
ಅಕ್ಕ ಸಮ್ಮೇಳನಕ್ಕೆ ಹೊಳಲ್ಕೆರೆ ಶಿಲ್ಪಿ ವಿನಯ್ ಕೈಚಳಕದಲ್ಲಿ ಗಣಪತಿ ಮೂರ್ತಿ ಸಿದ್ಧ
ಹೊಳಲ್ಕೆರೆ: ಅಮೆರಿಕದ ಫಿಲಡೆಲ್ಫಿಯಾದಲ್ಲಿ ಸೆ.4 ರಿಂದ 6 ರವರೆಗೆ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ತಾಲ್ಲೂಕಿನ ಎನ್.ಜಿ.ಹಳ್ಳಿಯ ಶಿಲ್ಪಿ ರು.ಕಾಳಾಚಾರ್ ಅವರ ಪುತ್ರ ವಿನಯ್ ಅವರ ಕೈಚಳಕದಿಂದ ಮೂಡಿ ಬಂದಿರುವ ವಿಶೇಷ ಗಣಪತಿ ವಿಗ್ರಹ ಆಕರ್ಷಣೆಯ ಕೇಂದ್ರ ಬಿಂದು ಆಗಲಿದೆ.
ಇದು 25ನೇ ವರ್ಷದ ಸಮ್ಮೇಳನವಾಗಿದ್ದು, ಬೆಳ್ಳಿ ಮಹೋತ್ಸವ ಆಚರಿಸಲಾಗುತ್ತಿದೆ. ಅಮೆರಿಕದ ವಾಷಿಂಗ್ಟನ್‌ನಲ್ಲಿ ನೆಲೆಸಿರುವ ವಿನಯ್ ಕಾಳಾಚಾರ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಹವ್ಯಾಸಿ ಕಲಾವಿದರಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಚಿತ್ರ ಬಿಡಿಸುವುದು, ಕಲಾಕೃತಿ ರಚನೆಯಲ್ಲಿ ತೊಡಗುತ್ತಾರೆ. ಪ್ರತಿವರ್ಷ ನಡೆಯುವ ಅಕ್ಕ ಸಮ್ಮೇಳನದಲ್ಲಿ ಕರ್ನಾಟಕದ ಕಲೆ, ಸಂಸ್ಕೃತಿ ಬಿಂಬಿಸುವ ಒಂದು ಕಲಾಕೃತಿ ರಚಿಸಿ ಪ್ರದರ್ಶನಕ್ಕೆ ಇಡುವ ಮೂಲಕ ರಾಜ್ಯದ ಗರಿಮೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಭುವನೇಶ್ವರಿ ದೇವಿಯ ಕಲಾಕೃತಿ ರಚಿಸಿ ಪ್ರದರ್ಶಿಸಿದ್ದರು. ಈ ಬಾರಿ ಗಣೇಶನ ಹಬ್ಬದ ಸಂದರ್ಭದಲ್ಲಿ ಅಕ್ಕ ಸಮ್ಮೇಳನ ನಡೆಯುತ್ತಿದ್ದು, ಗೋಕರ್ಣದ ಗಣೇಶನನ್ನು ಹೋಲುವ ವಿಗ್ರಹ ತಯಾರಿಸಿದ್ದಾರೆ.
‘ಈ ಬಾರಿ ಕಲ್ಲು ಮತ್ತು ಎಪಾಕ್ಸಿ ಬಳಸಿ ಗಣಪತಿ ಮೂರ್ತಿ ತಯಾರಿಸಿದ್ದೇನೆ. ವಿಗ್ರಹ 4.5 ಅಡಿ ಎತ್ತರ ಇದ್ದು, ಅಕ್ಕ ಸಮ್ಮೇಳನ ನಡೆಯುವ ಸಭಾಂಗಣದ ಪ್ರವೇಶ ದ್ವಾರದಲ್ಲಿ ಇಡಲಾಗುವುದು. ಕಳೆದ ವರ್ಷ ಮಣ್ಣಿನಿಂದ ಭುವನೇಶ್ವರಿ ದೇವಿ ವಿಗ್ರಹ ರಚಿಸಿದ್ದೆ. ಅದನ್ನು ಹೆಚ್ಚು ಕಾಲ ಸಂಗ್ರಹಿಸಿ ಇಡುವುದು ಕಷ್ಟ ಎಂದು ಕಾರ್ಯಕ್ರಮ ಮುಗಿದ ನಂತರ ವಿಸರ್ಜನೆ ಮಾಡಲಾಗಿತ್ತು. ಈ ವಿಗ್ರಹವನ್ನು ಹೆಚ್ಚು ಕಾಲ ಇಡಬಹುದು. ಕಾರ್ಯಕ್ರಮ ಮುಗಿದ ನಂತರ ಆಸಕ್ತಿ ಇರುವವರಿಗೆ ಕೊಡುಗೆಯಾಗಿ ನೀಡಲಾಗುವುದು’ ಎಂದು ಕಲಾವಿದ ವಿನಯ್ ತಿಳಿಸಿದರು.
‘ವಿಗ್ರಹ ತಯಾರಿಸಲು ಒಂದು ತಿಂಗಳ ಸಮಯ ಹಿಡಿದಿದೆ. ಪತ್ನಿ, ಪುತ್ರಿ ಕೂಡ ಇದಕ್ಕೆ ಸಹಕಾರ ನೀಡಿದ್ದಾರೆ. ತಂದೆ ಕಾಳಾಚಾರ್ ಜಕಣಾಚಾರಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಲ್ಪಿಯಾಗಿದ್ದು, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಹುಟ್ಟೂರು ಹೊಳಲ್ಕೆರೆ ತಾಲ್ಲೂಕಿನ ಎನ್.ಜಿ. ಹಳ್ಳಿಯಲ್ಲೇ ವಾಸವಾಗಿದ್ದು, ಈಗಳು ಶಿಲ್ಪರಚನೆಯ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ಅವರ ಮಾರ್ಗದರ್ಶನ ನನಗೆ ಸದಾ ಇರುವುದರಿಂದ ಇಂತಹ ಕಲಾಕೃತಿ ರಚಿಸಲು ಸಾಧ್ಯವಾಗಿದೆ. ಅಕ್ಕ ಸಮ್ಮೇಳನಕ್ಕೆ 5ರಿಂದ 6 ಸಾವಿರ ಜನ ಸೇರಬಹುದಾಗಿದ್ದು, ನಮ್ಮ ನಾಡಿನ ಕಲಾಕೃತಿ ಪ್ರದರ್ಶಿಸುತ್ತಿರುವುದು ಹೆಮ್ಮೆ ತಂದಿದೆ’ ಎನ್ನುತ್ತಾರೆ ವಿನಯ್.
‘ನಾನು ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿದ್ದು, ಇಲ್ಲಿಂದ ಫಿಲಡೆಲ್ಫಿಯಾ 200 ಮೈಲಿ ಆಗುತ್ತದೆ. ಅಲ್ಲಿಯವರೆಗೆ ವಿಗ್ರಹ ಸಾಗಿಸಿ ಪ್ರದರ್ಶನಕ್ಕೆ ಇಡಲಾಗುವುದು’ ಎಂದು ಹೇಳಿದರು.
ನಾನು ತಯಾರಿಸಿರುವ ಕಲಾಕೃತಿ ಗೋಕರ್ಣ ಅಥವಾ ಇಡಗುಂಜಿ ಗಣೇಶನಿಗೆ ಹೋಲಿಕೆ ಇದೆ. ಆದರೆ ಆಭರಣಗಳು ಹಾಗೂ ಹಲವು ವಿನ್ಯಾಸಗಳು ನನ್ನ ಶೈಲಿಯಲ್ಲಿ ರಚನೆಯಾಗಿವೆ.
ವಿನಯ್ ಕಾಳಾಚಾರ್, ಕಲಾವಿದ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-44-1294619452