
ಕೋಲಾರ: ಸರ್ಕಾರಿ ಶಾಲೆ ಕೊಠಡಿ ಕುಸಿದು ಎರಡು ತಿಂಗಳಾದರೂ ದುರಸ್ತಿ ಇಲ್ಲ
ಕೋಲಾರ: ನಗರದ ಹಳೆಯ ಮಾಧ್ಯಮಿಕ ಸರ್ಕಾರಿ ಶಾಲೆ ಕೊಠಡಿ ಚಾವಣಿಯ ಸಿಮೆಂಟ್ ಮುಖ್ಯ ಶಿಕ್ಷಕಿ ಮೇಲೆ ಕುಸಿದು ಬಿದ್ದು ಎರಡು ತಿಂಗಳು ಕಳೆದಿದ್ದರೂ ದುರಸ್ತಿ ಮಾಡಿಲ್ಲ.
ಆ ಕೊಠಡಿಗೆ ಬೀಗ ಹಾಕಿ ಮತ್ತೊಂದು ಕೊಠಡಿಯಲ್ಲಿಯೇ ಆರು ಹಾಗೂ ಏಳನೇ ತರಗತಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಆ ಕೊಠಡಿಯ ಗೋಡೆಗಳು ಕೂಡ ಶಿಥಿಲಗೊಂಡು ಕುಸಿಯುವ ಭೀತಿ ಎದುರಾಗಿದ್ದು, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ.
ಈ ಸಂಬಂಧ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಈಗಾಗಲೇ ಒಂದು ಕೊಠಡಿ ಕುಸಿದ ಅನಾಹುತ ಸಂಭವಿಸಿದ್ದು. ಮತ್ತೊಂದು ಅನಾಹುತಕ್ಕೆ ಕಾಯುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಜೂನ್ 15ರಂದು ಈ ಶಾಲೆಯ ಕೊಠಡಿಯ ಚಾವಣಿ ಸಿಮೆಂಟ್ ಕುಸಿದು ಮುಖ್ಯ ಶಿಕ್ಷಕಿ ಯಶೋಧಾ ತೀವ್ರವಾಗಿ ಗಾಯಗೊಂಡಿದ್ದರು. ತುಸು ದೂರದಲ್ಲೇ ಕುಳಿತಿದ್ದ ಮಕ್ಕಳು ಅದೃಷ್ಟವಶಾತ್ ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದರು.
ಪಾಠ ಮಾಡುತ್ತಿದ್ದಾಗಲೇ ಕುಸಿದಿತ್ತು. ಮೊದಲು ತಲೆಗೆ ಬಿದ್ದು, ಬಳಿಕ ಕೈ ಮೇಲೆ ಜಾರಿತ್ತು. ಪ್ರಜ್ಞೆ ತಪ್ಪಿದ ಮುಖ್ಯ ಶಿಕ್ಷಕಿಯನ್ನು ನಗರದ ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಸಿ.ಟಿ ಸ್ಕ್ಯಾನ್ ಕೂಡ ಮಾಡಲಾಗಿತ್ತು. ಅವರೀಗ ಚೇತರಿಸಿಕೊಂಡಿದ್ದರೂ ನೋವು ಹಾಗೆಯೇ ಉಳಿದಿದೆ. ಶಾಲೆಗೆ ಬಂದು ಕರ್ತವ್ಯ ನಿಭಾಯಿಸುತ್ತಿದ್ದಾರೆ. ಚಾವಣಿ ಕುಸಿತದಿಂದ ಮಕ್ಕಳು ಹಾಗೂ ಪೋಷಕರು ಆತಂಕಗೊಂಡಿದ್ದು, ಪಕ್ಕದ ಕೊಠಡಿಗೆ ಸ್ಥಳಾಂತರ ಮಾಡಲಾಗಿದೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಅಂದಿನ ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಗಮನಕ್ಕೆ ತಂದಿದ್ದರು. ಅವರು ಡಿಡಿಪಿಐಗೆ ನೋಟಿಸ್ ನೀಡಿದ್ದರು. ಬಳಿಕ ಶಿಥಿಲಗೊಂಡ ಶಾಲಾ ಕಟ್ಟಡ ಸಂಬಂಧ ಅಧಿಕಾರಿಗಳ ಸಭೆ ಕೂಡ ನಡೆಸಿದ್ದರು.
ಶತಮಾನ ಪೂರೈಸಿರುವ ಈ ಹಳೆಯ ಮಾಧ್ಯಮಿಕ ಶಾಲೆಯಲ್ಲಿ ಒಂದು ಕಾಲದಲ್ಲಿ ನೂರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಕ್ರಮೇಣ ಶಾಲೆ ಶಿಥಿಲಗೊಳ್ಳುತ್ತಿದ್ದಂತೆ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಈ ಶಾಲೆ 1892–93ರಲ್ಲಿ ಆರಂಭವಾಗಿದ್ದು, ಸದ್ಯ 6 ಹಾಗೂ 7ನೇ ತರಗತಿ ನಡೆಯುತ್ತಿದೆ. ಎರಡೂ ತರಗತಿಯಿಂದ ಸೇರಿ ಕೇವಲ 12 ಮಕ್ಕಳು ಇದ್ದು, ಒಂದೇ ಕೊಠಡಿಯಲ್ಲಿ ಪಾಠ ಮಾಡಲಾಗುತ್ತಿದೆ. ಇಬ್ಬರು ಶಿಕ್ಷಕಿಯರಿದ್ದಾರೆ.
ಶಿಥಿಲಗೊಂಡ ಕಾರಣ ಈಚೆಗಷ್ಟೇ ₹ 25ಲಕ್ಷ ವೆಚ್ಚ ಮಾಡಿ ಕೊಠಡಿ ರಿಪೇರಿ ಮಾಡಲಾಗಿತ್ತು. ಆದರೂ ಶಾಲಾ ಕೊಠಡಿಯ ಚಾವಣಿಯ ಪ್ಲಾಸ್ಟಿಂಗ್ ಕುಸಿದಿದೆ. ಈ ವೇಳೆ ಅದರ ಕೆಳಗಡೆ ಮುಖ್ಯ ಶಿಕ್ಷಕಿ ಇದ್ದರು. ಈ ಹಂತದಲ್ಲಿ ಮಕ್ಕಳು ತುಸು ದೂರದಲ್ಲಿ ಕುಳಿತಿದ್ದರು. ಪ್ಲಾಸ್ಟಿಂಗ್ ಕುಸಿದ ತೀವ್ರತೆಗೆ ಪ್ಲಾಸ್ಟಿಕ್ ಕುರ್ಚಿಯೊಂದು ಒಡೆದು ಹೋಗಿದೆ.
ಕೋಲಾರ ಜಿಲ್ಲೆಯಲ್ಲಿ ಶತಮಾನ ಪೂರೈಸಿದ ಹತ್ತಾರು ಸರ್ಕಾರಿ ಶಾಲೆಗಳು ಇವೆ. ಆದರೆ, ಮೂಲಸೌಲಭ್ಯ ಕೊರತೆ ಹಾಗೂ ದಾಖಲಾತಿಯ ಹಿನ್ನಡೆ ಎದ್ದು ಕಾಣುತ್ತದೆ. ಜೊತೆಗೆ ತೀರಾ ಶಿಥಿಲಗೊಂಡಿವೆ. ಶಿಕ್ಷಕರು ಭಯದ ವಾತಾವರಣದಲ್ಲಿ ಪಾಠ ಮಾಡಬೇಕಾದ ಪರಿಸ್ಥಿತಿ ಇದೆ. ನವೀಕರಣ ಮಾಡಿದ್ದರೂ ಯಾವಾಗ ಏನಾಗುತ್ತದೆಯೋ ಎಂಬ ಭಯ.
ನಗರದ ಸರ್ಕಾರಿ ಉರ್ದು ಹಿರಿಯ ಮಾಧ್ಯಮಿಕ ಬಾಲಕರ ಶಾಲೆ 1892ರಲ್ಲಿ ಆರಂಭವಾಗಿದ್ದು, ಜಿಲ್ಲೆಯ ಹಳೆಯ ಶಾಲೆಗಳಲ್ಲಿ ಒಂದು. ಸದ್ಯ 6 ಹಾಗೂ 7ನೇ ತರಗತಿ ನಡೆಯುತ್ತಿದ್ದು, 42 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಮಾಲೂರು ನಗರದ ಹೃದಯ ಭಾಗದಲ್ಲಿ 1909ರಲ್ಲಿ ಆರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ, ಶಿಥಲೀಕರಣಗೊಂಡಿರುವ ಕಾರಣನವೀಕರಣ ಮಾಡಲಾಗುತ್ತಿದೆ. ಬಂಗಾರಪೇಟೆ ನಗರದಲ್ಲಿರುವ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು 1848ರಲ್ಲಿ ಪ್ರಾರಂಭವಾಗಿದ್ದು, ಈಗ ನವೀಕರಿಸಲಾಗಿದೆ. ಕೋಲಾರ ಜಿಲ್ಲೆಯಕೆಜಿಎಫ್, ಬೇತಮಂಗಲ, ನಂಗಲಿಯಲ್ಲೂ ಶತಮಾನ ಪೂರೈಸಿದ ಸರ್ಕಾರಿ ಶಾಲೆಗಳು ಅಪಾಯದಂಚಿನಲ್ಲಿವೆ.
ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡರೆ ಮುಂದಿನ ಅನುಹುತ ತಪ್ಪಿಸಬಹುದು ಎಂದು ಸಾರ್ವಜನಿಕರು ಹೇಳಿದ್ದಾರೆ.
ಚಿಕಿತ್ಸೆಗೆ ₹1.5 ಲಕ್ಷ ಖರ್ಚು
ಎರಡು ತಿಂಗಳ ಹಿಂದೆ ಪಾಠ ಮಾಡುವಾಗ ಚಾವಣಿಯ ಸಿಮೆಂಟ್ ಕುಸಿದು ತಲೆ ಹಾಗೂ ಭುಜದ ಮೇಲೆ ಬಿದ್ದ ಕಾರಣ ಕೋಲಾರ ನಗರದ ಹಳೆಯ ಮಾಧ್ಯಮಿಕ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಯಶೋಧಾ ತೀವ್ರವಾಗಿ ಗಾಯಗೊಂಡಿದ್ದರು.
ಮೊದಲಿಗೆ ಎಸ್ಎನ್ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸರಿಯಾಗಿ ಚಿಕಿತ್ಸೆ ಕಾರಣ ಅವರು ಖಾಸಗಿ ಆಸ್ಪತ್ರೆಗೆ ದಾಖಲಾದರು. ತಲೆ ಹಾಗೂ ತೋಳಿಗೆ ಪೆಟ್ಟು ಬಿದ್ದಿತ್ತು. ಚಿಕಿತ್ಸೆಗೆ ಸುಮಾರು ₹1.5 ಲಕ್ಷ ಖರ್ಚು ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಆದರೆ, ಅವರಿಗೆ ಇಲಾಖೆಯಿಂದ ಯಾವುದೇ ಸೌಲಭ್ಯ ಲಭಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ದುರಸ್ತಿಗೆ ಕಾರ್ಯ ಯೋಜನೆ