
ಹೊನ್ನಾಳಿ| ಒಳಪಂಗಡಗಳ ಸ್ವಾಮೀಜಿಗಳು ಮೊದಲು ಒಂದಾಗಬೇಕು: ಎಂ.ಪಿ. ರೇಣುಕಾಚಾರ್ಯ
ಹೊನ್ನಾಳಿ: ‘ನಾವೆಲ್ಲರೂ ಸಣ್ಣತನ ಬಿಟ್ಟು ವೀರಶೈವ, ಲಿಂಗಾಯತ ಸಮಾಜದ ಬಲವರ್ಧನೆಗೆ ಮುಂದಾಗಬೇಕು’ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ನೂತನ ಅಧ್ಯಕ್ಷರು, ಪದಾಧಿಕಾರಿಗಳಿಗಾಗಿ ಭಾನುವಾರ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಮಹಾಸಭಾದ ಎಲ್ಲಾ ಒಳಪಂಗಡಗಳಲ್ಲಿ ಸಂಬಂಧಗಳು ಬೆಳೆಯಬೇಕು. ಇಲ್ಲದಿದ್ದರೆ ಪ್ರತಿಯೊಬ್ಬರೂ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗುತ್ತಾರೆ’ ಎಂದು ಹೇಳಿದರು.
‘ಗುರುಗಳು, ವಿರಕ್ತರು, ಪಂಚಾಚಾರ್ಯರು ಎಂದು ಸಮುದಾಯ ಹರಿದು ಹಂಚಿಹೋಗಿದೆ. ರಾಜಕಾರಣ ಬದಿಗೊತ್ತಿ ನಾವೆಲ್ಲಾ ಒಂದಾಗಬೇಕು. ಭಕ್ತರು ಸರಿ ಇದ್ದರೂ ಸ್ವಾಮೀಜಿಗಳಲ್ಲಿ ಹೊಂದಾಣಿಕೆ ಇಲ್ಲ. ಆದ್ದರಿಂದ ಎಲ್ಲಾ ಒಳಪಂಗಡಗಳ ಸ್ವಾಮೀಜಿಗಳು ಮೊದಲು ಒಂದಾಗಬೇಕು. ನಂತರ ವೀರಶೈವರು, ಲಿಂಗಾಯತರೆಲ್ಲಾ ಒಂದು ಎಂಬ ಸಂದೇಶ ಕೊಡಬೇಕು’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಲಹೆ ನೀಡಿದರು.
‘ಹೊನ್ನಾಳಿಯಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪನೆಯಾಗಬೇಕು’ ಎಂದು ನೊಳಂಬ ಲಿಂಗಾಯತ ಸಂಘದ ಕೇಂದ್ರ ಸಮಿತಿಯ ಉಪಾಧ್ಯಕ್ಷ ರುದ್ರೇಗೌಡ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ಡಿ.ಜಿ. ಶಾಂತನಗೌಡ, ‘ಡಿಸೆಂಬರ್ ತಿಂಗಳಲ್ಲಿ ತಾಲ್ಲೂಕು ಕಚೇರಿ ಮುಂಭಾಗದ ಒಂದು ಬದಿಯಲ್ಲಿ ಬಸವಣ್ಣನವರ ಪ್ರತಿಮೆ, ಇನ್ನೊಂದು ಬದಿಯಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ನಾವೆಲ್ಲರೂ ನಿರ್ಧರಿಸಿದ್ದೇವೆ’ ಎಂದರು.
ನೂತನ ಅಧ್ಯಕ್ಷ ಪಿ. ಚನ್ನವೀರಪ್ಪ ಗೌಡ, ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಮಹಾಸಭಾದ ರಾಜ್ಯ ಘಟಕದ ಕಾರ್ಯದರ್ಶಿ ಎಂ.ಜಿ. ಶಶಿಕಲಾ, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಐಗೂರು, ತಾಲ್ಲೂಕು ಘಟಕದ ಖಜಾಂಚಿ ರಮೇಶ್ ಗೌಡ, ಉಪಾಧ್ಯಕ್ಷ ಮಧುಗೌಡ, ವೈದ್ಯ ರಾಜಕುಮಾರ್, ಚುನಾವಣಾಧಿಕಾರಿ ರುದ್ರಪ್ಪ ಮಾತನಾಡಿದರು.
ಪಂಚಮಸಾಲಿ ಸಮುದಾಯದ ಅಧ್ಯಕ್ಷ ಪಿ.ವೀರಣ್ಣ ಪಟ್ಟಣಶೆಟ್ಟಿ, ಬಣಜಿಗರ ಸಂಘದ ಅಧ್ಯಕ್ಷ ಅಂದಾನಿ ಗಂಗಾಧರ, ಕುಂಬಾರ ಲಿಂಗಾಯತ ಸಮುದಾಯದ ಅಧ್ಯಕ್ಷ ರಾಜಣ್ಣ, ಬೇಡಜಂಗಮ ಸಮುದಾಯದ ಅಧ್ಯಕ್ಷ ಪಂಚಾಕ್ಷರಯ್ಯ, ಕುಂಚಿಟಿಗ ಲಿಂಗಾಯತ ಸಮುದಾಯದ ಅಧ್ಯಕ್ಷ ಟಿ.ಎಚ್. ಮಹೇಶ್ವರಪ್ಪ, ಸಾಧು ವೀರಶೈವ ಸಮುದಾಯದ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಮುಖಂಡರಾದ ಹರಿಹರದ ಶಿವಾನಂದಪ್ಪ, ದಾವಣಗೆರೆಯ ಅವಿನಾಶ, ಉಮೇಶ್ ಉಪಸ್ಥಿತರಿದ್ದರು.
ಮಹಾಸಭಾದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನೆಲಹೊನ್ನೆ ಮಂಜುನಾಥ್ ಕಾರ್ಯಕ್ರಮ ನಡೆಸಿಕೊಟ್ಟರು.