
ಪಾವಗಡದಲ್ಲಿ ಮಳೆ ಇಲ್ಲದೆ ಬತ್ತಿದ ಕೊಳವೆಬಾವಿಗಳು, ಕುಡಿಯುವ ನೀರಿನ ಸಮಸ್ಯೆ
ಪಾವಗಡ: ಮುಂಗಾರು ಮಳೆ ಸುರಿಯದಿದ್ದರಿಂದ ಮಳೆಗಾಲದಲ್ಲಿಯೇ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಕೊರೆಸಲಾಗಿರುವ ಕೊಳವೆಬಾವಿಗಳು ಬತ್ತಿವೆ.
ಹೊಲದಲ್ಲಿನ ಬೆಳೆ ನೀರಿಲ್ಲದೆ ಒಣಗುತ್ತಿದೆ. ಒಂದರ ಹಿಂದೆ ಒಂದರಂತೆ ಕೊಳವೆಬಾವಿ ಬತ್ತುತ್ತಿವೆ. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಹಲವು ಗ್ರಾಮಗಳಲ್ಲಿದೆ. ಕೃಷಿಯನ್ನೇ ನಂಬಿಕೊಂಡಿರುವ ಕುಟುಂಬಗಳು ಬೆಳೆ ನಷ್ಟದಿಂದ ಕಂಗಾಲಾಗಿವೆ.
ಇದು ತಾಲ್ಲೂಕಿನ ಪ್ರಸಕ್ತ ಚಿತ್ರಣ. ರಾಜವಂತಿ, ಕೋಟಗುಡ್ಡ, ಕಿಲಾರ್ಲಹಳ್ಳಿ, ಸಾಸಲಕುಂಟೆ ಸೇರಿದಂತೆ ತಾಲ್ಲೂಕಿನ ಶೇ 80ರಷ್ಟು ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೊರೆಸಲಾದ ಕೊಳವೆಬಾವಿಗಳಲ್ಲಿ ನೀರು ಬತ್ತಿದೆ. ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ.ತಾಲ್ಲೂಕಿನ ನಾಲ್ಕು ಹೋಬಳಿಗಳಿಗೂ ತುಂಗಭದ್ರಾ ಕುಡಿಯುವ ನೀರು ಮಾತ್ರ ಆಸರೆಯಾಗಿದೆ. ವಿದ್ಯುತ್ ಸಮಸ್ಯೆ, ವಿವಿಧ ಕಾಮಗಾರಿಗಳಿಂದಾಗಿ ಪೈಪ್‌ಲೈನ್‌ಗೆ ಹಾನಿಯಾದಾಗ ನೀರಿನ ಸರಬರಾಜು ನಿಂತು ಹೋಗುತ್ತದೆ. ಅಂತಹ ಸಂದರ್ಭದಲ್ಲಿ ಹನಿ ನೀರು ಸಿಗುವುದಿಲ್ಲ. ಮಳೆಗಾಲದಲ್ಲಿಯೇ ಕುಡಿಯುವ ನೀರಿಗಾಗಿ ತತ್ವಾರ ಉಂಟಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿದೆ.
ತುಂಗಭದ್ರಾ ಯೋಜನೆಯಿಂದ ಮಾತ್ರ ಪಟ್ಟಣ, ಗ್ರಾಮಗಳಿಗೆ ನೀರು ಸರಬರಾಜಾಗುತ್ತಿದೆ. ಇಲ್ಲವಾದಲ್ಲಿ ಪಟ್ಟಣ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ತಲೆದೋರುತ್ತಿತ್ತು ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಸಮಸ್ಯೆಯ ತೀವ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ರಾಜವಂತಿ, ಕೋಟಗುಡ್ಡ, ಮರಿದಾಸನಹಳ್ಳಿ, ಬೂದಿಬೆಟ್ಟ ಸೇರಿದಂತೆ ಸಾಕಷ್ಟು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳಲ್ಲಿ ಹನಿ ನೀರು ಇಲ್ಲ. ತುಂಗಭದ್ರಾ ಯೋಜನೆಯಿಂದ ಹರಿಸಲಾಗುವ ನೀರಿಗಾಗಿ ಕಾದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಕೋಟಗುಡ್ಡ ಗ್ರಾಮವೊಂದರಲ್ಲಿ ಸುಮಾರು 950 ಮನೆಗಳಿವೆ, 5ರಿಂದ 6 ಸಾವಿರ ಜನಸಂಖ್ಯೆ ಇದೆ. ಈ ಗ್ರಾಮದಲ್ಲಿರುವ ಎಲ್ಲ ಕೊಳವೆಬಾವಿ ಬತ್ತಿವೆ. 6 ಸಾವಿರ ಮಂದಿ ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ತಾಂತ್ರಿಕ ಕಾರಣಗಳಿಂದಾಗಿ ತುಂಗಭದ್ರಾ ಯೋಜನೆಯ ನೀರು ಸ್ಥಗಿತಗೊಂಡಲ್ಲಿ ಗ್ರಾಮಸ್ಥರ ಸ್ಥಿತಿ ಹೇಳತೀರದು. ಇದು ಇದೊಂದು ಗ್ರಾಮದ ಕಥೆಯಲ್ಲ. ತಾಲ್ಲೂಕಿನ ಬಹುತೇಕ 100ಕ್ಕೂ ಹೆಚ್ಚಿನ ಗ್ರಾಮಗಳ ಜನತೆ ಇದೇ ಸ್ಥಿತಿಎದುರಿಸುತ್ತಿದ್ದಾರೆ.ತುಂಗಭದ್ರಾ ಜಲಾಶಯದಲ್ಲಿ ನೀರಿದೆ. ಒಂದು ವೇಳೆ ಬೆಳೆಗಳಿಗೆ ನೀರು ಹರಿಸಿ ಬೇಸಿಗೆ ವೇಳೆಗೆ ನೀರುಖಾಲಿಯಾದರೆ ಎಲ್ಲಿಂದ ನೀರು ಸರಬರಾಜು ಮಾಡಬೇಕು. ಬೇಸಿಗೆಯಲ್ಲಿ ಜಾನುವಾರುಗಳ ಸ್ಥಿತಿ ಹೇಗಿರುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ ಎನ್ನುತ್ತಾರೆ ರೈತರು.ತೋಟಗಾರಿಕೆ ಬೆಳೆಗಳು ಒಣಗುತ್ತಿವೆ. ಅಲ್ಪಕಾಲಿಕ ಬೆಳೆಗಳಾದ ತೊಗರಿ, ಶೇಂಗಾ, ಜೋಳ ಇತ್ಯಾದಿ ಬೆಳೆಗಳು ಈಗಾಗಲೇ ನೆಲ ಕಚ್ಚಿವೆ. ಕುಡಿಯಲು ನೀರಿಲ್ಲ, ಬೆಳೆಗಳಿಗೆ ಎಲ್ಲಿಂದ ನೀರು ತರಬೇಕು ಎಂಬುದು ರೈತರ ಪ್ರಶ್ನೆ.
ತಾಲ್ಲೂಕಿನಲ್ಲಿ ನದಿ ಆಧಾರಿತ ನೀರಾವರಿ ವ್ಯವಸ್ಥೆ ಇಲ್ಲದಿದ್ದರಿಂದ ಹಲವು ಗ್ರಾಮಗಳ ಕೃಷಿ, ಕುಡಿಯುವ ನೀರಿಗೆ ಅಂತರ್ಜಲ ಪ್ರಮುಖ ಆಧಾರವಾಗಿದೆ. ಆದರೆ ಕೆರೆ– ಕಟ್ಟೆಗಳಲ್ಲಿ ನೀರು ನಿಲ್ಲದಿದ್ದರೆ ಅಂತರ್ಜಲ ಮರುಪೂರಣವಾಗುವುದಿಲ್ಲ. ನಿರಂತರವಾಗಿ ಬೋರ್‌ವೆಲ್‌ಗಳ ಮೂಲಕ ನೀರು ಎತ್ತುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.
‘ಬೋರ್‌ವೆಲ್ ಇದೆ; ನೀರಿಲ್ಲ. ವಿದ್ಯುತ್ ಇದೆ; ಮೋಟಾರ್ ಪಂಪ್ ಓಡಿಸಲು ನೀರಿಲ್ಲ. ಹೊಲ ಇದೆ; ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎನ್ನುವುದು ತಾಲ್ಲೂಕಿನ ರೈತರ ಅಳಲು.