ಬಾಗಲಕೋಟೆ: ಕಾಂಗ್ರೆಸ್ ಜಿಲ್ಲಾ ಘಟಕದಲ್ಲಿ ಒಡೆದ ಮನೆ ಒಗ್ಗೂಡಿಸುವ ಸವಾಲು
ಬಾಗಲಕೋಟೆ: ಒಂದೆಡೆ ಪಕ್ಷದೊಳಗಿನ ಅಸಮಾಧಾನ, ಇನ್ನೊಂದೆಡೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಆಯ್ಕೆಯ ಬಗ್ಗೆ ಎದ್ದಿರುವ ಅಪಸ್ವರಗಳನ್ನು ಸರಿಪಡಿಸಿಕೊಂಡು ಪಕ್ಷ ಸಂಘಟನೆ ಮಾಡುವ ಸವಾಲು ಕಾಂಗ್ರೆಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ದಯಾನಂದ ಪಾಟೀಲ ಅವರ ಮುಂದಿದೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ವೈಮನಸ್ಸು ಹೆಚ್ಚಿದೆ. ಕೆಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಒಳಗೊಳಗೆ ಕುದಿಯುತ್ತಿದ್ದಾರೆ.
ವಿಜಯಾನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ನೀಡಿದ್ದು ಮತ್ತು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬಾರದು ಎಂಬ ವಿಷಯ ಕುರಿತು ಶಾಸಕ ಆರ್.ಬಿ. ತಿಮ್ಮಾಪುರ, ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರ ನಡುವೆ ನಡೆದ ಮಾತುಕತೆ ಪಕ್ಷದಲ್ಲಿ ಒಂದಷ್ಟು ಬಿರುಕು ಮೂಡಿಸಿದೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿಯೂ ಎಲ್ಲವೂ ಸರಿಯಿಲ್ಲ. ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಪ್ರಯತ್ನ ಪಕ್ಷದವರಿಂದಲೇ ಆರಂಭವಾಗಿದೆ. ಶಾಸಕ ಉಮೇಶ ಮೇಟಿ ಬಹಿರಂಗವಾಗಿ ಹೇಳಿಲ್ಲವಾದರೂ, ಅವರ ಬೆಂಬಲಿಗರು ಮಾಡುತ್ತಿರುವ ಯತ್ನಕ್ಕೆ ಅವರು ವಿರೋಧ ವ್ಯಕ್ತಪಡಿಸಿಲ್ಲ. ಈಗ ಅದು ಕಗ್ಗಂಟಾಗಿದ್ದು, ಎರಡು ಬಣಗಳಾಗಿವೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವಿಷಯದಲ್ಲಿ ಹೊಳಬಸು ಶೆಟ್ಟರ್ ಮೂಗು ತೂರಿಸುವುದಕ್ಕೆ ಮೇಟಿ ಅವರ ಕುಟುಂಬದ ಮಹಾದೇವಿ ಮೇಟಿ ಅವರ ಬೆಂಬಲಿಗರ ಹೆಸರಿನಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದೇ ಅಭಿಪ್ರಾಯವನ್ನು ಹಲವು ನಾಯಕರು ಹೊಂದಿದ್ದಾರೆ.
ಬಾದಾಮಿಯಲ್ಲಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರದ್ದು ಒಂದು ಗುಂಪಾದರೆ, ಹೊಳಬಸು ಶೆಟ್ಟರ್ ಅವರದ್ದು ಇನ್ನೊಂದು ಗುಂಪು. ಒಂದೇ ವೇದಿಕೆಯಲ್ಲಿ ಇಬ್ಬರೂ ಕಾಣಿಸಿಕೊಳ್ಳುವುದಿಲ್ಲ. ಸ್ಥಳೀಯ ಭಿನ್ನಮತದ ಕಾರಣಕ್ಕೇ ಶನಿವಾರ ಸಿದ್ದರಾಮಯ್ಯ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಶಾಸಕ ಚಿಮ್ಮನಕಟ್ಟಿ ಪಾಲ್ಗೊಳ್ಳದೇ ದೂರ ಉಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ 32 ಜನ ಅರ್ಜಿ ಸಲ್ಲಿಸಿದ್ದರು. ಆದರೆ, ಅವರೆಲ್ಲರನ್ನು ಬಿಟ್ಟು ಅರ್ಜಿಯನ್ನೇ ಸಲ್ಲಿಸಿದ ದಯಾನಂದ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಆಕಾಂಕ್ಷಿಗಳಾಗಿದ್ದ ಹಲವರಲ್ಲಿ ಅಸಮಾಧಾನ ಉಂಟಾಗಿದೆ. ಪಕ್ಷದೊಳಗಿನ ಎಲ್ಲ ಅಸಮಾಧಾನಗಳನ್ನು ಸರಿಪಡಿಸಿ, ಪಕ್ಷ ಸಂಘಟನೆ ಮಾಡುವ ಮೂಲಕ 2028ರ ವಿಧಾನಸಭಾ ಚುನಾವಣೆ, ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಯಶಸ್ಸು ತಂದುಕೊಡುವ ಸವಾಲು ಹೊಸ ಅಧ್ಯಕ್ಷರ ಮುಂದಿದೆ.