
ವಾಡಿ-ಇಂಗಳಗಿ ಸಿಸಿ ರಸ್ತೆಗೆ ₹ 8.2 ಕೋಟಿ ಮಂಜೂರು
ವಾಡಿ: ಕಂದಕ, ಬಿರುಕುಗಳಿಂದ ತುಂಬಿ ಸಾರ್ವಜನಿಕರ ಜೀವ ಹಿಂಡುತ್ತಿದ್ದ ವಾಡಿ-ಇಂಗಳಗಿ ಸಿಸಿ ರಸ್ತೆಗೆ ಅನುದಾನ ಒದಗಿ ಬಂದಿದೆ.
ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದಿಂದ ಇಂಗಳಗಿ ಸಂಪರ್ಕಿಸುವ ಸಿಸಿ ರಸ್ತೆ ನಿರ್ಮಾಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ₹8.2 ಕೋಟಿ ಅನುದಾನ ಒದಗಿಸಿದ್ದು, ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.
40 ವರ್ಷಗಳ ಹಿಂದೆ ಎಸಿಸಿ ಕಾರ್ಖಾನೆ ನಿರ್ಮಿಸಿದ್ದ ಇಂಗಳಗಿ ರಸ್ತೆ ಸಂಪೂರ್ಣ ಬಿರುಕು ಬಿಟ್ಟು ನಿತ್ಯ ಅಪಘಾತ ಜರುಗುತ್ತಿದ್ದವು. ಹಲವರು ಕೈಕಾಲು ಮುರಿದುಕೊಂಡು ಅಂಗವಿಕಲತೆಗೆ ತುತ್ತಾಗಿದ್ದರು. ಶಹಾಬಾದ್ ಪಟ್ಟಣಕ್ಕೆ ಮತ್ತು ಕಲಬುರಗಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದರಿಂದ ವಾಹನಗಳ ಓಡಾಟ ಸಹ ಹೆಚ್ಚಾಗಿತ್ತು. ಶಾಲಾ ಕಾಲೇಜುಗಳಿಗಾಗಿ ವಿದ್ಯಾರ್ಥಿಗಳು ಓಡಾಡುವ ರಸ್ತೆ ಹಾಳಾಗಿ ಅವ್ಯವಸ್ಥೆಗೆ ಕಾರಣವಾಗಿತ್ತು.
ರಸ್ತೆ ದುರಸ್ಥಿಗಾಗಿ ಇಂಗಳಗಿ ಗ್ರಾಮಸ್ಥರು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದರಿಂದ ಎಸಿಸಿ ಕಾರ್ಖಾನೆ ₹39 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಮಾಡಿತ್ತು. ಆದರೆ ಶಾಶ್ವತ ಸಂಪೂರ್ಣ ಹೊಸ ರಸ್ತೆ ನಿರ್ಮಿಸುವ ಇಚ್ಛೆ ವ್ಯಕ್ತಪಡಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ ಒಟ್ಟು 4.5 ಕಿಮೀ ಸಿಸಿ ರಸ್ತೆ ನಿರ್ಮಾಣದ ಅಂದಾಜು ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ವಾಡಿ ಪಟ್ಟಣದಿಂದ ಇಂಗಳಗಿ ಹಾಗೂ ಇಂಗಳಗಿ ತಾಂಡಾವರೆಗೆ 4.5 ಕಿಮೀ ಉದ್ದದ ಹಾಗೂ 5.5 ಮೀಟರ್ ಅಗಲದ ಸಿಸಿ ರಸ್ತೆ ನಿರ್ಮಾಣಕ್ಕೆ ಒಟ್ಟು ₹8.2 ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಸಹ ಮುಗಿದಿದೆ. ರಸ್ತೆಯ ಕೆಲವೆಡೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು ರಸ್ತೆಗಳ ಕೆಳಗೆ ನೀರು ಸರಾಗವಾಗಿ ಹರಿಯಲು ಮತ್ತು ವಾಹನಗಳ ಭಾರವನ್ನು ತಡೆಯಲು ನಾಲ್ಕು ಬದಿಗಳ ಚೌಕಾಕಾರದ 3 ಬಲಿಷ್ಠ ಕಾಂಕ್ರೀಟ್ ಕಲ್ವರ್ಟ್ ಸಹ ನಿರ್ಮಿಸುವ ಯೋಜನೆ ಅಂದಾಜು ಪಟ್ಟಿಯಲ್ಲಿದೆ.
ಇಂಗಳಗಿ–ವಾಡಿ ಮಧ್ಯೆ ಜನರ ಓಡಾಟ ಹೆಚ್ಚಿದ್ದು, ಶಾಲೆ–ಕಾಲೇಜುಗಳಿಗೆ, ಮಾರುಕಟ್ಟೆ, ಆಸ್ಪತ್ರೆಗಾಗಿ ಜನ ನಿತ್ಯ ಓಡಾಡುತ್ತಾರೆ. ಉತ್ತಮ ಗುಣಮಟ್ಟದ ರಸ್ತೆ ಬಹುದಿನದ ಬೇಡಿಕೆಯಾಗಿದ್ದು ಈಗ ಕನಸು ನನಸಾಗುತ್ತಿದೆ ಎಂದು ಸ್ಥಳೀಯ ಮುಖಂಡ ಸುಭಾಸ್ ಯಾಮೇರ್, ಇಂಗಳಗಿ ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಕಾಶಿನಾಥ ಚನ್ನಾಗುಂಡ ಹೇಳಿದರು.
ಆಗಸ್ಟ್‌ನಲ್ಲಿ ತಿಂಗಳಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮುಂದಿನ 8 ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಗುಣಮಟ್ಟದ ರಸ್ತೆ ನಿರ್ಮಿಸಿಕೊಡಲಾಗುವುದು ಎನ್ನುತ್ತಾರೆ ಪಿಎಂಜಿಎಸ್‌ವೈ ಎಇಇ ಶ್ಯಾಮ್ ಬಿರಾದಾರ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260806-31-653703441