
ರೋಗ ಭೀತಿಯಲ್ಲಿ ವರಮಯ್ಯ ಕ್ಯಾಂಪ್; ಅಶುದ್ಧ ನೀರು ಕುಡಿಯುತ್ತಿರುವ ಗ್ರಾಮಸ್ಥರು
ತೆಕ್ಕಲಕೋಟೆ: ಸಮೀಪದ ಬಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರಮಯ್ಯ ಕ್ಯಾಂಪ್‌ನಲ್ಲಿ ಖಾಸಗಿ ಕೆರೆಯಿಂದ ಸರಬರಾಜಾಗುವ ಕುಡಿಯುವ ನೀರು ಪಾಚಿಗಟ್ಟಿದ್ದು, ಗ್ರಾಮಸ್ಥರಲ್ಲಿ ರೋಗ ಭೀತಿ ಆವರಿಸಿದೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಾಗಲಿ ಅಥವಾ ಕೊಳವೆಬಾವಿ ವ್ಯವಸ್ಥೆಯಾಗಲಿ ಇಲ್ಲದಿರುವುದರಿಂದ, ಜನರು ಅನಿವಾರ್ಯವಾಗಿ ಇದೇ ಕಲುಷಿತ ನೀರನ್ನೇ ಬಳಸುತ್ತಿದ್ದಾರೆ.
ವರಮಯ್ಯ ಕ್ಯಾಂಪ್‌ನಲ್ಲಿ ಸುಮಾರು 300 ಜನರು ವಾಸಿಸುತ್ತಿದ್ದು, ಪಂಚಾಯಿತಿಯಿಂದ ಯಾವುದೇ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿರುವ ಕೆರೆಯಿಂದ ನೀರು ಪೂರೈಸಲಾಗುತ್ತಿದ್ದು, ಈಗ ಕೆರೆಯಲ್ಲಿ ಪಾಚಿ ತುಂಬಿದೆ. ‘ಕೆರೆಯ ಏರಿಯ ಮೇಲೆ ಸದಾ ದನ-ಕರುಗಳು ಹಾಗೂ ಕುರಿಗಳು ಓಡಾಡುತ್ತಾ ನೀರಿಗೆ ಇಳಿಯುವುದರಿಂದ ನೀರು ಸಂಪೂರ್ಣ ಕಲುಷಿತಗೊಂಡಿದೆ’ ಎಂದು ಸ್ಥಳೀಯ ಯುವಕ ಶಿವಪ್ಪ ಬೇಸರ ವ್ಯಕ್ತಪಡಿಸಿದರು.
‘ಕೆರೆಯ ಸುತ್ತಲೂ ಯಾವುದೇ ತಡೆಗೋಡೆಯಾಗಲಿ ಅಥವಾ ತಂತಿ ಬೇಲಿಯಾಗಲಿ ಇಲ್ಲ. ಪಕ್ಕದಲ್ಲೇ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿದ್ದು, ಕಲುಷಿತ ನೀರಿನಿಂದ ಮಕ್ಕಳ ಆರೋಗ್ಯ ಹದಗೆಡಬಹುದು ಎಂಬ ಭಯದಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಗ್ರಾಮಸ್ಥ ಪ್ರಹ್ಲಾದ್ ದೂರಿದರು.
‘ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿ ಗಬ್ಬು ನಾರುತ್ತಿದ್ದರೂ, ಇದುವರೆಗೆ ಕೆರೆಯನ್ನು ಸ್ವಚ್ಛಗೊಳಿಸಿಲ್ಲ’ ಎಂದು ಗ್ರಾಮಸ್ಥೆ ಮಂಗಮ್ಮ ಅಳಲು ತೋಡಿಕೊಂಡರು.
ಮೂಲಸೌಕರ್ಯಗಳ ಕೊರತೆ: ಗ್ರಾಮಕ್ಕೆ ಬಸ್ ಸೌಕರ್ಯವೂ ಇಲ್ಲ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಪ್ರತಿದಿನ ಉಪ್ಪಾರಹೊಸಳ್ಳಿ ಮತ್ತು ಬಲಕುಂದಿ ಗ್ರಾಮಗಳಿಗೆ ಕಾಲ್ನಡಿಗೆಯಲ್ಲೇ ತೆರಳಬೇಕಿದೆ. ಇದರ ಜೊತೆಗೆ ಗ್ರಾಮದಲ್ಲಿ ಸ್ಮಶಾನ ಜಾಗದ ಅಭಾವವೂ ಇದೆ ಎಂದು ಗ್ರಾಮಸ್ಥರಾದ ಶಾಂತಮ್ಮ, ಸಿದ್ಧಮ್ಮ, ಯಲ್ಲಮ್ಮ, ಮಾಳಮ್ಮ, ಶರಣಮ್ಮ, ಲಕ್ಷ್ಮಿ, ಶೇಷಮ್ಮ, ಈರಮ್ಮ, ಈರಣ್ಣ ಹಾಗೂ ಮಲ್ಲಿಕಾರ್ಜುನ ದೂರಿದ್ದಾರೆ.
ಕಲುಷಿತ ನೀರು ಪೂರೈಕೆಯಾಗುತ್ತಿರುವ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವುದಾದರೂ ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಮತ್ತು ಮೂಲಸೌಕರ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಸಿರುಗುಪ್ಪ ತಾಲ್ಲೂಕು ಪಂಚಾಯಿತಿ ಇಒ ಪವನ್ ಕುಮಾರ್, ‘ಗ್ರಾಮದ ಕುಡಿಯುವ ನೀರು ಪೂರೈಕೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.