
ಎಂಜಿನಿಯರ್ಸ್ ದಿನ ಇಂದು: ಅಭಿವೃದ್ಧಿಯ ಹಿಂದಿನ ‘ಮಹಾಶಕ್ತಿ’ ಎಂಜಿನಿಯರ್ಸ್
ದೇಶದ ಶ್ರೇಷ್ಠ ಎಂಜಿನಿಯರ್‌ಗಳಲ್ಲಿ ಒಬ್ಬರಾದ 'ಮೋಕ್ಷಗುಂಡಂ ವಿಶ್ವೇಶ್ವರಯ್ಯ' ಅವರ ಜನ್ಮದಿನದ ಸ್ಮರಣಾರ್ಥ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 15ರಂದು ಎಂಜಿನಿಯರ್ಸ್ ದಿನವನ್ನು ಆಚರಿಸಲಾಗುತ್ತದೆ. 1861ರ ಸೆಪ್ಟೆಂಬರ್ 15ರಂದು ಜನಿಸಿದ ವಿಶ್ವೇಶ್ವರಯ್ಯ ಅವರು ತಮ್ಮ ಜ್ಞಾನ, ಶಿಸ್ತು, ಕಾರ್ಯಕ್ಷಮತೆ ಮತ್ತು ದೂರದೃಷ್ಟಿಯಿಂದ ಭಾರತೀಯ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವರು. 'ಕೆಲಸವೇ ಪೂಜೆ, ಸಮಯವೇ ಸಂಪತ್ತು' ಎಂಬ ಶಿಸ್ತಿನ ಬದುಕಿನ ಮೂಲಕ ಅವರು ತಲೆಮಾರುಗಳಿಗೆ ಮಾದರಿಯಾದರು. ಅವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 1955ರಲ್ಲಿ 'ಭಾರತ ರತ್ನ' ನೀಡಿ ಗೌರವಿಸಿತು. ಈ ದಿನ ಎಲ್ಲ ಎಂಜಿನಿಯರ್‌ಗಳ ಕೊಡುಗೆಗೆ ನೀಡುವ ಗೌರವವೂ ಆಗಿದೆ.
ಆಧುನಿಕ ಜಗತ್ತಿನ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ಸಮಾಜದ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ. ಕಲ್ಪನೆ ಮತ್ತು ಕಾಗದದ ಮೇಲಿರುವ ಯೋಜನೆಗಳಿಗೆ ಜೀವ ನೀಡಿ, ಅವುಗಳನ್ನು ವಾಸ್ತವಕ್ಕೆ ತರುವ ಕಾಯಕ ಯೋಗಿಗಳಾಗಿದ್ದಾರೆ.
ಎಂಜಿನಿಯರ್‌ಗಳ ಮಹತ್ವವನ್ನು ನಾವು ವಿವಿಧ ರಂಗಗಳಲ್ಲಿ ಕಾಣಬಹುದು. ಭೌತವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನದ ಉಪಯೋಗವನ್ನು ಬಳಸಿಕೊಂಡು ಸಮಾಜದ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಅವರು ದೇಶದ ಪ್ರಗತಿಯ ಬೆನ್ನೆಲುಬಾಗಿ ನಿಂತಿದ್ದಾರೆ.
ಐದಾರು ದಶಕಗಳ ಹಿಂದೆ ಎಂಜಿನಿಯರ್ ಅಂದರೆ, ಕಟ್ಟಡ, ಸೇತುವೆಗಳ ಯೋಜನೆ ರೂಪಿಸುವ, ಉಸ್ತುವಾರಿ ವಹಿಸುವ ಎಂಬ ಕಾಲವಿತ್ತು. ನಂತರ ವಾಹನಗಳ ಬಳಕೆ ಹೆಚ್ಚಾದಾಗ ಮೆಕ್ಯಾನಿಕಲ್ ಎಂಜಿನಿಯರ್ ಮಹತ್ವ ಹೆಚ್ಚಿತು. ಈಗ ವಿವಿಧ ತಂತ್ರಜ್ಞಾನಗಳ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಿಕೊಂಡು ಜನರ ಜೀವನವನ್ನು ಸುಲಭಗೊಳಿಸುತ್ತಿರುವ ಅಷ್ಟೇ ಸತ್ಯವಾಗಿದೆ.
ಸಣ್ಣ ಸೂಜಿಯಿಂದ ಹಿಡಿದು ಆಕಾಶದಲ್ಲಿ ಹಾರಾಡುವ ವಿಮಾನ, ನೆಲದ ಮೇಲೆ ಓಡಾಡುವ ವಾಹನಗಳು ಸೇರಿದಂತೆ ಬೃಹದಾಕಾರದ ರೈಲು, ನೀರಲ್ಲಿ ಸಾಗುವ ಹಡಗು, ಸಬ್‌ಮರಿನ್, ಅಂತರಿಕ್ಷೆಗೆ ಚಿಮ್ಮುವ ರಾಕೆಟ್‌ಗಳ ತಯಾರಿಕೆ, ಉಡ್ಡಯನ ಎಲ್ಲದರಲ್ಲೂ ಎಂಜಿನಿಯರ್ ಕೈಚಳಕ ಮುಖ್ಯ. ಶೂನ್ಯದಿಂದ ಎಲ್ಲವನ್ನೂ ಸೃಷ್ಟಿಸಿದ ವಿಶ್ವ ನಿರ್ಮಾತೃ ವಿಶ್ವಕರ್ಮ ದೇವಶಿಲ್ಪಿ ಎನಿಸಿಕೊಂಡಿದ್ದರೆ, ನಿರ್ಜೀವ ಕಚ್ಚಾ ವಸ್ತುಗಳನ್ನು ಬಳಸಿ ಅವುಗಳಿಗೆ ಸುಂದರವಾದ ರೂಪ ನೀಡಿ ಮನುಕುಲಕ್ಕೆ ಅನುಕೂಲಕರವಾಗುವಂತೆ ಮಾಡುವವರೇ ಎಂಜಿನಿಯರ್‌ಗಳು. ಆದರೆ, ಕೆಲವೊಂದು ಜೀವ ಕುಲಕ್ಕೆ ಹಾನಿ ಎಂಬ ಅಪವಾದಗಳಿದ್ದರೂ ಅವುಗಳನ್ನು ಬಳಸುವಲ್ಲಿ ಎಚ್ಚರವಹಿಸಬೇಕಿದೆ.
ತಂತ್ರಜ್ಞಾನ, ಸಂವಹನ ಕ್ರಾಂತಿ: ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರೂ ಬಳಸುವ ಸ್ಮಾರ್ಟ್‌ಫೋನ್‌ಗಳು, ಇಂಟರ್‌ನೆಟ್, ಕಂಪ್ಯೂಟರ್ ಸಾಫ್ಟ್‌ವೇರ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಹಿಂದೆ ಸಾಫ್ಟ್‌ವೇರ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್‌ಗಳ ಬುದ್ಧಿಶಕ್ತಿಯಿದೆ. ಇಡೀ ಜಗತ್ತನ್ನೇ ಒಂದು ಪುಟ್ಟ ಹಳ್ಳಿಯನ್ನಾಗಿ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ ಕ್ಷೇತ್ರಗಳು, ಪಡಿತರ ವಿತರಣೆ, ಜನಗಣತಿ, ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ), ಫೋಟೊ, ವಿಡಿಯೊಗ್ರಾಫಿ ಹೀಗೆ ಹಲವು ಬೆಳವಣಿಗೆಗಳ ಹಿಂದೆ ಎಂಜಿನಿಯರ್‌ಗಳ ಆಲೋಚನಾ ಶಕ್ತಿ ಅಡಗಿದೆ.
ಕೈಗಾರಿಕೆ, ವೈದ್ಯಕೀಯ ರಂಗ: ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಎಂಜಿನಿಯರ್‌ಗಳು ದೈನಂದಿನ ಬಳಕೆಯ ವಾಹನಗಳಿಂದ ಹಿಡಿದು ಕೈಗಾರಿಕೆಗಳಲ್ಲಿ ಬಳಸುವ ಬೃಹತ್ ಯಂತ್ರೋಪಕರಣ ವಿನ್ಯಾಸಗೊಳಿಸುತ್ತಾರೆ. ಇನ್ನು ಬಯೋಮೆಡಿಕಲ್ ಎಂಜಿನಿಯರ್‌ಗಳು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ್ದಾರೆ. ಎಂಆರ್‌ಐ ಸ್ಕ್ಯಾನಿಂಗ್ ಯಂತ್ರಗಳು, ಕೃತಕ ಅಂಗಗಳು, ವೆಂಟಿಲೇಟರ್‌ಗಳಂತಹ ಜೀವರಕ್ಷಕ ಉಪಕರಣಗಳನ್ನು ಆವಿಷ್ಕರಿಸುವ ಮೂಲಕ ವೈದ್ಯರ ಕೈಗಳನ್ನು ಬಲಪಡಿಸಿದ್ದಾರೆ.
ಸುಸ್ಥಿರ ಭವಿಷ್ಯ ಮತ್ತು ಪರಿಸರ ಸಂರಕ್ಷಣೆ: ಪ್ರಸ್ತುತ ಜಗತ್ತು ಎದುರಿಸುತ್ತಿರುವ ಹವಾಮಾನ ಬದಲಾವಣೆ ಮತ್ತು ಇಂಧನ ಕೊರತೆಯ ಸವಾಲುಗಳಿಗೆ ಎಂಜಿನಿಯರ್‌ಗಳು ಪರಿಹಾರ ಹುಡುಕುತ್ತಿದ್ದಾರೆ. ಸೌರಶಕ್ತಿ, ಪವನಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ, ಪರಿಸರಸ್ನೇಹಿ (Eco-friendly) ತಂತ್ರಜ್ಞಾನಗಳ ಆವಿಷ್ಕಾರ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಎಂಜಿನಿಯರ್‌ಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಕೃಷಿಯಲ್ಲಿಯೂ ಯಂತ್ರೋಪಕರಣ ಬಳಕೆ ಹೆಚ್ಚಾಗಿದ್ದು ಕೂಡಾ ಎಂಜಿನಿಯರ್ ಕೊಡುಗೆಯೇ ಆಗಿದೆ. ಭೂಮಿ ಹಸನು ಮಾಡುವುದರಿಂದ ಹಿಡಿದು, ಬಿತ್ತುವುದು, ಕಟಾವು, ರಾಶಿ ಮಾಡುವುದು ಹೀಗೆ ಎಲ್ಲವೂ ಯಂತ್ರಗಳನ್ನೇ ಅವಲಂಬಿಸಿದೆ. ‘ನೇಗಿಲ ಕುಲದೊಳಗೆ ಅಡಗಿದೆ ಕರ್ಮ’ ಎಂಬುವುದನ್ನು ಈಗ ಯಾಂತ್ರಿಕ ನೇಗಿಲಲ್ಲಿ ಅಡಗಿದೆ ಕರ್ಮ– ಯಂತ್ರಗಳ ಬಳಕೆಯ ಮೇಲೆ ನಿಂತಿದೆ ಕೃಷಿ ಧರ್ಮ’ ಎಂದರೆ ತಪ್ಪಾಗಲಾರದು.
ಯುವಪೀಳಿಗೆಗೆ ಸ್ಫೂರ್ತಿ: ಎಂಜಿನಿಯರ್ ದಿನಾಚರಣೆ ಕೇವಲ ಎಂಜಿನಿಯರ್‌ಗಳಿಗೆ ಅಭಿನಂದನೆ ಸಲ್ಲಿಸುವುದಲ್ಲ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಹೊಸದನ್ನು ಸೃಷ್ಟಿಸುವ ಉತ್ಸಾಹ ಬೆಳೆಸುವ ದಿನವೂ ಹೌದು. ಪಠ್ಯಪುಸ್ತಕದ ಜ್ಞಾನವನ್ನು ನೈಜ ಜೀವನದ ಸಮಸ್ಯೆಗಳಿಗೆ ಅನ್ವಯಿಸುವ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ನಮಗೆ ಒಂದು ಮಹತ್ವದ ಪಾಠ ನೀಡುತ್ತದೆ. ಅಭಿವೃದ್ಧಿ ಎಂದರೆ ಕೇವಲ ದೊಡ್ಡ ಯೋಜನೆಗಳ ನಿರ್ಮಾಣವಲ್ಲ; ಅದು ಜನರ ಬದುಕನ್ನು ಸುಲಭ, ಸುರಕ್ಷಿತ ಮತ್ತು ಸುಸ್ಥಿರಗೊಳಿಸುವ ಪ್ರಯತ್ನ.
ಪದವಿಗಿಂತ ಸಾಮರ್ಥ್ಯ ಮುಖ್ಯ: ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಎಂಜಿನಿಯರಿಂಗ್ ಪದವಿ ಪಡೆದರೆ ಸಾಲದು. ನಿರಂತರವಾಗಿ ಹೊಸ ತಂತ್ರಜ್ಞಾನದ ಒಳಹೊರಗನ್ನು ಕಲಿತು ಆವಿಷ್ಕರಿಸುವ ಮನೋಭಾವ, ಸೃಜನಶೀಲತೆ, ಸಂಶೋಧನಾ ದೃಷ್ಟಿಕೋನ, ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ಮತ್ತು ಸಾಮಾಜಿಕ ಜವಾಬ್ದಾರಿ ಅಗತ್ಯವಾಗಿದೆ. ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಎಂಜಿನಿಯರ್‌ಗಳು ತಂತ್ರಜ್ಞಾನವನ್ನು ಬಳಸುವವರಷ್ಟೇ ಅಲ್ಲ, ಸಮಾಜಕ್ಕೆ ಸುರಕ್ಷಿತ ಮತ್ತು ಉಪಯುಕ್ತ ಪರಿಹಾರಗಳನ್ನು ರೂಪಿಸುವವರಾಗಿ ಹೊರಹೊಮ್ಮಬೇಕಿದೆ.
ದೇಶದ ಶ್ರೇಷ್ಠ ಎಂಜಿನಿಯರ್‌ಗಳಲ್ಲಿ ಒಬ್ಬರಾದ ‘ಮೋಕ್ಷಗುಂಡಂ ವಿಶ್ವೇಶ್ವರಯ್ಯ’ ಅವರ ಜನ್ಮದಿನದ ಸ್ಮರಣಾರ್ಥ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 15ರಂದು ಎಂಜಿನಿಯರ್ಸ್ ದಿನವನ್ನು ಆಚರಿಸಲಾಗುತ್ತದೆ. 1861ರ ಸೆಪ್ಟೆಂಬರ್ 15ರಂದು ಜನಿಸಿದ ವಿಶ್ವೇಶ್ವರಯ್ಯ ಅವರು ತಮ್ಮ ಜ್ಞಾನ, ಶಿಸ್ತು, ಕಾರ್ಯಕ್ಷಮತೆ ಮತ್ತು ದೂರದೃಷ್ಟಿಯಿಂದ ಭಾರತೀಯ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವರು. ‘ಕೆಲಸವೇ ಪೂಜೆ, ಸಮಯವೇ ಸಂಪತ್ತು’ ಎಂಬ ಶಿಸ್ತಿನ ಬದುಕಿನ ಮೂಲಕ ಅವರು ತಲೆಮಾರುಗಳಿಗೆ ಮಾದರಿಯಾದರು. ಅವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 1955ರಲ್ಲಿ ‘ಭಾರತ ರತ್ನ’ ನೀಡಿ ಗೌರವಿಸಿತು. ಈ ದಿನ ಎಲ್ಲ ಎಂಜಿನಿಯರ್‌ಗಳ ಕೊಡುಗೆಗೆ ನೀಡುವ ಗೌರವವೂ ಆಗಿದೆ.