
ಅಹಿಂದ ಹೆಸರಲ್ಲಿ ಸಿದ್ದರಾಮಯ್ಯ ಸ್ವಾರ್ಥ ರಾಜಕೀಯ: ಬಸವರಾಜ ಬೂದಿಹಾಳ
ಕಲಬುರಗಿ: ‘ಅಹಿಂದ ಹೆಸರು ಬಳಸಿಕೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾರ್ಥದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಕಲ್ಯಾಣ ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡ ಬಸವರಾಜ ಬೂದಿಹಾಳ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2001ರಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಬೆಸ್ತ/ಕೋಲಿ ಸಮಾಜದ ರಾಜ್ಯಾಧ್ಯಕ್ಷ, ಐಎಎಸ್ ಅಧಿಕಾರಿ ಜೆ.ಶ್ರೀನಿವಾಸ ಅವರು ಅಹಿಂದ ಹೆಸರಿನ ಸಂಘಟನೆ ಸ್ಥಾಪಿಸಿದರು. ರಾಜ್ಯದಾದ್ಯಂತ ಬೃಹತ್ ಅಹಿಂದ ಚಳವಳಿಯನ್ನು ರೂಪಿಸಿ, ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿಯನ್ನಾಗಿ ಬೆಳೆಸುವಲ್ಲಿ ಸತೀಶ ಜಾರಕಿಹೊಳಿ, ಡಾ. ಎಚ್.ಸಿ. ಮಹದೇವಪ್ಪ, ಸಿ.ಎಂ. ಇಬ್ರಾಹಿಂ, ಕೆ. ಮುಕುಡಪ್ಪ, ದಿ.ವಿಠ್ಠಲ ಹೇರೂರ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಸಿದ್ದರಾಮಯ್ಯ ಅವರೆಲ್ಲರನ್ನೂ ಈಗ ಕಡೆಗಣಿಸಿದ್ದಾರೆ’ ಎಂದು ಹರಿಹಾಯ್ದರು.
‘ಅಹಿಂದ ವರ್ಗಗಳ ಬೆಂಬಲ ಪಡೆದುಕೊಂಡು ಎರಡು ಬಾರಿ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರು, ಈಗ ತಮ್ಮ ಮಗನನ್ನು ಮಾತ್ರ ಬೆಳೆಸಲು ಶ್ರಮಿಸುತ್ತಿದ್ದಾರೆ. ಸಿಎಂ ಆಗಿದ್ದ ಸಂದರ್ಭದಲ್ಲಿ ಒಂದು ಬಾರಿಯೂ ಅಹಿಂದ ಸಮಾವೇಶ ಮಾಡಲಿಲ್ಲ. ಕಾಂತರಾಜ ಆಯೋಗದ ವರದಿ ಜಾರಿಗೂ ನಿರ್ಲಕ್ಷ್ಯ ವಹಿಸಿದ್ದರು’ ಎಂದು ಆಪಾದಿಸಿದರು.
‘ಸಿದ್ದರಾಮಯ್ಯ ಅವರ ಹಿಂದೆ ಈಗ ಕೇವಲ ಅವರು ಸಾಕಿದ ಹಿಂಬಾಲಕರು ಮಾತ್ರ ಇದ್ದಾರೆ. ನಿಜವಾದ ಅಹಿಂದ ಏನೆಂಬುದನ್ನು ಸದ್ಯದಲ್ಲೇ ಸಭೆ ನಡೆಸಿ ತೋರಿಸುತ್ತೇವೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಂತಪ್ಪ ಕೂಡಿ, ಲೋಹಿತ್ ವಿಶ್ವಕರ್ಮ, ಪಿಡ್ಡಪ್ಪ ಜಾಲಗಾರ, ದಸ್ತಗೀರ್ ನದಾಫ್, ವೆಂಕಟೇಶ ನಾಯಕ ಮತ್ತಿತರರಿದ್ದರು.