
ಬೆಂಗಳೂರು ಏರ್‌ಪೋರ್ಟ್ ಮೆಟ್ರೋ ಕಾಮಗಾರಿಗೆ ವೇಗ; ORR ಟ್ರಾಫಿಕ್ ಬಗ್ಗೆ ಪೊಲೀಸ್-BMRCL ಮಹತ್ವದ ಸಭೆ
ಬೆಂಗಳೂರು: ಬೆಂಗಳೂರಿನಲ್ಲಿ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಮುಂದಾದರೂ ಸಹಿತ ಅದರಿಂದ ವಾಹನ ಸವಾರರಿಗೆ ತೊಂದರೆ ಆಗುವ ಸನ್ನಿವೇಶ ನಗರದಲ್ಲಿದೆ. ORR ಮೆಟ್ರೋ ನೀಲಿ ಮಾರ್ಗದ ಕಾರ್ಯಾಚರಣೆ ಮುನ್ನವೇ ವೈಟ್ ಟಾಪಿಂಗ್ ಮಾಡುವುದು ಸರಿಯಲ್ಲ ಎಂದು ಔಟರ್ ರಿಂಗ್ ರೋಡ್ ಕಂಪನಿಗಳ ಸಂಘ (ORRCA) ತಿಳಿಸಿತ್ತು. ಇದರ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರು, ಅಧಿಕಾರಿಗಳೊಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಬುಧವಾರ ಮಹತ್ವದ ಸಭೆ ನಡೆಸಿದ್ದಾರೆ.
ನೀಲಿ ಮಾರ್ಗ ತೆರೆಯುವ ಮುನ್ನವೇ ಔಟರ್ ರಿಂಗ್ ರೋಡ್ ನಲ್ಲಿ(ORR) 17 ಕಿಲೋ ಮೀಟರ್ ವೈಟ್ ಟಾಪಿಂಗ್ ಆರಂಭಿಸಿದರೆ ವಾಹನ ಸವಾರರಿಗೆ ತೊಂದರೆ ಆಗುತ್ತದೆ. ಸಿಲ್ಕ್‌ಬೋರ್ಡ್‌ನಿಂದ ಎಚ್‌ಎಸ್ ಆರ್ ಬಡಾವಣೆ, ಆಗರ, ಇಬ್ಬಲೂರು, ಮಹದೇವರಪುರ, ಮಾರತ್ತಹಳ್ಳಿ ಹೀಗೆ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ಲಕ್ಷಾಂತರ ಜನರಿಗೆ ತೊಂದರೆ ಆಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ)ಗೆ ಸಂಘ ಮನವಿ ಮಾಡಿದೆ. ಮೆಟ್ರೋ ನೀಲಿ ಮಾರ್ಗ ತೆರೆದ ಬಳಿಕ ನೀವು ರಸ್ತೆ ಅಭಿವೃದ್ಧಿ ಯೋಜನೆ ಆರಂಭಿಸುವಂತೆ ಪತ್ರದಲ್ಲಿ ಕೋರಲಾಗಿದೆ. ಈ ಕುರಿತು ಜಿಬಿಎ ಮರುತ್ತರ ನಿರೀಕ್ಷಿಸಲಾಗುತ್ತಿದೆ.
ಮೆಟ್ರೋ ಕಾಮಗಾರಿಗೆ ಸಿಗುತ್ತಾ ವೇಗ?
ಇತ್ತ ಬೆಂಗಳೂರು ಪೊಲೀಸರು ಹಾಗೂ ಮೆಟ್ರೋ ಅಧಿಕಾರಿಗಳು ಈ ರಸ್ತೆಯಲ್ಲಿನ ಸಂಚಾರ ನಿರ್ವಹಣೆ ಸಂಬಂಧ ಸಭೆ ನಡೆಸಿದ್ದಾರೆ. ಇದೆಲ್ಲ ನೋಡಿದರೆ ಬಹುನಿರೀಕ್ಷೆಯ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ-ಬೆಂಗಳೂರು ಏರ್ ಪೊರ್ಟ್‌ವರೆಗಿನ ನೀಲಿ ಮಾರ್ಗಕ್ಕೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಇದೆ. ಎಲ್ಲವು ಅಂದುಕೊಂಡಂತಾಗಿದ್ದರೆ ಇಷ್ಟೊತ್ತಿಗೆ ಈ ಮಾರ್ಗವು ಲೋಕಾರ್ಪಣೆ ಆಗಿರಬೇಕಿತ್ತು. ಕಾರಣಾಂತರಗಳಿಂದ ವಿಳಂಬವಾಗುತ್ತಲೇ ಬಂದಿದೆ.
ಟ್ರಾಫಿಕ್, ಮೆಟ್ರೋ ಯೋಜನೆ: ಸಭೆಯಲ್ಲಿ ಚರ್ಚೆಯಾಗಿದ್ದೇನು?
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ತಲುಪುವ ನಮ್ಮ ಮೆಟ್ರೋ ನೀಲಿ ಮಾರ್ಗದಲ್ಲಿ ಸಂಚಾರ ನಿರ್ವಹಣೆ ಅನೇಕ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾಗಿವೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪಿ.ಸಿ. ಜಾಫರ್ ಅವರು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಹಾಗೂ ಇತರ ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳಗೊಂದಿಗೆ ORR ಸಂಚಾರ ನಿರ್ವಹಣೆ ಕುರಿತು ಚರ್ಚಿಸಲಾಗಿದೆ.
ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರಗತಿಯಲ್ಲಿರುವ ಮೆಟ್ರೋ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ವಿಶೇಷವಾಗಿ ಕೆ.ಆರ್. ಪುರದಿಂದ ಹೆಬ್ಬಾಳದವರೆಗಿನ ಮಾರ್ಗದಲ್ಲಿ ವಿಮಾನ ನಿಲ್ದಾಣ ಮೆಟ್ರೋ ಮಾರ್ಗದ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವಾಗ ಅನೇಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ವಿವರಿಸಿದರು.
ಮೆಟ್ರೋ ಕಾಮಗಾರಿಗಳ ನಡೆಯುವಾಗ ಉಂಟಾಗುವ ಸವಾಲುಗಳನ್ನು ಪೊಲೀಸ್ ಆಯುಕ್ತರು ಗಮನಿಸಿದ್ದು, ಅವುಗಳನ್ನು ಪರಿಹರಿಸಲು ವಿವಿಧ ಕ್ರಮಗಳನ್ನು ಸೂಚಿಸಿದರು. ಮೆಟ್ರೋ ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ ಸಂಚಾರ ನಿರ್ವಹಣೆಗಾಗಿ ರೂಪಿಸಲಾದ ವಿಸ್ತೃತ ಯೋಜನೆಗಳ ಜಾರಿ ಕುರಿತು ಚರ್ಚಿಸಿದರು.
ಸಂಚಾರ ಪೊಲೀಸ್ ಇಲಾಖೆಯ ನಿರಂತರ ಬೆಂಬಲ ಮತ್ತು ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಮೆಟ್ರೋ ನಿರ್ಮಾಣ ಕಾಮಗಾರಿಗಳನ್ನು ಮತ್ತಷ್ಟು ತ್ವರಿತಗೊಳಿಸಲಿದ್ದೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನೀಲಿ ಮಾರ್ಗ ಓಪನ್ ಯಾವಾಗ?
ಈ ಮಾರ್ಗವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗಿನ ಲೈನ್ (19.5 ಕಿ.ಮೀ) ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಮೂರು ಡ್ರೈವರ್‍ಲೆಸ್ ರೈಲುಗಳು ಈಗಾಗಲೇ ಆಗಮಿಸಿವೆ. ಮಾರ್ಚ್ 2026ರಲ್ಲಿ ತೆರೆಯಬೇಕಿದ್ದ ಮಾರ್ಗದಲ್ಲಿ ಇನ್ನೂವರೆಗೆ ರೈಲುಗಳ ಪ್ರಾಯೋಗಿಕ ತಪಾಸಣೆಯೇ ನಡೆದಿಲ್ಲ. ಇದರಿಂದ ಓ ಆರ್ ಆರ್ ರಸ್ತೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್ ದಟ್ಟಣೆಗೆ ಹೈರಾಣಾಗಿದ್ದಾರೆ. 2027ರ ಮಧ್ಯ ಭಾಗಕ್ಕೆ ಈ ನೀಲಿ ಮಾರ್ಗ ತೆರೆಯುವ ಸಾಧ್ಯತೆ ಇದೆ. ಇದೇ ಅಕ್ಟೋಬರ್‍ನಲ್ಲಿ ರೈಲುಗಳ ಟ್ರಯಲ್ ರನ್ ನಡೆಸುವ ನಿರೀಕ್ಷೆ ಇದೆ.
450 ಕೋಟಿ ರೂ.ನ ವೈಟ್ ಟಾಪಿಂಗ್‌ಗೆ ಬ್ರೇಕ್?
ಈ ನಡುವೆ ಇದೇ ಓ ಆರ್ ಆರ್ ಮಾರ್ಗದಲ್ಲಿ 450 ಕೋಟಿ ರೂಪಾಯಿ ವೆಚ್ಚದಲ್ಲಿ 17 ಕಿಲೋ ಮೀಟರ್ ವೈಟ್ ಟಾಪಿಂಗ್ ಕೆಲಸವನ್ನು ಇದೇ ಅಕ್ಟೋಬರ್‌ನಿಂದ ಶುರು ಮಾಡಲು ಜಿಬಿಎ ಮುಂದಾಗಿತ್ತು. ಈ ಸಂಬಂಧ ಶೆ.50ರಷ್ಟು ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಬೇಕೆಂಬ ಪ್ರಸ್ತಾವನೆ ಇತ್ತು. ಇದನ್ನು ತಿರಸ್ಕೃರಿಸಿರುವ ಓ ಆರ್ ಆರ್ ಕಂಪನಿಗಳ ಸಂಘವು ವರ್ಕ್ ಫ್ರಂ ಹೋಂ ನೀಡಲ್ಲ ಎಂದಿದೆ. ಜೊತೆಗೆ ನೀಲಿ ಮೆಟ್ರೋ ಮಾರ್ಗ ಶುರುವಾದ ಮೇಲೆ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದೆ. ಈ ಕಾಮಗಾರಿಗೆ ಬ್ರೇಕ್ ಬಿದ್ದಂತಾಗಿದೆ.