
ಕೋಲಾರ: ಜನಸ್ನೇಹಿ ಆಗದ ನಗರ ಸಾರಿಗೆ
ಕೋಲಾರ: ಕೋಲಾರ ನಗರದಲ್ಲಿ ಹಲವು ಬಾರಿ ಶುರುವಾಗಿ ನಷ್ಟದ ಕಾರಣ ಸ್ಥಗಿತಗೊಂಡು ಮತ್ತೆ ಆರಂಭವಾಗಿರುವ ನಗರ ಸಾರಿಗೆ ವ್ಯವಸ್ಥೆ ಕುಂಟುತ್ತಾ ಸಾಗಿದೆ. ಸರಿಯಾದ ವೇಳಾಪಟ್ಟಿಯೂ ಇಲ್ಲದೆ, ಅಸಮರ್ಪಕ ರೂಟುಗಳಿಂದಾಗಿ, ಚಾಲಕ–ನಿರ್ವಾಹಕರ ನಿರ್ಲಕ್ಷ್ಯ ಧೋರಣೆಯಿಂದಾಗಿ ‘ಜನಸ್ನೇಹಿ’ ಆಗದೆ ಗೊಂದಲಮಯವಾಗಿದೆ.
ನಗರ ಸಾರಿಗೆಯು ಮುಖ್ಯರಸ್ತೆಗೆ ಸೀಮಿತವಾಗಿದ್ದು, ಜನ ವಸತಿ ಪ್ರದೇಶಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲ. ಇದರಿಂದಾಗಿ ನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳು, ಸಾರ್ವಜನಿಕರ ಗೋಳಾಟ ಇಂದಿಗೂ ತಪ್ಪಿಲ್ಲ. ನಗರದೊಳಗೆ ಆಟೊ, ನಗರ ಹೊರವಲಯಕ್ಕೆ ಪ್ಯಾಸೆಂಜರ್ ಆಟೊಗಳೇ ಗತಿ ಎಂಬಂತಾಗಿದೆ. ಆಟೊಗಳು ಡಿಜಿಟಲ್ ಮೀಟರ್ ಅಳವಡಿಸಿಕೊಳ್ಳದೆ ಹೆಚ್ಚು ವಸೂಲಿ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ.
ನಗರದಲ್ಲಿ 10 ವರ್ಷಗಳ ಬಳಿಕ ನಗರ ಸಾರಿಗೆ ಪುನರಾರಂಭವಾಗಿದ್ದು, 1 ವರ್ಷ 2 ತಿಂಗಳಾಗಿದೆ. ಬೆಳಿಗ್ಗೆ 6.45ಕ್ಕೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಶುರುವಾಗಿ, ಸಂಜೆ 7.15ರವರೆಗೆ ಸಂಚಾರ ಇರಬೇಕು. ಆದರೆ, ಬಸ್ಸುಗಳ ಸಂಚಾರದ ವೇಳಾಪಟ್ಟಿಯೇ ಇಲ್ಲ. ಹೀಗಾಗಿ, ಯಾವ ಸಮಯದಲ್ಲಿ ಎಲ್ಲಿಗೆ ಬಸ್ ಇವೆ ಎಂಬುದು ಪ್ರಯಾಣಿಕರಿಗೆ ಗೊತ್ತಾಗದೆ ಗೊಂದಲಕ್ಕೆ ಒಳಗಾಗಿ ಆಟೊ ಹಿಡಿಯುತ್ತಿದ್ದಾರೆ. ವೇಳಾಪಟ್ಟಿಯೇ ಇಲ್ಲದೆ ಮನಸ್ಸಿಗೆ ಬಂದ ಸಮಯದಲ್ಲಿ ಸಂಚರಿಸುವ ನಗರ ಸಾರಿಗೆ ಬಸ್ಗಳು ಖಾಲಿ ಹೊಡೆಯುತ್ತಿದ್ದು, ಕೆಎಸ್ಆರ್ಟಿಸಿಗೆ ನಷ್ಟವಾಗುತ್ತಿದೆ.
‘ನಗರ ಸಾರಿಗೆ ನಾಲ್ಕೂ ಬಸ್ಗಳು ಕೋಲಾರ ನಗರದ ನಾಲ್ಕೂ ದಿಕ್ಕುಗಳಲ್ಲಿ ಸಂಚರಿಸುತ್ತಿವೆ. ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಸಂಗೊಂಡನಹಳ್ಳಿ ವರೆಗೆ ಇದ್ದ ನಗರ ಸಾರಿಗೆ ವ್ಯವಸ್ಥೆಯನ್ನು ಈಗ ತಲಗುಂದ, ವೇಮಗಲ್ವರೆಗೆ ವಿಸ್ತರಿಸಿದ್ದೇವೆ. ಟೇಕಲ್ ರಸ್ತೆಯಲ್ಲಿ ಛತ್ರಕೋಡಹಳ್ಳಿವರೆಗೆ ಇದ್ದದ್ದನ್ನು ಪಾರ್ಶ್ವಗಾನಹಳ್ಳಿವರೆಗೆ ವಿಸ್ತರಿಸಿದ್ದೇವೆ. ಜನ ಈ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ’ ಎಂದು ಕೆಎಸ್ಆರ್ಟಿಸಿ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಶಕ್ತಿ ಯೋಜನೆಯಡಿ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಸುತ ಇರುವ ಬಸ್ಗಳಲ್ಲಿ ಜನದಟ್ಟಣೆ ತಪ್ಪಿಸುವ ಉದ್ದೇಶದಿಂದ ಬಸ್ಗಳ ಟ್ರಿಪ್ ಅಧಿಕಗೊಳಿಸಲಾಗಿದೆ ಎಂದರು.
ವೇಳಾಪಟ್ಟಿ ಹಾಕದ ಕಾರಣ ಯಾವ ಸಮಯದಲ್ಲಿ ಬಸ್ ಇದೆ ಎಂಬುದು ತಮಗೆ ಗೊತ್ತಾಗುತ್ತಿಲ್ಲ. ತುಂಬಾ ಹೊತ್ತು ಕಾದರೂ ಬಸ್ ಸಿಗುವುದಿಲ್ಲ. ಹೀಗಾಗಿ, ಆಟೊ ಹಿಡಿಯಬೇಕಾದ ಪರಿಸ್ಥಿತಿ ಬಂದಿದೆ ಎಂಬುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ.
7.8 ಲಕ್ಷ ಪ್ರಯಾಣಿಕರು ಬಳಕೆ
ನಗರ ಸಾರಿಗೆಯ ನಾಲ್ಕು ಬಸ್ಗಳು ಕೋಲಾರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ನಾಲ್ಕು ದಿಕ್ಕುಗಳಲ್ಲಿ ನಿತ್ಯ 86 ಟ್ರಿಪ್ಗಳಲ್ಲಿ ಸಂಚರಿಸುತ್ತಿವೆ. ನ್ಯಾಯಾಲಯ ಆವರಣಕ್ಕೂ ಒಂದು ಬಸ್ ಇದೆ. ನಗರಸಭೆಯಿಂದ 13 ಬಸ್ ಶೆಲ್ಟರ್ ಕೂಡ ನಿರ್ಮಿಸಲಾಗಿದೆ. ನಗರ ಸಾರಿಗೆ ಶುರುವಾಗಿ 1 ವರ್ಷ 2 ತಿಂಗಳು ಆಗಿದೆ. ಈವರೆಗೆ 5.83 ಲಕ್ಷ (ಶಕ್ತಿ ಯೋಜನೆಯಡಿ ಮಹಿಳೆಯರು) ಸೇರಿದಂತೆ ಒಟ್ಟು 7.80 ಲಕ್ಷ ಪ್ರಯಾಣಿಕರು ಈ ವ್ಯವಸ್ಥೆ ಬಳಸಿಕೊಂಡಿದ್ದಾರೆ. ಇನ್ನೂ ಹಲವು ಪ್ರದೇಶಗಳಿಗೆ ನಗರ ಸಾರಿಗೆ ವ್ಯವಸ್ಥೆ ವಿಸ್ತರಿಸಿದ್ದೇವೆ. ಎಲ್ಲಾ ಬಸ್ಗಳು ಸಮರ್ಪಕವಾಗಿ ಸಂಚಾರ ನಡೆಸುತ್ತಿವೆ. ನಗರದ ಕೆಲ ಬಡಾವಣೆಗಳಲ್ಲಿ ಸಂಚಾರಕ್ಕೆ ತೊಂದರೆ ಆಗುತ್ತದೆ. ಮುಂದಿನ ದಿನಗಳಲ್ಲಿ ಜನರ ಬೇಡಿಕೆಗೆ ತಕ್ಕಂತೆ ಸೇವೆ ನೀಡುತ್ತೇವೆ
–ಎನ್.ಶ್ರೀನಾಥ್, ಕೆಎಸ್ಆರ್ಟಿಸಿ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ
ನಗರ ಸಾರಿಗೆ ಅವೈಜ್ಞಾನಿಕವಾಗಿದೆ
ಕೋಲಾರ ನಗರ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ, ಪೂರ್ಣ ಪ್ರಮಾಣದಲ್ಲಿ ಜಾರಿ ಆಗಬೇಕೆಂದು ನಾನು ಹಲವಾರು ವರ್ಷಗಳಿಂದ ಹೋರಾಟ ನಡೆಸಿದ್ದೇನೆ. ನಗರಕ್ಕೆ ಬಂದು ಹೋಗುವವರು ಸೇರಿ ಎರಡೂವರೆ ಲಕ್ಷ ಜನಸಂಖ್ಯೆ ಇದೆ. ನಗರದೊಳಗೆ ಹಾಗೂ ಹೊರವಲಯಕ್ಕೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೆ ಆಟೊ, ಪ್ಯಾಸೆಂಜರ್ ಆಟೊ, ಲಗೇಜ್ ಆಟೊವೇ ಗತಿ ಆಗಿದೆ. ನಗರದ 35 ವಾರ್ಡ್ಗಳಿಗೂ ಸಂಪರ್ಕಿಸುವಂತಹ ಒಂದು ವ್ಯವಸ್ಥೆ ಆಗಬೇಕು. ಬಸ್ಗಳ ಸಂಖ್ಯೆ ಹೆಚ್ಚಿಸಬೇಕು.
ಈ ಬಗ್ಗೆ ಸಾರಿಗೆ ಅಧಿಕಾರಿಗಳನ್ನು ಕೇಳಿದರೆ ರಸ್ತೆಗಳು ಕಿರಿದಾಗಿವೆ ಎಂಬ ಸಬೂಬು ಹೇಳುತ್ತಾರೆ. ನಗರದೊಳಗೆ ಸಂಚಾರ ಇಲ್ಲದೆ ನಗರ ಸಾರಿಗೆ ಅವೈಜ್ಞಾನಿಕವಾಗಿದೆ. ನಗರ ಸಾರಿಗೆ ಎಂದು ಹೇಳಿ ಗ್ರಾಮಾಂತರ ಪ್ರದೇಶಕ್ಕೆ ಹೋಗುತ್ತಿದ್ದಾರೆ. ನಗರದ ಹೊರವಲಯಕ್ಕೆ ಬಸ್ಗಳಿದ್ದರೂ ಸರಿಯಾಗಿ ಬೋರ್ಡ್, ಸ್ಟಾಪ್, ವೇಳಾಪಟ್ಟಿ ಇಲ್ಲ. ಮನಸ್ಸಿಗೆ ಬಂದಂತೆ ಸಂಚರಿಸುತ್ತಿದ್ದು, ಕೈ ಅಡ್ಡಹಾಕಿದರೂ ಚಾಲಕರು ಬಸ್ಸು ನಿಲ್ಲಿಸುವುದಿಲ್ಲ. ಇನ್ನು ಕಂಡಕ್ಟರ್ ಬಳಿ ಚಿಲ್ಲರೆ ಇಲ್ಲವೆಂದು ಹತ್ತಿಸಿಕೊಳ್ಳುವುದಿಲ್ಲ. ಕಾಲೇಜು ಮಕ್ಕಳಿಗೆ ತೊಂದರೆ ಆಗಿದೆ. ಹಳೆ ಬಸ್ ನಿಲ್ದಾಣವನ್ನು ನಗರ ಸಾರಿಗೆ ವ್ಯವಸ್ಥೆಗೆ ಬಳಸಿಕೊಂಡು ಕ್ರಮಬದ್ಧ ಸಂಚಾರಕ್ಕೆ ಕ್ರಮ ವಹಿಸಬೇಕು. ಚಾಲಕರು, ನಿರ್ವಾಹಕರಿಗೆ ನಗರ ಭತ್ಯೆ ನೀಡುತ್ತಾರೆ. ಹಾಗೆಯೇ ನಗರಸಭೆಯಿಂದ ನಿವಾಸಿಗಳಿಂದ ಸಾರಿಗೆ ಸೆಸ್ ಕಟ್ಟಿಸಿಕೊಳ್ಳುತ್ತಾರೆ. ಸೇವೆ ಮಾತ್ರ ಸರಿಯಾಗಿ ನೀಡುತ್ತಿಲ್ಲ
–ಡಿ.ನಾಗರಾಜ ಶೆಣೈ, ನಗರ ಸಾರಿಗೆ ಹೋರಾಟಗಾರ, ಕೋಲಾರ
ಅಂತರಗಂಗೆಗೆ ಬಸ್ ಇಲ್ಲ!
ಕೋಲಾರ ನಗರದಿಂದ ಪ್ರವಾಸಿ ತಾಣ ಅಂತರಗಂಗೆಗೆ ನಗರ ಸಾರಿಗೆ ವ್ಯವಸ್ಥೆಯೇ ಇಲ್ಲ. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬರುವ ಪ್ರವಾಸಿಗರು, ಸ್ಥಳೀಯರು ಆಟೊಗಳನ್ನೇ ಅವಲಂಬಿಸಬೇಕಾಗಿದೆ. ನಗರ ಸಾರಿಗೆ ಅವೈಜ್ಞಾನಿಕವಾಗಿರುವುದಕ್ಕೆ ಇದೊಂದು ಉದಾಹರಣೆ. ಕಳೆದ ವರ್ಷ ಮೂರು ತಿಂಗಳು ಈ ಮಾರ್ಗದಲ್ಲಿ ಒಂದೆರಡು ಟ್ರಿಪ್ ಇತ್ತಾದರೂ ಪ್ರಯಾಣಿಕರು ಇಲ್ಲದೆ ನಷ್ಟದ ಕಾರಣ ನಿಲ್ಲಿಸಲಾಗಿದೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ನ್ಯಾಯಾಲಯ ಆವರಣಕ್ಕೆ ಬೆಳಿಗ್ಗೆ ಒಂದು ಟ್ರಿಪ್, ಸಂಜೆ ಒಂದು ಟ್ರಿಪ್ ಇದೆ. ಆದರೆ, ನಗರದೊಳಗಿನ ಹಲವು ದೂರದ ಪ್ರದೇಶಗಳಿಗೆ ನಗರ ಸಾರಿಗೆ ಸಂಪರ್ಕ ಕಲ್ಪಿಸಿಲ್ಲ.
ನಗರ ಸಾರಿಗೆ ಮಾಹಿತಿ (ಕೋಲಾರ ಬಸ್ ನಿಲ್ದಾಣದಿಂದ)
ಜಿಲ್ಲಾಧಿಕಾರಿ ಕಚೇರಿವರೆಗೆ ನಿತ್ಯ 19 ಟ್ರಿಪ್ (ವಡಗೂರು ಗೇಟ್ವರೆಗೆ–15 ಟ್ರಿಪ್)–ಮುಳಬಾಗಿಲು ರಸ್ತೆ
ಛತ್ರಕೋಡಹಳ್ಳಿವರೆಗೆ–23 ಟ್ರಿಪ್, ಪಾರ್ಶ್ವಗಾನಹಳ್ಳಿಗೆ ಬೆಳಿಗ್ಗೆ, ಸಂಜೆ ಟ್ರಿಪ್–ಟೇಕಲ್ ರಸ್ತೆ
ದಿಂಬಾ ಗೇಟ್ವರೆಗೆ–26 ಟ್ರಿಪ್–ಬಂಗಾರಪೇಟೆ ರಸ್ತೆ
ಸಂಗೊಂಡನಹಳ್ಳಿವರೆಗೆ –12 ಟ್ರಿಪ್ (ವೇಮಗಲ್ಗೆ ಬೆಳಿಗ್ಗೆ 2 ಟ್ರಿಪ್, ಸಂಜೆ 2 ಟ್ರಿಪ್)–ಚಿಕ್ಕಬಳ್ಳಾಪುರ ರಸ್ತೆ
ಬೆಥನಿ ಗಾರ್ಮೆಂಟ್ಸ್–ಬೆಳಿಗ್ಗೆ 8.30, ಸಂಜೆ 5.30ಕ್ಕೆ ಬಸ್–ಬೆಂಗಳೂರು ರಸ್ತೆ
ನಗರದಲ್ಲಿ ನ್ಯಾಯಾಲಯಕ್ಕೆ ಬೆಳಿಗ್ಗೆ, ಸಂಜೆ ಟ್ರಿಪ್
ಮಂಗಸಂದ್ರ ಬೆಂಗಳೂರು ಉತ್ತರ ವಿ.ವಿ ಕೇಂದ್ರದವರೆಗೆ–2 ಟ್ರಿಪ್, ಮಾಲೂರು ರಸ್ತೆ
ಒಟ್ಟು 4 ಬಸ್, 86 ಟ್ರಿಪ್