ಮಂಗಳೂರು: ಕಂಬಳ ತರಬೇತಿ ಶಿಬಿರಕ್ಕೆ ಅರ್ಜಿಗಳ ಮಹಾಪೂರ

ಮಂಗಳೂರು: ಕಂಬಳ ತರಬೇತಿ ಶಿಬಿರಕ್ಕೆ ಅರ್ಜಿಗಳ ಮಹಾಪೂರ

ಮಂಗಳೂರು: ಕಂಬಳ ತರಬೇತಿ ಶಿಬಿರಕ್ಕೆ ಅರ್ಜಿಗಳ ಮಹಾಪೂರ

ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ರಾಜ್ಯ ಕಂಬಳ ಸಂಸ್ಥೆ ಮೊದಲ ಬಾರಿ ಆಯೋಜಿಸಲಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಉತ್ಸಾಹಿಗಳಿಂದ ಅರ್ಜಿ ಗಳ ಮಹಾಪೂರವೇ ಹರಿದುಬಂದಿದೆ.

ಕಂಬಳದ ಪರಿಪೂರ್ಣ ಮಾಹಿತಿ ನೀಡುವ ಕಾರ್ಯಕ್ರಮ ಎಂದೇ ಹೇಳಲಾಗುವ ತರಬೇತಿ ಮಿಯಾರು ಜೋಡುಕರೆ ಕಂಬಳ ನಡೆಯುವ ಸ್ಥಳದಲ್ಲಿ ಸೆ.16ರಿಂದ 10 ದಿನ ನಡೆಯಲಿದೆ. ಇದಕ್ಕೆ ಪೂರ್ವ ಭಾವಿಯಾಗಿ ಆಯ್ಕೆ ಟ್ರಯಲ್ಸ್ ಸೆ.6ರಂದು ಇದೇ ಜಾಗದಲ್ಲಿ ನಡೆಯಲಿದೆ. ತರಬೇತಿ ಮಾಹಿತಿ ಹೊರಬಿದ್ದು ಒಂದು ವಾರದೊಳಗೆ 100ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ನಿವೃತ್ತ ಓಟಗಾ ರರೂ ಇದರಲ್ಲಿ ಸೇರಿದ್ದಾರೆ ಎಂದು ತರಬೇತಿಯ ಸಂಯೋಜಕ, ರಾಜ್ಯ ಕಂಬಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾ ಕಂಬಳ ಸಮಿತಿಯ ಆಶ್ರಯ ದಲ್ಲಿ ತರಬೇತಿಗಳು ಆಗೊಮ್ಮೆ ಈಗೊಮ್ಮೆ ನಡೆಯುತ್ತಿದ್ದವು. ಆದರೆ ರಾಜ್ಯ ಸರ್ಕಾರದ ಮಾನ್ಯತೆ ಲಭಿಸಿದ ನಂತರ ಇದು ಮೊದಲ ತರಬೇತಿ ಕಾರ್ಯಕ್ರಮ. ಕಂಬಳಾಸಕ್ತರ ಉತ್ಸಾಹಕ್ಕೆ ಇದುವೇ ಕಾರಣ ಇರಬಹುದು. ಎನ್‌ಐಎಸ್ ಕೋ ಚ್‌ಗಳು ತರಬೇತಿ ನೀಡಲಿದ್ದು ಭಾಗವಹಿಸಿದವರಿಗೆ ಪ್ರಮಾಣಪತ್ರವೂ ಲಭಿಸಲಿದೆ’ ಎಂದು ಅವರು ವಿವರಿಸಿದರು.

ಹಗ್ಗ, ನೇಗಿಲು ಮತ್ತು ಹಲಗೆಯ ಎಲ್ಲ ವಿಭಾಗಗಳಲ್ಲೂ ಓಟದ ತರಬೇತಿ ಯೊಂದಿಗೆ ಕೋಣಗಳಿಗೆ ಸ್ನಾನ ಮಾಡಿ ಸುವುದು, ಎಣ್ಣೆ ಹಚ್ಚುವುದು ಹುರುಳಿ ತಿನ್ನಿಸುವುದು ಸೇರಿದಂತೆ ಸಾಕುವ ವಿಧಾನಗಳು, ಕಂಬಳದಲ್ಲಿ ಕೋಣ ಬಿಡುವುದು, ಹಿಡಿಯುವುದು, ನಿಶಾನೆಗೆ ನೀರು ಚೆಲ್ಲುವುದು, ವೀಕ್ಷಕ ವಿವರಣೆ, ಕಂಬಳ ಸಾಹಿತ್ಯ ರಚನೆ ಇತ್ಯಾದಿಯೂ ತರಬೇತಿಯ ಪಠ್ಯದಲ್ಲಿ ಇದೆ. ಫಿಟ್‌ನೆಸ್‌ಗೆ ಎಲ್ಲದಕ್ಕಿಂತ ಮೊದಲ ಆದ್ಯತೆ. ಇದರ ಭಾಗವಾಗಿ ಯೋಗವೂ ಪಠ್ಯದಲ್ಲಿದೆ. ಆಯ್ಕೆ ಪ್ರಕ್ರಿಯೆಯಲ್ಲೂ ದೈಹಿಕ ಕ್ಷಮತೆ ಮತ್ತು ದೇಹಾರೋಗ್ಯ ಪ್ರಮುಖ ವಿಷಯ ಆಗಲಿದೆ. ಕೊನೆಯ ದಿನ ಸ್ಪರ್ಧೆಯೂ ಇರಲಿದ್ದು ಗೆದ್ದವರಿಗೆ ಪದಕಗಳು ಸಿಗಲಿವೆ.

ಹೀಗಿರುತ್ತದೆ ದಿನಚರಿ: ತರಬೇತಿ ಕಾರ್ಯಕ್ರಮದ ತಾತ್ಕಾಲಿಕ ಪಟ್ಟಿಯಂತೆ ಮೊದಲ ಐದು ದಿನ ಬೆಳಿಗ್ಗೆ 6ರಿಂದ ಒಂದು ತಾಸು ಯೋಗ, ನಂತರ ಫಿಟ್‌ನೆಸ್‌ ತರಬೇತಿ, ಉಪಾಹಾರದ ನಂತರ ಕೊಂಚ ವಿಶ್ರಾಂತಿ. ಮಧ್ಯಾಹ್ನದ ನಂತರ ಓಟದ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ ಐದು ಕರೆಯಲ್ಲಿ ಕೋಣಗಳನ್ನು ಓಡಿಸುವ ಅಭ್ಯಾಸ ಮಾಡಿಸಲಾಗುವುದು. ಇದಕ್ಕಾಗಿ 10 ಜೋಡಿ ಕೋಣಗಳನ್ನು ಗುರುತಿಸಲಾಗಿದೆ.

ಆಳ್ವಾಸ್ ಸಂಸ್ಥೆಯಲ್ಲಿ ಕ್ರೀಡಾ ತರಬೇತಿ ನೀಡುತ್ತಿರುವ ಎನ್ಐಎಸ್‌ ಪ್ರಮಾಣಪತ್ರ ಹೊಂದಿರುವ ಶಾಂತಾರಾಮ ಶೆಟ್ಟಿ, ಪ್ರವೀಣ್‌ ಶೆಟ್ಟಿ, ವಸಂತ ಜೋಗಿ ಅವರೊಂದಿಗೆ ಯೋಗ ತರಬೇತಿ ನೀಡಲು ಸಂಜಯ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಅನುಭವಿ ಓಟಗಾರರಾದ ಕೊಳಕೆ ಇರ್ವತ್ತೂರು ಆನಂದ, ಅಶೋಕ್ ಕುಮಾರ್ ಜೈನ್, ಜನಾರ್ದನ ನಾಯಕ್, ಸುರೇಶ್ ಶೆಟ್ಟಿ, ಅಜಿತ್ ಕುಮಾರ್, ರಾಜೇಶ ಆಳದಂಗಡಿ, ಸತೀಶ್ ದೇವಾಡಿಗ, ರವಿ ಕುಮಾರ್ ಮುಂತಾದವರೂ ತರಬೇತಿಯ ಭಾಗವಾಗಲಿದ್ದಾರೆ.

ಬಜೆಟ್‌ನಲ್ಲಿ ₹ 5 ಕೋಟಿಗೆ ಬೇಡಿಕೆ

‌ಕಂಬಳ ಆಯೋಜನೆಗೆ ಮುಂದಿನ ಬಜೆಟ್‌ನಲ್ಲಿ ₹ 5 ಕೋಟಿ ಮೀಸಲಿಡುವಂತೆ ಕೋರಿ ಸೆ.4ರಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಕಂಬಳ ಸಂಸ್ಥೆಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಕಳೆದ ಸಾಲಿನಲ್ಲಿ ಎಲ್ಲ 27 ಕಂಬಳಗಳಿಗೂ ಸರ್ಕಾರ ವಿಶೇಷ ಅನುದಾನ ನೀಡಿದೆ. ಓಟಗಾರರು ಮತ್ತು ಕೋಣದ ಯಜಮಾನರನ್ನೂ ಗೌರವಿಸಿದೆ. ಕಂಬಳದಲ್ಲಿ ‘ಚಾಕರಿ’ ಮಾಡುವವರಿಗೆ ಕಾರ್ಮಿಕ ಕಾರ್ಡ್ ವಿತರಿಸಿದೆ. ತರಬೇತಿ ಆಯೋಜನೆಗೂ ಸಹಕಾರ ನೀಡಿದೆ. ಈ ಬಾರಿ ಕ್ರೀಡಾ ಇಲಾಖೆಯ ಮೂಲಕ ಈಗಾಗಲೇ ತಲಾ ₹ 2 ಲಕ್ಷ ನೀಡಲು ಮುಂದಾಗಿದೆ ಎಂದು ಅವರು ತಿಳಿಸಿದರು.

ಕಂಬಳದ ಪ್ರೋತ್ಸಾಹಕ ಎಂ.ಎನ್‌ ರಾಜೇಂದ್ರ ಕುಮಾರ್ ಅವರ ಜೊತೆ ಗುರುವಾರ ಬೆಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರನ್ನು ತಾವು ಭೇಟಿಯಾಗಿದ್ದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಂಬಳಕ್ಕೆ ಅನುದಾನ ಘೋಷಣೆ ಮಾಡಬೇಕು ಎಂದು ಕೋರಲು ನಿರ್ಧರಿಸಲಾಯಿತು ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-29-316864434

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ