
ಕಾರ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಪಲ್ಟಿ: ಪ್ರಯಾಣಿಕನಿಗೆ ಗಾಯ
ಮಂಗಳೂರು: ಕಾರ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ವಿಶಾಲ್ ಮೋಟರ್ಸ್‌ನ ಎಕ್ಸ್‌ಪ್ರೆಸ್ ಬಸ್ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬಳಿ ಪಲ್ಟಿಯಾಗಿ ಉಡುಪಿ ಜಿಲ್ಲೆಯ ಬೆಳ್ಮಣ್ ನಿವಾಸಿ ಆದಿತ್ಯ ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಿಗ್ಗೆ 6.30ಕ್ಕೆ ಕಾರ್ಕಳದಿಂದ ಹೊರಟ ಬಸ್ 8.30ರ ವೇಳೆ ಮಂಗಳೂರು ನಗರದ ಪಣಂಬೂರಿನ ಎಂಸಿಎಫ್ ರೈಲ್ವೆ ಗೇಟ್ ಬಳಿ ಪಲ್ಟಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ರಸ್ತೆಯಿಂದ ಬದಿಗೆ ಜಾರಿದ ಬಸ್ ಚರಂಡಿಗೆ ಬಿದ್ದಿದೆ. ಚಾಲಕನ ಅಜಾಗರೂಕತೆಯಿಂದ ಇದು ಸಂಭವಿಸಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಮಂಗಳೂರು ಉತ್ತರ ಸಂಚಾರ ಠಾಣೆ ಪೊಲೀಸರು ಸಾರ್ವಜನಿಕರ ನೆರವಿನೊಂದಿಗೆ ಬಸ್ ಒಳಗೆ ಸಿಲುಕಿದ್ದವರನ್ನು ಹೊರಗೆ ತೆಗೆದಿದ್ದಾರೆ. 50ಕ್ಕೂ ಅಧಿಕ ಪ್ರಯಾಣಿಕರು ಬಸ್‌ನಲ್ಲಿದ್ದರು.