
ಗದಗ ಜಿಲ್ಲೆಯಲ್ಲಿ ಬಹಿರ್ದೆಸೆಗೆ ಬಯಲೇ ಆಧಾರ
ಗದಗ: ಜಿಲ್ಲೆಯನ್ನು ಬಯಲು ಶೌಚ ಮುಕ್ತವೆಂದು 2018ರಲ್ಲೇ ಘೋಷಿಸಲಾಗಿದೆ. ಆದರೆ, ಚೊಂಬು ಹಿಡಿದು, ಕೆರೆಗಳನ್ನಾಶ್ರಯಿಸಿ ಬಹಿರ್ದೆಸೆಗಾಗಿ ಬಯಲಿಗೆ ತೆರಳುವ ಪರಿಪಾಠ ಜಿಲ್ಲೆಯ ಹಲವೆಡೆ ಇನ್ನೂ ಜೀವಂತವಾಗಿದೆ.
ವಿವಿಧ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು, ಕೆರೆಗಳ ಬಳಿ ಕಾಲಿಡಲು ಅಸಹ್ಯವಾಗುವಷ್ಟರ ಮಟ್ಟಿಗೆ ಬಯಲಲ್ಲಿ ಬಹಿರ್ದೆಸೆಗೆ ಹೋಗಲಾಗುತ್ತಿದೆ. ಮುಂಜಾನೆಯಂತೂ ಮಂದಿ ಸಾಲು ಸಾಲಾಗಿ ಚೊಂಬು ಹಿಡಿದು ಬಯಲಿಗೆ ತೆರಳುತ್ತಾರೆ. ಇದು ‘ಬಯಲು ಶೌಚ ಮುಕ್ತ ಜಿಲ್ಲೆ’ ಎಂಬ ಹಣೆಪಟ್ಟಿಗೆ ಕೆಸರು ಎರಚಿದಂತಿದೆ.
ಮಾಲಿನ್ಯ: ಗ್ರಾಮೀಣ ಭಾಗದಲ್ಲಿ ಹಲವರು ಬಯಲು ಶೌಚಕ್ಕೆ ಹೋಗುವುದರಿಂದ ಇಡೀ ಪ್ರದೇಶ ಮಲಿನವಾಗುತ್ತಿದೆ. ಮಳೆಯಾದರೆ ಜಲಮೂಲಗಳಿಗೆ ಕೊಳಕು ಸೇರಿ, ನೀರು ಹೊಲಸಾಗುತ್ತಿದೆ. ಇಂತಹ ನೀರಿನಲ್ಲೇ ಈಜಾಡುವುದು, ಜಾನುವಾರುಗಳನ್ನು ತೊಳೆಯುವುದು ಸಾಮಾನ್ಯವಾಗಿದೆ. ನೀರಿನೊಳಗಿನ ಹಾಗೂ ಹೊರಗಿನ ಪ್ರಾಣಿ–ಪಕ್ಷಿಗಳಿಗೆ ಇದೇ ನೀರು ದಣಿವಾರಿಸುತ್ತಿದೆ.
‘ಬಯಲಿನಲ್ಲಿ ಮಲ–ಮೂತ್ರ ವಿಸರ್ಜನೆ ಮಾಡುವುದರಿಂದ ಕೀಟಗಳ ಮೂಲಕ ರೋಗ ಹರಡುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ದುರ್ವಾಸನೆಯಿಂದ ಜನರು ಓಡಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರ ಘನತೆಗೂ ಕುಂದುಂಟಾಗುತ್ತಿದೆ’ ಎನ್ನುತ್ತಾರೆ ವಿವಿಧ ಗ್ರಾಮಗಳ ಜನರು.
ಶೌಚಾಲಯ ನಿರ್ಮಾಣಕ್ಕೆ ಕ್ರಮ: ‘ಜಲ ಜೀವನ್ ಮಿಷನ್ ಸಮೀಕ್ಷೆಯಂತೆ ಗದಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 2 ಲಕ್ಷ ಕುಟುಂಬಗಳಿವೆ. ಸ್ವಚ್ಛ ಭಾರತ್ ಮಿಷನ್ ಅಡಿ 15 ಲಕ್ಷ ಕುಟುಂಬಗಳಿಗೆ ಈಗಾಗಲೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ 39 ಸಾವಿರ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಲು ಆಗುವುದಿಲ್ಲ. ಉಳಿದಂತೆ ಶೌಚಾಲಯ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅಧಿಕಾರಿಗಳು ತಿಳಿಸಿದರು.
‘ಜಿಲ್ಲೆಯ ವಿವಿಧೆಡೆ 112 ಸಮುದಾಯ ಶೌಚಾಲಯಗಳಿದ್ದು, ಕೆಲವೆಡೆ ಗ್ರಾಮ ಪಂಚಾಯಿತಿಯಿಂದ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಸೋಮವಾರ, ಶಾಲಾ ಮಕ್ಕಳು–ಸ್ವಸಹಾಯ ಸಂಘ ಹಾಗೂ ಸ್ವಾಮೀಜಿ ಕಡೆಯಿಂದ ಜಾಗೃತಿ ಮೂಡಿಸಲಾಗುತ್ತಿತ್ತು. ಇಂತಹ ಮಾಹಿತಿ ಶಿಕ್ಷಣ ಕಾರ್ಯಕ್ರಮಕ್ಕೆ ಪ್ರತ್ಯೇಕ ಹಣ ನೀಡಲಾಗುತ್ತಿತ್ತು. ಎರಡ್ಮೂರು ವರ್ಷಗಳಿಂದ ಇದಕ್ಕೆ ಅನುದಾನ ಸಿಗದೆ, ಈ ಕಾರ್ಯಕ್ರಮಗಳನ್ನೂ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ’ ಎಂದರು.
‘ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳೀಕರಣ’
‘ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳಲು ಗ್ರಾಮ ಪಂಚಾಯಿತಿಯಲ್ಲೇ ಅರ್ಜಿ ಸಲ್ಲಿಸಬೇಕೆಂದಿಲ್ಲ. ಮೊಬೈಲ್ ಫೋನ್ ಮೂಲಕವೂ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದ ಜನರಿಗೆ ₹12 ಸಾವಿರ, ಪರಿಶಿಷ್ಟರಿಗೆ ₹20 ಸಾವಿರ ಸಹಾಯಧನ ನೀಡಲಾಗುತ್ತದೆ’ ಎಂದು ಸ್ವಚ್ಛ ಭಾರತ ಯೋಜನೆಯ ನೋಡಲ್ ಅಧಿಕಾರಿ ಎಂ.ವಿ ಚಳಗೇರಿ ತಿಳಿಸಿದರು.
‘ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾಗ್ರಹಿ ಹೆಸರಿನ ಸ್ವಯಂಸೇವಕರ ಮೂಲಕ ಜಾಗೃತಿ ಮೂಡಿಸಲಾಗುತ್ತಿತ್ತು. ಈಗ ಸಂಜೀವಿನ ಮಹಿಳಾ ಸಂಘದವರನ್ನು ಜಾಗೃತಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.