ಟ್ರಂಪ್ ಕುಣಿಕೆ: ಭಾರತದ ರಫ್ತು ವಲಯಕ್ಕೂ ಹೊಡೆತ ಬೀಳಲಿದೆಯೇ?
ನವದೆಹಲಿ: ಇರಾನ್ ವಿರುದ್ಧ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅತ್ಯಂತ ಕಠಿಣ ಹಾಗೂ ಮಾರಕ ಆರ್ಥಿಕ ಸಮರವನ್ನು ಅಮೆರಿಕ ಘೋಷಿಸಿದೆ.
ಇರಾನ್ ವಿರುದ್ದ ಆರ್ಥಿಕ ಯುದ್ಧ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ದೇಶವನ್ನು ಏಕಾಂಗಿಗೊಳಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಇರಾನ್‌ಗೆ ಯಾವುದೇ ರೀತಿಯ ನೆರವು ನೀಡುವ ದೇಶಗಳು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದರಿಂದ ಇರಾನ್ ಜೊತೆ ಆರ್ಥಿಕ ಮತ್ತು ವ್ಯಾಪಾರ ಸಂಬಂಧ ಹೊಂದಿರುವ ರಾಷ್ಟ್ರಗಳ ವಿರುದ್ಧವೂ ಟ್ರಂಪ್ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇರಾನ್ ಮೇಲೆ ಆರ್ಥಿಕ ದಿಗ್ಬಂಧನ:
ಇರಾನ್‌ಗೆ ಆರ್ಥಿಕ ದಿಗ್ಬಂಧನ ವಿಧಿಸುವ ನಿಟ್ಟಿನಲ್ಲಿ ಅಮೆರಿಕ ಇಂತಹ ಕಠಿಣ ಹೆಜ್ಜೆಯನ್ನು ಇರಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ಇರಾನ್ ಇಸ್ಲಾಮಿಕ್ ಗಣರಾಜ್ಯಕ್ಕೆ ಒಪ್ಪಂದ ಮಾಡಿಕೊಳ್ಳಲು ನನ್ನಷ್ಟು ದೊಡ್ಡ ಅವಕಾಶವನ್ನು ಯಾರೂ ನೀಡಿಲ್ಲ. ಆದರೆ ದುರಂತವೆೆಂದರೆ, ಅವರು ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಇಂದು ನಾನು ಯಾವುದೇ ದೇಶದ ವಿರುದ್ಧ ಇದುವರೆಗೆ ಕೈಗೊಳ್ಳದ ಅತ್ಯಂತ ಕಠಿಣ ಆರ್ಥಿಕ ಕಾರ್ಯಾಚರಣೆಯನ್ನು ಘೋಷಿಸುತ್ತಿದ್ದೇನೆ. ಇದು ಹಿಂದೆಂದೂ ಕಾಣದ ‘ಆರ್ಥಿಕ ಸಮರ’ ಮತ್ತು ‘ಪ್ರತ್ಯೇಕೀಕರಣವಾಗಲಿದೆ’ ಎಂದಿದ್ದಾರೆ.
‘ಇರಾನ್‌ನ ಹಣಕಾಸು ಸಂಸ್ಥೆಗಳು, ವ್ಯಾಪಾರ-ವಹಿವಾಟು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಸಂಸ್ಥೆಗಳಿಗೆ ಯಾವುದೇ ರೀತಿಯ ನೆರವು ನೀಡುವ ದೇಶಗಳ ಮೇಲೆಯೂ ಕಠಿಣ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಇದನ್ನು ‘ಎಕನಾಮಿಕ್ ಡಿ-ಡೇ’ ಎಂದು ಉಲ್ಲೇಖಿಸಿದ್ದಾರೆ.
ಅಂದರೆ ಒಂದು ನಿರ್ದಿಷ್ಟ ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ಬುಡಮೇಲು ಮಾಡಲು ಹಾಗೂ ಜಾಗತಿಕ ಮಟ್ಟದಲ್ಲಿ ಅದನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲು ಕೈಗೊಳ್ಳುವ ಸರ್ವಾಂಗೀಣ, ಸಂಘಟಿತ ಮತ್ತು ಅತ್ಯಂತ ಕಠಿಣ ಆರ್ಥಿಕ ದಿಗ್ಬಂಧನವಾಗಿದೆ.
ಈ ಪದಪ್ರಯೋಗವು ಎರಡನೇ ಮಹಾಯುದ್ಧದ ಪ್ರಸಿದ್ಧ ‘ಡಿ-ಡೇ’ ಪರಿಕಲ್ಪನೆಯನ್ನು ಆಧರಿಸಿದೆ. ಆ ದೇಶವನ್ನು ಅಂತರರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಜಾಗತಿಕ ವ್ಯಾಪಾರದಿಂದ ಪ್ರತ್ಯೇಕಿಸಲು ಮಿತ್ರರಾಷ್ಟ್ರಗಳನ್ನು ಒಗ್ಗೂಡಿಸಿ ಕಠಿಣ ಸಮರ ಸಾರಲಾಗುತ್ತದೆ.
ಆ ನಿರ್ದಿಷ್ಟ ದೇಶದ ಜತೆ ವ್ಯಾಪಾರ, ಬ್ಯಾಂಕಿಂಗ್, ವಿಮಾನಯಾನ ಅಥವಾ ಯಾವುದೇ ವ್ಯವಹಾರ ನಡೆಸುವ ಮೂರನೇ ದೇಶಗಳ ಮೇಲೂ ಅಮೆರಿಕದ ಕಠಿಣ ನಿರ್ಬಂಧ ಮತ್ತು ಆರ್ಥಿಕ ದಂಡ ವಿಧಿಸುವ ಸಾಧ್ಯತೆಯೂ ಇದೆ.
‘ಇರಾನ್‌ನ ಪ್ರಮುಖ ಆರ್ಥಿಕ ಮೂಲಗಳಾದ ತೈಲ ಕಳ್ಳಸಾಗಣೆ, ನಗದು ವರ್ಗಾವಣೆ, ಹಣ ವಿನಿಮಯ ಸಂಸ್ಥೆಗಳು ಮತ್ತು ಬೇನಾಮಿ ಕಂಪನಿಗಳ ಚಟುವಟಿಕೆಗಳು ತಕ್ಷಣವೇ ನಿಲ್ಲಿಸಬೇಕು’ ಎಂದೂ ಟ್ರಂಪ್ ಎಚ್ಚರಿಸಿದ್ದಾರೆ.
ಭಾರತಕ್ಕೆ ಏಕೆ ಮಹತ್ವದ್ದು?
ಭಾರತ ಮತ್ತು ಇರಾನ್ ನಡುವೆ ದಶಕಗಳಿಂದಲೂ ಗಾಢವಾದ ವ್ಯಾಪಾರ ಹಾಗೂ ರಾಜತಾಂತ್ರಿಕ ಬಾಂಧವ್ಯವಿದೆ. ಈ ಸಂಬಂಧವು ಕೇವಲ ಇಂಧನ ಅಥವಾ ಕಚ್ಚಾತೈಲ ಖರೀದಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಭಾರತೀಯ ರಫ್ತು ಮಾರುಕಟ್ಟೆಯಲ್ಲಿ ಇರಾನ್ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ.
ಕೃಷಿ ಉತ್ಪನ್ನಗಳ ರಫ್ತು:
ಭಾರತದಿಂದ ಇರಾನ್‌ಗೆ ಭಾರಿ ಪ್ರಮಾಣದಲ್ಲಿ ಬಾಸ್ಮತಿ ಅಕ್ಕಿ ಮತ್ತು ಚಹಾ ರಫ್ತಾಗುತ್ತದೆ. ಇರಾನ್ ಬಾಸ್ಮತಿ ಅಕ್ಕಿಯ ಅತಿ ದೊಡ್ಡ ಆಮದುದಾರರಲ್ಲಿ ಒಂದಾಗಿದ್ದು, ವ್ಯಾಪಾರಕ್ಕೆ ಅಡ್ಡಿಯಾದರೆ ಭಾರತೀಯ ಕೃಷಿಕರು ಹಾಗೂ ರಫ್ತುದಾರರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಇಂಧನ ವಲಯಕ್ಕಷ್ಟೇ ಸೀಮಿತವಲ್ಲ:
ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧವು ಕೇವಲ ಇಂಧನ ವಲಯಕ್ಕಷ್ಟೇ ಸೀಮಿತವಾಗಿಲ್ಲ. ಭಾರತೀಯ ರಾಯಭಾರ ಕಚೇರಿಯ ಮಾಹಿತಿ ಪ್ರಕಾರ, ಇರಾನ್‌ಗೆ ಬಾಸ್ಮತಿ ಅಕ್ಕಿ, ಚಹಾ, ಸಕ್ಕರೆ, ತಾಜಾ ಹಣ್ಣುಗಳು, ಔಷಧಿ, ಔಷಧೀಯ ಉತ್ಪನ್ನಗಳು, ಮಸಾಲೆ ಪದಾರ್ಥಗಳು, ಧಾನ್ಯಗಳು ಹಾಗೂ ಆಹಾರೋತ್ಪನ್ನಗಳು ರಫ್ತು ಆಗುತ್ತವೆ. ಮತ್ತೊಂದೆಡೆ ಇರಾನ್‌ನಿಂದ ಭಾರತಕ್ಕೆ ಪಿಸ್ತಾ, ಖರ್ಜೂರ, ಸೇಬು ಮತ್ತು ಕಿವಿ ಹಣ್ಣುಗಳು ಆಮದಾಗುತ್ತವೆ.
ಔಷಧ ಮತ್ತು ರಾಸಾಯನಿಕ ವಲಯ:
ಭಾರತದಲ್ಲಿ ತಯಾರಾಗುವ ಔಷಧಗಳು, ವೈದ್ಯಕೀಯ ಪರಿಕರಗಳು ಹಾಗೂ ರಾಸಾಯನಿಕ ಉತ್ಪನ್ನಗಳಿಗೆ ಇರಾನ್ ಮಾರುಕಟ್ಟೆ ಪ್ರಮುಖ ತಾಣವಾಗಿದೆ.
ಚಾಬಹಾರ್ ಬಂದರು ಮತ್ತು ಬೃಹತ್ ಹೂಡಿಕೆ:
ಇರಾನ್‌ನಲ್ಲಿರುವ ಚಾಬಹಾರ್ ಬಂದರು ಯೋಜನೆಯು ಭಾರತಕ್ಕೆ ಮಧ್ಯ ಏಷ್ಯಾ ಹಾಗೂ ಯುರೇಷಿಯಾ ಸಂಪರ್ಕಕ್ಕೆ ಅತ್ಯಂತ ಮಹತ್ವದ ಹೆಬ್ಬಾಗಿಲಾಗಿದೆ. ಅಮೆರಿಕದ ನಿರ್ಬಂಧಗಳು ತೀವ್ರಗೊಂಡರೆ ಈ ಯೋಜನೆಯ ಕಾರ್ಯಾಚರಣೆ ಹಾಗೂ ಭಾರತದ ಸಂಪರ್ಕ ಮಾರ್ಗಗಳ ಮೇಲೆ ಪರಿಣಾಮ ಬೀರಬಹುದು.
ಇರಾನ್ ಜತೆ ವ್ಯಾಪಾರ-ವಹಿವಾಟು ನಡೆಸುವ ದೇಶಗಳ ಸರಕುಗಳ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ಹೇರಿದರೆ, ಭಾರತದಿಂದ ಅಮೆರಿಕಕ್ಕೆ ಹೋಗುವ ಒಟ್ಟಾರೆ ರಫ್ತು ಸರಕುಗಳ ದರ ಹೆಚ್ಚಾಗಿ ಸ್ಪರ್ಧಾತ್ಮಕತೆ ಕುಸಿಯಬಹುದು.
ಅಮೆರಿಕದ ಒತ್ತಡ ತೀವ್ರಗೊಂಡರೆ, ಇರಾನ್ ಜೊತೆ ವ್ಯಾಪಾರ ಮಾಡುವ ಭಾರತೀಯ ರಫ್ತುದಾರರು ಹೆಚ್ಚಿನ ಸಾಗಣೆ ವೆಚ್ಚ, ಪಾವತಿ ಸಂಬಂಧಿತ ತೊಡಕುಗಳು ಮತ್ತು ಬೇಡಿಕೆಯ ಕುಸಿತವನ್ನು ಎದುರಿಸಬೇಕಾಗಬಹುದು.
ರಾಜತಾಂತ್ರಿಕ ಬಾಂಧವ್ಯದಲ್ಲಿ ಸಮತೋಲನ ಕಾಪಾಡುವುದು:
ಒಂದೆಡೆ ಅಮೆರಿಕದೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಮತ್ತೊಂದೆಡೆ ಇರಾನ್‌ನಲ್ಲಿನ ಆರ್ಥಿಕ ಹಿತಾಸಕ್ತಿ ಹಾಗೂ ಚಾಬಹಾರ್ ಯೋಜನೆಯನ್ನು ಉಳಿಸಿಕೊಳ್ಳುವುದು ಭಾರತಕ್ಕೆ ಸೂಕ್ಷ್ಮ ಸವಾಲಾಗಿ ಪರಿಣಮಿಸಲಿದೆ.
ಭಾರತವು ಈ ಹಿಂದೆಯೂ ಇಂತಹ ಜಾಗತಿಕ ನಿರ್ಬಂಧಗಳ ಸಂದರ್ಭದಲ್ಲಿ ತನ್ನ ತಟಸ್ಥ ವಿದೇಶಾಂಗ ನೀತಿಯ ಮೂಲಕ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಂಡಿದ್ದು, ಸದ್ಯದ ಬೆಳವಣಿಗೆಯನ್ನು ಭಾರತ ಸರ್ಕಾರವು ಅತ್ಯಂತ ಜಾಗರೂಕತೆಯಿಂದ ಗಮನಿಸುತ್ತಿದೆ.
ಒಟ್ಟಾರೆಯಾಗಿ ಇರಾನ್ ಮಾರುಕಟ್ಟೆಯನ್ನು ನೇರವಾಗಿ ಅವಲಂಬಿಸಿರುವ ವ್ಯಾಪಾರಗಳ ಮೇಲೆ ಇದರ ಅತಿ ದೊಡ್ಡ ಪರಿಣಾಮ ಬೀರಬಹುದು. ಆದರೆ ಇದು ಒಟ್ಟಾರೆಯಾಗಿ ಭಾರತೀಯ ಆರ್ಥಿಕತೆಗೆ ದೊಡ್ಡ ಆಘಾತವಾಗುವ ಸಾಧ್ಯತೆ ಕಡಿಮೆಯಾಗಿದೆ. ಭಾರತ-ಇರಾನ್ ನಡುವಿನ ವ್ಯಾಪಾರವು ಈಗಾಗಲೇ ಗಣನೀಯವಾಗಿ ಕಡಿಮೆಯಾಗಿದೆ. ತಜ್ಞರ ಪ್ರಕಾರ, ಕೆಲವು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಪ್ರಸ್ತುತ ಭಾರತವು ಈ ಪರಿಣಾಮವನ್ನು ಸುಲಭವಾಗಿ ನಿಭಾಯಿಸುವ ಸ್ಥಿತಿಯಲ್ಲಿದೆ.
(ಆಧಾರ: ಎನ್‌ಡಿಟಿವಿ, ಇತರೆ ಸುದ್ದಿ ಮೂಲಗಳು)