
ಏಷ್ಯನ್ ಗೇಮ್ಸ್: ಭದ್ರಾವತಿಯ ಸಿಂಧುಶ್ರೀಗೆ ಕೊನೆಗೂ ಒಲಿದ ಜಪಾನ್ ‘ಟಿಕೆಟ್’
ದಾವಣಗೆರೆ: ‘ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ಅದಮ್ಯ ವಿಶ್ವಾಸ ಇತ್ತು. ಅದು ಹುಸಿಯಾಗಲಿಲ್ಲ. ಈಗ ನನ್ನೆದುರು ಇರುವುದು ಒಂದೇ ಗುರಿ. ಜಪಾನ್‌ನಲ್ಲಿ ಚೊಚ್ಚಲ ಪದಕ ಗೆದ್ದು ಅಲ್ಲಿ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡುವುದು. ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’...
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಪೋಲ್‌ವಾಲ್ಟ್ ಸ್ಪರ್ಧಿ ಜಿ.ಸಿಂಧುಶ್ರೀ ಅವರ ಭರವಸೆಯ ನುಡಿ ಇದು.
ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಗೊಂದಲದಲ್ಲಿದ್ದ ಅವರು ಈಗ ನಿರಾಳರಾಗಿದ್ದಾರೆ. ಬುಧವಾರ ಪ್ರಕಟಗೊಂಡಿರುವ ಭಾರತದ ಅಂತಿಮ 77 ಅಥ್ಲೀಟ್‌ಗಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬಡ ಕುಟುಂಬದಲ್ಲಿ ಬೆಳೆದ ಸಿಂಧುಶ್ರೀ ಜೂನ್‌ನಲ್ಲಿ ಭುವನೇಶ್ವರದಲ್ಲಿ ನಡೆದಿದ್ದ 65ನೇ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆ ಬರೆದು ಬೆರಗು ಮೂಡಿಸಿದ್ದರು. 25 ವರ್ಷ ವಯಸ್ಸಿನ ಈ ಅಥ್ಲೀಟ್ 4.25 ಮೀ. ಎತ್ತರ ಜಿಗಿದು ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಏಷ್ಯನ್ ಗೇಮ್ಸ್‌ಗೆ ನಿಗದಿಪಡಿಸಿದ್ದ ಅರ್ಹತಾ ಮಾನದಂಡ (4.10 ಮೀ.) ದಾಟಿದ್ದರು. ಆದರೆ ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಯೊಂದರಲ್ಲಿ (ವೈಯಕ್ತಿಕ) ಪ್ರತಿ ದೇಶವು ಗರಿಷ್ಠ ಇಬ್ಬರನ್ನಷ್ಟೇ ಏಷ್ಯನ್ ಗೇಮ್ಸ್‌ಗೆ ಕಳಿಸಲು ಅವಕಾಶ ಇದ್ದಿದ್ದರಿಂದ ಮೊದಲ ಪಟ್ಟಿಯಿಂದ ಇವರ ಹೆಸರು ಕೈಬಿಡಲಾಗಿತ್ತು.
‘ಮೊದಲ ಪಟ್ಟಿಯಲ್ಲಿ ಸ್ಥಾನ ಸಿಗದೇ ಇದ್ದಾಗ ಸಹಜವಾಗಿಯೇ ನಿರಾಸೆ ಆಗಿತ್ತು. ಹಾಗಂತ ಎದೆಗುಂದಲಿಲ್ಲ. ಬಾಲ್ಯದಿಂದಲೂ ಕಷ್ಟ ಅನುಭವಿಸಿಯೇ ಈ ಹಂತಕ್ಕೆ ಬಂದಿದ್ದೇನೆ. ಒಂದಲ್ಲಾ ಒಂದು ದಿನ ಪ್ರತಿಫಲ ಸಿಗಲಿದೆ ಎಂಬ ನಂಬಿಕೆ ಇತ್ತು. ಅದು ಈಗ ನಿಜವಾಗಿದೆ’ ಎಂದು ಸಿಂಧುಶ್ರೀ ಹೇಳಿದರು.
‘ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಮೂಡಿಬಂದ ಸಾಧನೆ ಕ್ರೀಡಾ ಬದುಕಿಗೆ ಹೊಸ ದಿಕ್ಕು ತೋರಿದೆ. ನನ್ನ ಮೇಲೆ ಈಗ ಬೆಟ್ಟದಷ್ಟು ನಿರೀಕ್ಷೆಗಳಿವೆ. ಏಷ್ಯನ್ ಗೇಮ್ಸ್ ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಕೇಂದ್ರದಲ್ಲಿ ಮೂರು ತಿಂಗಳಿಂದ ಕಠಿಣ ಸಿದ್ಧತೆ ಕೈಗೊಂಡಿದ್ದೇನೆ. ರಾಜ್ಯ ಸರ್ಕಾರದಿಂದ ಈಚೆಗೆ ಹೊಸ ಪೋಲ್ ನೀಡಿದ್ದು, ಅದರ ನೆರವಿನೊಂದಿಗೆ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ ಎಂದರು.
‘ಈ ತಿಂಗಳ 12ರಂದು ತಂಡದೊಂದಿಗೆ ಜಪಾನ್‌ಗೆ ಪ್ರಯಾಣ ಬೆಳೆಸಲಿದ್ದೇನೆ. 13ರಿಂದ 18ರವರೆಗೆ ಅಲ್ಲಿ ತರಬೇತಿ ಶಿಬಿರ ನಡೆಯಲಿದೆ. ಚೀನಾದ ಅಥ್ಲೀಟ್‌ಗಳ ಪೈಪೋಟಿ ಮೀರಿ ನಿಲ್ಲುವುದು ಅಷ್ಟು ಸುಲಭವಲ್ಲ ಎಂಬ ಅರಿವಿದೆ. ಹೀಗಾಗಿ ಕೋಚ್ ಎಂ.ಎಂ.ವಿಜೇಶ್ ಅವರ ಮಾರ್ಗದರ್ಶನದಲ್ಲಿ ತಾಂತ್ರಿಕವಾಗಿಯೂ ನೈಪುಣ್ಯ ಸಾಧಿಸಲು ಪ್ರಯತ್ನಿಸುತ್ತಿದ್ದೇನೆ. ಫಿಟ್‌ನೆಸ್ ಕಾಪಾಡಿಕೊಳ್ಳುವುದಕ್ಕೂ ಹೆಚ್ಚಿನ ಒತ್ತು ನೀಡಿದ್ದೇನೆ. ಪದಕ ಗೆದ್ದು ದೇಶವೇ ಹೆಮ್ಮೆ ಪಡುವಂತೆ ಮಾಡುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.