
ಲಾರಿಗೆ ಬಸ್ ಡಿಕ್ಕಿ: ಒಂದೂವರೆ ವರ್ಷದ ಮಗು ಸಾವು, 15 ಮಂದಿಗೆ ಗಾಯ
ಅಂಕೋಲಾ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ನಡುವೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಶಿರೂರು ಬಳಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ.
ಅರ್ಚಿತ್ ನಿತ್ಯಾನಂದ ತಾಂಡೇಲ ಮೃತ ಮಗು. ಮಗುವಿನ ಪೋಷಕರಾದ ನಿತ್ಯಾನಂದ ತಾಂಡೇಲ ಮತ್ತು ಅರ್ಚನಾ ತಾಂಡೇಲ ಗಾಯಗೊಂಡಿದ್ದು, ಇಬ್ಬರಿಗೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿ 24 ಮಂದಿ ಪ್ರಯಾಣಿಕರು ಇದ್ದರು.
‘ಬಸ್ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ, ಬಸ್ ತಿರುಗಿಸಿದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ’ ಎಂದು ಪ್ರಯಾಣಿಕರು ದೂರಿದ್ದಾರೆ.
‘ಶಿರೂರು ಗ್ರಾಮದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾಗಿ 13 ವರ್ಷವಾದರೂ ಪೂರ್ಣಗೊಂಡಿಲ್ಲ. ಐಆರ್‌ಬಿ ಕಂಪನಿಯ ಕಾಮಗಾರಿ ವಿಳಂಬ ಹಾಗೂ ನಿರ್ಲಕ್ಷ್ಯದಿಂದ ಅಪಘಾತಳು ಸಂಭವಿಸುತ್ತವೆ’ ಎಂದು ಸ್ಥಳೀಯರು ದೂರಿದರು.
ಡಿವೈಎಸ್‌ಪಿ ಗಿರೀಶ, ಪೊಲೀಸ್ ಇನ್‌ಸ್ಪೆಕ್ಟರ್ ಚಂದ್ರಶೇಖರ ಮಠಪತಿ ಮತ್ತು ಪಿಎಸ್‌ಐಗಳಾದ ಗುರುನಾಥ ಹಾದಿಮನಿ, ಲಲಿತಾ ರಜಪೂತ ಮತ್ತು ಸುನೀಲ ಹುಲ್ಲೊಳ್ಳಿ ಸ್ಥಳಕ್ಕೆ ಭೇಟಿ ನೀಡಿದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.