ಧಾರವಾಡದಲ್ಲಿ ಬರದಲ್ಲೂ ಗಣೇಶ ಹಬ್ಬದ ಸಂಭ್ರಮ; ಹೂವು-ಹಣ್ಣು ಖರೀದಿ ಭರಾಟೆ

ಧಾರವಾಡದಲ್ಲಿ ಬರದಲ್ಲೂ ಗಣೇಶ ಹಬ್ಬದ ಸಂಭ್ರಮ;  ಹೂವು-ಹಣ್ಣು ಖರೀದಿ ಭರಾಟೆ

ಧಾರವಾಡದಲ್ಲಿ ಬರದಲ್ಲೂ ಗಣೇಶ ಹಬ್ಬದ ಸಂಭ್ರಮ; ಹೂವು-ಹಣ್ಣು ಖರೀದಿ ಭರಾಟೆ

ಧಾರವಾಡ: ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದರೂ, ಈ ಬಾರಿಯ ಗಣೇಶ ಹಬ್ಬದ ಸಂಭ್ರಮ ಗರಿಗೆದರಿದೆ. ನಗರದ ಗಲ್ಲಿಗಲ್ಲಿಗಳಲ್ಲಿ ವಿದ್ಯುತ್ ದೀಪಾಲಂಕಾರ, ಭವ್ಯ ಮಂಟಪಗಳು ಕಂಗೊಳಿಸುತ್ತಿದ್ದು, ಎಲ್ಲೆಡೆ ಹಬ್ಬದ ಸಡಗರ ಮನೆಮಾಡಿದೆ.

ಖರೀದಿಯ ಉತ್ಸಾಹಕ್ಕೆ ಮಳೆ ಕೊರತೆಯ ನೇರ ಪರಿಣಾಮ ಮಾರುಕಟ್ಟೆಯ ಮೇಲೆ ಬೀರಿದ್ದು, ಹೂವು, ಹಣ್ಣು ಹಾಗೂ ತರಕಾರಿ ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿದೆ. ಆದರೂ ವಿಘ್ನವಿನಾಶಕನನ್ನು ಬರಮಾಡಿಕೊಳ್ಳಲು ಸಾರ್ವಜನಿಕರ ಉತ್ಸಾಹವೇನೂ ಕಡಿಮೆ ಯಾಗಿರುವುದು ಕಂಡುಬರಲಿಲ್ಲ.

ನಗರದ ಪ್ರಮುಖ ಮಾರುಕಟ್ಟೆ ರಸ್ತೆಗಳಾದ ಸುಭಾಷ್ ರಸ್ತೆ, ಟಿಕಾರೆ ರಸ್ತೆ, ಸಿಬಿಟಿ, ಲೈನ್ ಬಜಾರ್, ಸುಪರ್ ಮಾರುಕಟ್ಟೆಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಜನಜಂಗುಳಿ ಕಂಡುಬಂತು, ಮಹಿಳೆಯರು, ಯುವತಿಯರು ಚೌಕಾಸಿ ಮಾಡಿ ಹೂವು-ಹಣ್ಣು, ಬಾಳೆ ಕಂಬ, ಮಾವಿನ ತೋರಣ, ಕರಿಕೆ ಪತ್ರಿ, ಅಲಂಕಾರಿಕ ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿದ್ದರು.

ಬೆಲೆ ಏರಿಕೆಯ ನಡುವೆಯೂ ಖರೀದಿ ಅಬ್ಬರ ಜೋರಾಗಿದ್ದು, ತಳಿರು-ತೋರಣ, ಹೂವು-ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಜನರು ನಿರತರಾಗಿದ್ದಾರೆ. ವ್ಯಾಪಾರಸ್ಥರ ಮುಖದಲ್ಲೂ ಹಬ್ಬದ ಸಂಭ್ರಮ ಮೂಡಿದ್ದು, ವಹಿವಾಟು ಗಣನೀಯವಾಗಿ ಹೆಚ್ಚಾಗಿದೆ.

ಕೆಲವು ಪ್ರತಿಷ್ಠಿತ ಗಣೇಶೋತ್ಸವ ಮಂಡಳಿಗಳು ಭಕ್ತರನ್ನು ಸೆಳೆಯಲು ಸಜ್ಜಾಗಿವೆ. ಉತ್ತರ ಭಾರತದ ಪ್ರಸಿದ್ಧ ಜ್ಯೋತಿರ್ಲಿಂಗ ಕ್ಷೇತ್ರಗಳಾದ ಕೇದಾರನಾಥ ಮತ್ತು ಕಾಶಿ ವಿಶ್ವನಾಥ ದೇಗುಲ, ತಮಿಳುನಾಡಿನ ಆದಿಯೋಗಿ ಶಿವನ ಪ್ರತಿಮೆ, ಭವ್ಯ ಕೋಟೆಗಳ ಆಕೃತಿ ಮಂಟಪಗಳು ಕಣ್ಮನಸೆಳೆಯುತ್ತಿವೆ

ಮಣ್ಣಿನ ಮೂರ್ತಿಗಳಿಗೆ ಬೇಡಿಕೆ

ಈ ಬಾರಿ ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿ ನಿಷೇಧ ಮಾಡಿದ್ದರಿಂದ ಮಣ್ಣಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಈ ಬಾರಿ ಬೇಡಿಕೆ ವ್ಯಕ್ತವಾಗಿದೆ. ಲೈನ್ ಬಜಾರ್, ಶ್ರೀನಗರ, ವಿಶ್ವಕರ್ಮ ವೃತ್ತ ಸೇರಿದಂತೆ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಮೂಷಿಕ, ಬಸವ, ಹಸು, ಜಿಂಕೆ, ಆನೆ, ಸಿಂಹ, ಸರ್ಪ, ನವಿಲಿನೊಂದಿಗೆ ವಿರಾಜಮಾನನಾದ ಮೂರ್ತಿಗಳ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಮುಂಗಡ ಬುಕ್ ಮಾಡಿದ್ದಾರೆ. ಮೂರ್ತಿಗಳಿಗೆ 500-5000 ದರವಿದೆ.

ಹೂವುಗಳ ದರ (ಕೆ.ಜಿಗೆ, ₹ಗಳಲ್ಲಿ)ಸೇವಂತಿಗೆ;380-300ಮಲ್ಲಿಗೆ;550-600ಸಣ್ಣಗುಲಾಬಿ;300-350ಚೆಂಡುಹೂವು;60-80ಸುಗಂಧರಾಜ 200-280

ಹಣ್ಣುಗಳ ದರ (ಕೆ.ಜಿಗೆ, ₹ಗಳಲ್ಲಿ)ಸೇಬು;200-250ದಾಳಿಂಬೆ;150-200ದ್ರಾಕ್ಷಿ 150-180ಮೂಸಂಬಿ;120-150ಕಿತ್ತಳೆ;120;150ಏಲಕ್ಕಿಬಾಳೆ;80-100ಚಿಕ್ಕು;100-120

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ