ಬೆಳೆ ವಿಮೆ: ರಾಗಿಗೆ ಸಿಂಹಪಾಲು, ತೊಗರಿಗೆ ಶೂನ್ಯ

ಬೆಳೆ ವಿಮೆ: ರಾಗಿಗೆ ಸಿಂಹಪಾಲು, ತೊಗರಿಗೆ ಶೂನ್ಯ

ಬೆಳೆ ವಿಮೆ: ರಾಗಿಗೆ ಸಿಂಹಪಾಲು, ತೊಗರಿಗೆ ಶೂನ್ಯ

ಬಂಗಾರಪೇಟೆ: ಹವಾಮಾನ ಬದಲಾವಣೆ, ಅನಿಯಮಿತ ಮಳೆ ಹಾಗೂ ಪ್ರಕೃತಿ ವಿಕೋಪಗಳಿಂದ ಕೃಷಿ ಕ್ಷೇತ್ರದಲ್ಲಿ ನಷ್ಟ ಅನುಭವಿಸುತ್ತಿರುವ ರೈತರು, ತಾವು ಬೆಳೆಯುವ ಬೆಳೆಗಳಿಗೆ ಆರ್ಥಿಕ ಭದ್ರತೆಗಾಗಿ ಬೆಳೆ ವಿಮೆಯತ್ತ ಚಿತ್ತ ಹರಿಸುತ್ತಿದ್ದಾರೆ.

ತಾಲೂಕಿನಲ್ಲಿ ವಿವಿಧ ಬೆಳೆಗಳಿಗೆ 2026ರ ಆಗಸ್ಟ್ 17ರವರೆಗೆ ಒಟ್ಟಾರೆ 11,033 ವಿಮಾ ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು 4,020.58 ಹೆಕ್ಟೇರ್ ಕೃಷಿ ಭೂಮಿ ವಿಮಾ ಭದ್ರತೆಯ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಕೃಷಿ ತಾಂತ್ರಿಕ ಅಧಿಕಾರಿ ಜ್ಯೋತಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಪ್ರಮುಖ ಕೃಷಿ ವಲಯದಲ್ಲಿ ಶೇ 80ಕ್ಕೂ ಹೆಚ್ಚು ಕೃಷಿ ಚಟುವಟಿಕೆಗಳು ಮಳೆಯನ್ನೇ ಅವಲಂಬಿಸಿವೆ. ಇತ್ತೀಚೆಗೆ ಅನಿಶ್ಚಿತ ಮಳೆ, ಸತತ ಬರ ಹಾಗೂ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಗೊಳಗಾಗುತ್ತಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇಂತಹ ಸವಾಲುಗಳ ಸಂದರ್ಭದಲ್ಲಿ ರೈತರು ಸಾಲದ ಸುಳಿಯಿಂದ ಪಾರಾಗಲು ಬೆಳೆ ವಿಮೆಯು ಪ್ರಮುಖ ಸುರಕ್ಷತಾ ಕವಚವಾಗಿ ರೂಪುಗೊಳ್ಳುತ್ತಿದೆ.

ತಾಲ್ಲೂಕಿನ ಪ್ರಮುಖ ಆಹಾರ ಹಾಗೂ ಸಾಂಪ್ರದಾಯಿಕ ಬೆಳೆಯಾದ ರಾಗಿಗೆ ರೈತ ಸಮುದಾಯದಿಂದ ಬೆಳೆವಿಮೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಸಲ್ಲಿಕೆಯಾದ ಒಟ್ಟು 11,033 ಅರ್ಜಿಗಳ ಪೈಕಿ ಶೇ 96.24ರಷ್ಟು (10,619 ಅರ್ಜಿಗಳು) ರಾಗಿ ಬೆಳೆಗಾಗಿ ಮಾಡಿಸಲಾದ ವಿಮೆಗಳೇ ಆಗಿವೆ.

ರಾಗಿ ಬೆಳೆಯ ವಿಮೆಗಾಗಿ ಒಟ್ಟು 10,619 ಅರ್ಜಿಗಳ ಮೂಲಕ 3,867.71 ಹೆಕ್ಟೇರ್ ವಿಮಾ ವ್ಯಾಪ್ತಿಗೆ ಬಂದಿದ್ದು, ವಾಣಿಜ್ಯ ಬೆಳೆ ಶೇಂಗಾಕ್ಕೆ 347 ಅರ್ಜಿಗಳು ಸಲ್ಲಿಕೆಯಾಗಿದ್ದು, 120.40 ಹೆಕ್ಟೇರ್‌ ಭೂಮಿ ವಿಮೆಗೆ ನೋಂದಣಿಯಾದಂತಾಗಿದೆ.

ತೋಟಗಾರಿಕೆ ಬೆಳೆಗಳಿಗೆ 42 ಅರ್ಜಿಗಳು ಸಲ್ಲಿಕೆಯಾಗಿದ್ದು, ನೀರಾವರಿ ಆಶ್ರಿತ ಭತ್ತದ ಬೆಳೆಗೆ ಕೇವಲ 25 ಅರ್ಜಿಗಳು ಸಲ್ಲಿಕೆಯಾಗಿವೆ. ಒಂದೆಡೆ ರಾಗಿ ಬೆಳೆಗೆ ಹೆಚ್ಚಿನ ರೈತರು ವಿಮೆ ಮಾಡಿಸಿಕೊಂಡಿದ್ದಾರೆ. ಇನ್ನೊಂದೆಡೆ ತಾಲ್ಲೂಕಿನ ಪ್ರಮುಖ ದ್ವಿದಳ ಧಾನ್ಯವಾಗಿರುವ ತೊಗರಿಗೆ ಒಂದೇ–ಒಂದು ವಿಮೆ ಅರ್ಜಿ ಸಲ್ಲಿಕೆಯಾಗಿಲ್ಲ. ಇದು ಕೃಷಿ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆ ಬೆಳೆಯುವ ರೈತರಲ್ಲಿ ವಿಮಾ ಯೋಜನೆ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬುದನ್ನು ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ ಎನ್ನುತ್ತಾರೆ ತಾಂತ್ರಿಕ ಅಧಿಕಾರಿ ಜ್ಯೋತಿ.

ಮುಂಬರುವ ದಿನಗಳಲ್ಲಿ ಇಲಾಖೆಯು ತೊಗರಿ, ಭತ್ತ ಹಾಗೂ ತೋಟಗಾರಿಕೆ ಬೆಳೆಗಾರರನ್ನೂ ವಿಮೆ ವ್ಯಾಪ್ತಿಗೆ ತರಲು ಪರಿಣಾಮಕಾರಿ ಕಾರ್ಯಕ್ರಮ ರೂಪಿಸಬೇಕಿದೆ. ಬೆಳೆ ಹಾನಿ ಸಂಭವಿಸಿದಾಗ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಕಾಲಮಿತಿಯಲ್ಲಿ ನೇರವಾಗಿ ರೈತರ ಖಾತೆಗೆ ಪರಿಹಾರ ಹಣ ತಲುಪಿದರೆ ಮಾತ್ರವೇ ಕೃಷಿ ವಿಮಾ ಯೋಜನೆ ಉದ್ದೇಶ ಈಡೇರಿಲಿದೆ ಎನ್ನುತ್ತಾರೆ ರೈತರು.

ಮಧ್ಯವರ್ತಿಗಳ ಹಾವಳಿ ತಪ್ಪಲಿ

ರೈತರು ಕಷ್ಟಪಟ್ಟು ಬೆಳೆ ವಿಮೆ ಕಂತು ಪಾವತಿಸಿ, ನೋಂದಣಿ ಮಾಡಿಕೊಳ್ಳುತ್ತಾರೆ. ಆದರೆ, ಬರ ಅಥವಾ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದಾಗ ವಿಮಾ ಕಂಪನಿಗಳು ತಾಂತ್ರಿಕ ಕಾರಣ ನೀಡಿ ನಷ್ಟ ಪರಿಹಾರ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ಕೃಷಿ ಇಲಾಖೆಯು ಕೇವಲ ನೋಂದಣಿಗೆ ಸೀಮಿತವಾಗದೆ, ಬೆಳೆ ಹಾನಿ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ, ವಿಮಾ ಪರಿಹಾರ ಹಣವನ್ನು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ರೈತರ ಖಾತೆಗೆ ನಿಗದಿತ ಅವಧಿಯಲ್ಲಿ ಜಮೆ ಮಾಡಲು ಕ್ರಮ ಕೈಗೊಳ್ಳಬೇಕು.

– ನಾರಾಯಣಗೌಡ ಕೆ, ರಾಜ್ಯ ಉಪಾಧ್ಯಕ್ಷ ರೈತ ಸಂಘ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-18-739022285

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ