ಕೋಲಾರ: ನಾಳೆ ಗಣೇಶ ಚತುರ್ಥಿ; ಈ ಬಾರಿ ಗಣಪ ಬಲು ದುಬಾರಿ!

ಕೋಲಾರ: ನಾಳೆ ಗಣೇಶ ಚತುರ್ಥಿ; ಈ ಬಾರಿ ಗಣಪ ಬಲು ದುಬಾರಿ!

ಕೋಲಾರ: ನಾಳೆ ಗಣೇಶ ಚತುರ್ಥಿ; ಈ ಬಾರಿ ಗಣಪ ಬಲು ದುಬಾರಿ!

ಕೋಲಾರ: ಗಣಪನ ಸ್ವಾಗತಕ್ಕೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಗಣೇಶ ಮೂರ್ತಿಗಳ ದರವೂ ಬಹಳಷ್ಟು ಹೆಚ್ಚಳವಾಗಿದೆ.

ಲಂಬೋದರನ ಪ್ರತಿಷ್ಠಾಪನೆಗೆ ಗಲ್ಲಿಗಲ್ಲಿಗಳಲ್ಲಿ ಪೆಂಡಾಲ್‌ಗಳು ತಲೆ ಎತ್ತುತ್ತಿದ್ದು, ಯುವಕರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ.

ಸೋಮವಾರ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಮನೆಗಳಲ್ಲೂ ಸಿದ್ಧತೆಗಳು ಜೋರಾಗಿವೆ.

ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ತರಹೇವಾರಿ ಗಣಪನ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಮನೆಯಲ್ಲಿ ಕೂರಿಸುವ ಸಣ್ಣ ಮೂರ್ತಿಗಳ ಜೊತೆಗೆ ಸಾರ್ವಜನಿಕ ಉತ್ಸವಗಳಿಗೆಂದೇ ದೊಡ್ಡ ಗಾತ್ರದ ಮೂರ್ತಿ ತಂದಿಟ್ಟಿದ್ದಾರೆ.

ಅರ್ಧ ಅಡಿಯಿಂದ ಹಿಡಿದು 10 ಅಡಿವರೆಗಿನ ಗಣಪನ ಮೂರ್ತಿಗಳು ಮಾರಾಟವಾಗುತ್ತಿವೆ. ಅರ್ಧ ಅಡಿ ಗಣಪನಿಗೆ ₹200 ಇದ್ದರೆ, 10 ಅಡಿ ಮೂರ್ತಿಯನ್ನು ₹30 ಸಾವಿರದವರೆಗೆ ಮಾರಾಟ ಮಾಡಲಾಗುತ್ತಿದೆ. 1 ಅಡಿ ಮೂರ್ತಿ ₹500, 2 ಅಡಿ ಮೂರ್ತಿ ₹1,500, 5 ಅಡಿಗೆ ಗಣಪನಿಗೆ ₹15 ಸಾವಿರ ದರವಿದೆ.

ವ್ಯಾಪಾರಿಗಳು ಹೇಳುವ ಪ್ರಕಾರ ಈ ಬಾರಿ ದರದಲ್ಲಿ ಬಹಳ ಏರಿಕೆ ಆಗಿದ್ದು, ಮಾರಾಟ ಇನ್ನೂ ಚುರುಕು ಪಡೆದುಕೊಂಡಿಲ್ಲ. ಭಾನುವಾರ ಹಾಗೂ ಸೋಮವಾರ ಚುರುಕು ಪಡೆದುಕೊಳ್ಳುವ ನಿರೀಕ್ಷೆಯಲ್ಲಿ ಇದ್ದಾರೆ.

‘ತಾತನ ಕಾಲದಿಂದಲೂ ಗಣೇಶ ಮೂರ್ತಿ ತಯಾರಿಸಿ ಮಾರಾಟದಲ್ಲಿ ತೊಡಗಿದ್ದೇವೆ. ಈ ಬಾರಿ ಜೇಡಿ ಮಣ್ಣಿನ ದರವೂ ಹೆಚ್ಚಿದೆ. 1 ಟ್ರಾಕ್ಟರ್‌ ಲೋಡ್‌ ಜೇಡಿಮಣ್ಣಿಗೆ ₹10 ಸಾವಿರ ಇದೆ. ಕೆರೆ ಮಣ್ಣು ಎತ್ತಲು ಸರ್ಕಾರಕ್ಕೆ ಹಣ ಕೊಡಬೇಕು’ ಎಂದು ಎಂದು ನಗರದ ಕುಂಬಾರಬೀದಿಯ ಶಶಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧಿಕಾರಿಗಳು ಎಚ್ಚರಿಕೆ ನೀಡಿದರೂ ಕೆಲವೆಡೆ ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಪಿಒಪಿ ಗಣಪನನ್ನು ತಯಾರಿಸಲು ಕಡಿಮೆ ಅವಧಿ ಸಾಕು. ಆದರೆ, ಮಣ್ಣಿನಲ್ಲಿ ಮೂರ್ತಿ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಖರ್ಚು ಕೂಡ ಹೆಚ್ಚಾಗುತ್ತದೆ. ಮಾರಾಟ ಮಾಡಲು ಕೂಡ ಸರಿಯಾದ ಜಾಗವಿಲ್ಲ. ಜಿಲ್ಲಾಡಳಿತ ಇನ್ನಾದರೂ ಶಾಶ್ವತ ಜಾಗದ ವ್ಯವಸ್ಥೆ ಮಾಡಿ ಕೊಡಬೇಕು’ ಎಂದರು.

ನಗರದ ಕಾರಂಜಿಕಟ್ಟೆಯ ನಾಗರಾಜ್‌ 25 ವರ್ಷಗಳಿಂದ ಗಣೇಶ ಮೂರ್ತಿ ಮಾರಾಟದಲ್ಲಿ ತೊಡಗಿದ್ದಾರೆ. ಇವರು ಬೆಂಗಳೂರು, ದೊಡ್ಡಬಳ್ಳಾಪುರದಿಂದ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಾರೆ.

‘ಗಣೇಶ ಮೂರ್ತಿಗಳಿಗೆ ಈ ಬಾರಿ ಬೆಲೆ ಹೆಚ್ಚಾಗಿದೆ. ಹೀಗಾಗಿ, ಮಾರಾಟವೂ ಕಡಿಮೆ ಆಗಿದೆ. ಭಾನುವಾರ ಹಾಗೂ ಸೋಮವಾರ ಉತ್ತಮ ಮಾರಾಟ ಆಗಬಹುದೆಂಬ ಆಸೆ ಇಟ್ಟುಕೊಂಡಿದ್ದೇವೆ. ಮಳಿಗೆ ಹಾಕಲು ನಗರಸಭೆಗೆ ₹2,100 ಬಾಡಿಗೆ ಕಟ್ಟಬೇಕು’ ಎಂದು ನಾಗರಾಜ್‌ ತಿಳಿಸಿದರು.

‘ನಾನು ಚಿಕ್ಕಂದಿನಿಂದಲೂ ಗಣೇಶನ ಮೂರ್ತಿ ಮಾರಾಟ ಮಾಡುತ್ತಿದ್ದೇನೆ. ಒಂದು ಮಳಿಗೆಗೆ ₹2 ಸಾವಿರಕ್ಕೂ ಅಧಿಕ ಬಾಡಿಗೆ ಕೇಳುತ್ತಾರೆ. ನೀರು, ವಿದ್ಯುತ್‌ ಸೌಲಭ್ಯ ಕಲ್ಪಿಸುವುದಾಗಿ ಮತ್ತೆ ಹಣ ಕೇಳುತ್ತಾರೆ. ಆದರೆ, ಯಾವುದೇ ಸೌಲಭ್ಯ ನೀಡಿಲ್ಲ. ವ್ಯಾಪಾರವೂ ಹೇಳಿಕೊಳ್ಳುವಂತಿಲ್ಲ’ ಎಂದು ಗಾಯತ್ರಿ ಹೇಳಿದರು.

ಪಿಒಪಿ, ಪ್ಲಾಸ್ಟಿಕ್‌ ಗಣೇಶನಿಗೆ ಅವಕಾಶ ಇಲ್ಲ

ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಒಪಿ, ರಾಸಾಯನಿಕ ಅಥವಾ ಪ್ಲಾಸ್ಟಿಕ್‌ ಗಣೇಶ ಮೂರ್ತಿ ಮಾರಾಟ ಮಾಡುವಂತಿಲ್ಲ. ಈ ಸಂಬಂಧ ದೂರು ಬಂದಿದ್ದು, ಪಿಒಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದು ಎಫ್‌ಐಆರ್‌ ದಾಖಲಿಸಿದ್ದೇವೆ. ವ್ಯಕ್ತಿಯೊಬ್ಬರನ್ನು ಬಂಧಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್‌ ತಿಳಿಸಿದ್ದಾರೆ.

ಐದು ಅಡಿಯೊಳಗಿನ ಗಣೇಶನ ಮೂರ್ತಿಗಳನ್ನು ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದಿದ್ದಾರೆ.

ಅನುಮತಿ ಕಡ್ಡಾಯ: ಆಯುಕ್ತ

ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾದಲ್ಲಿ ಕಾನೂನುಬದ್ಧವಾಗಿ ನಗರಸಭೆ, ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಕಾನೂನು ಉಲ್ಲಂಘನೆಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಸಭೆ ಆಯುಕ್ತ ವೆಂಕಟೇಶ್ ನಾಗನೂರ ಎಚ್ಚರಿಕೆ ನೀಡಿದ್ದಾರೆ.

ಪಿಓಪಿ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಪ್ರತಿಷ್ಠಾಪನೆ ಮಾಡುವಂತಿಲ್ಲ. ನಗರಸಭೆಯಿಂದ ಕೋಲಾರಮ್ಮ ಕೆರೆ ಪಕ್ಕದಲ್ಲಿ (ಕನ್ನಡ ಭವನ ಬಳಿ) ನಿರ್ಮಿಸಿರುವ ಕೃತಕ ಹೊಂಡದಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ಸೂಚಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ