
ಕಲ್ಲರಳಿ ಹೂವಾದ ಕತೆ ಹೇಳುವ ಉದ್ಯಾನ
ಚಿಂಚೋಳಿ: ಕಲ್ಲು ಬಂಡೆಗಳ ನಡುವೆ ಹಸಿರ ಕನಸು ಮೊಳೆತು, ಬರಡು ನೆಲದ ಎದೆಯ ಮೇಲೆ ಹೂವಿನ ನಗು ಅರಳಿ,ಕಲ್ಲರಳಿ ಹೂವಾದ ಕತೆ ಹೇಳುತ್ತಿದೆ ಇಲ್ಲಿಯ ಪೋಲಕಪಳ್ಳಿಯ ಸಾಲುಮರದ ತಿಮ್ಮಕ್ಕ ವೃಕ್ಷ್ಯೋದ್ಯಾನ.
ಚಿಂಚೋಳಿ–ತಾಂಡೂರು ಮಾ ರ್ಗದ ಬಾಪೂರ–ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತಲೆ ಎತ್ತಿ ನಿಂತಿರುವ ಈ ಉದ್ಯಾನ, ಪ್ರಕೃತಿ ಸೌಂದರ್ಯಕ್ಕೆ ಮಾನವನ ಪರಿಶ್ರಮದ ಸ್ಪರ್ಶ ನೀಡಿದ ಹಸಿರ ಸಿರಿಯಾಗಿದೆ.
ಚಿಂಚೋಳಿ ಪಟ್ಟಣದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಈ ವನಸಿರಿ, ಉದ್ಯಾನದ ಕೊರತೆ ನೀಗಿಸಿ, ಇಂದು ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿ ಗಮನ ಸೆಳೆಯುತ್ತಿದೆ. ಕಠಿಣ ಕಪ್ಪು ಕಲ್ಲು ಬಂಡೆಗಳು, ಅಕ್ಕಪಕ್ಕದಲ್ಲಿ ಒಂದೆರಡು ಇಂಚು ಮಣ್ಣು ಕಾಣುತ್ತಿದ್ದ ಈ ನೆಲದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಯತ್ನದಿಂದಾಗಿ ಹೊಸ ಲೋಕವೇ ಸೃಷ್ಟಿಯಾಗಿದೆ.
ಕಲ್ಲು ಬಂಡೆಗಳನ್ನು ಒಡೆದು, ದೂರದ ಪ್ರದೇಶಗಳಿಂದ ಮಣ್ಣು ತಂದು ಹಾಕಿ, ಇದು ಕೊಚ್ಚಿ ಹೋಗದಂತೆ ತಡೆಯಲು ಎರಡೂ ಬದಿಗೆ ಗೋಡೆ ನಿರ್ಮಿಸಿ, ಅದರಲ್ಲಿ ಸಸಿಗಳನ್ನು ನೆಟ್ಟು, ನೀರುಣಿಸಿ, ಪೋಷಿಸಿ ಬೆಳೆಸಿದ ಪರಿಣಾಮ ಇಲ್ಲಿ ಹಸಿರು ಮೇಳೈಸಿದೆ.ಉಪೇಕ್ಷೆಗೆ ಒಳಗಾಗಿದ್ದ, ಈ ಬರಡು ನೆಲಕ್ಕೆ ಹಸಿರು ಹೊದಿಸಿ ಆ ಬಂಡೆಗಳಿಗೆ ಜೀವ ತುಂಬಲಾಗಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಅರಣ್ಯ ಇಲಾಖೆ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (ಡಿಎಂಎಫ್‌ಟಿ) ನಿಧಿಯ ಜತೆಗೆ ಚೆಟ್ಟಿನಾಡ ಸಿಮೆಂಟ್ ಕಂಪನಿಯ ಸಿಎಸ್ಆರ್ ನಿಧಿಯೂ ವರವಾಗಿದೆ.
2022ರಲ್ಲಿ ಅಂದಿನ ಅರಣ್ಯ ಸಚಿವ ಉಮೇಶ ಕತ್ತಿಯವರಿಂದ ಉದ್ಘಾಟನೆಗೊಂಡ ಈ ಉದ್ಯಾನ, ನಂತರ ನವೀಕೃತ ರೂಪ ಪಡೆದು 2026ರಲ್ಲಿ ಶಾಸಕ ಡಾ.ಅವಿನಾಶ ಜಾಧವ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಂದ ಉದ್ಘಾಟ ನೆಗೊಂಡಿದೆ. ಇಂದು ಉದ್ಯಾನ ತನ್ನ ಸೌಂದರ್ಯದ ಜತೆಗೆ ಸ್ಥಳೀಯ ಪ್ರವಾಸೋದ್ಯಮಕ್ಕೂ ಹೊಸ ಸ್ಪರ್ಶ ನೀಡಿದೆ.
ಪ್ರತಿ ತಿಂಗಳು ಸುಮಾರು ₹80 ಸಾವಿರ ಆದಾಯ ತರುತ್ತಿರುವ ಈ ವೃಕ್ಷ್ಯೋದ್ಯಾನ, ಸ್ವಾವಲಂಬನೆಯ ಹೆಜ್ಜೆ ಗುರುತು ಮೂಡಿಸುತ್ತಿದೆ. ನಿತ್ಯ ನೂರಾರು ಮಕ್ಕಳು, ಯುವಜನರು, ಕುಟುಂಬಗಳು ಇಲ್ಲಿ ಬಂದು ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯುತ್ತವೆ.
ಭಾನುವಾರ ಬಂದರೆ, ಜನಸಂದಣಿ ಇನ್ನಷ್ಟು ಹೆಚ್ಚಾಗಿ, ಉದ್ಯಾನದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.
‘ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮೂಲ ಸೌಕರ್ಯ ಕಲ್ಪಿಸಲಾಗುವುದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ ಚವ್ಹಾಣ ‘ಪ್ರಜಾವಾಣಿ’ಗೆ ಅವರು ತಿಳಿಸಿದರು.
ಎಲ್ಲರ ಮನ ಗೆದ್ದಿರುವ ಪೋಲಕಪಳ್ಳಿಯ ಈ ವೃಕ್ಷ್ಯೋದ್ಯಾನ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾ ರಿಗಳ ಮುತುವರ್ಜಿಗೆ ಕನ್ನಡಿಯಾಗಿದೆ. ‘ಚಿಂಚೋಳಿ ಪಟ್ಟಣದ ಹೊರ ವಲಯದಲ್ಲಿ ನೆಮ್ಮದಿ ತಾಣವೊಂದು ತಲೆ ಎತ್ತಿದ್ದು ಹೆಮ್ಮೆಯ ಸಂಗತಿ. ಇಲ್ಲಿ ಭದ್ರತೆ ಜತೆಗೆ ಉಪಾಹಾರ ದೊರೆಯುವಂತೆ ಮಾಡಿದರೆ, ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ’ ಎನ್ನುತ್ತಾರೆ ನಿವೃತ್ತ ಶಿಕ್ಷಕಿ ಶ್ರೀದೇವಿ ಅಶೋಕ ಪಾಟೀಲ.
ಮಕ್ಕಳಿಗಾಗಿ ಉಯ್ಯಾಲೆಗಳು, ಜಾರು ಬಂಡಿಗಳು, ಕುದುರೆ ಆಟಗಳು; ಯುವಜನರಿಗೆ ಬಯಲು ಜಿಮ್, ಪಾದಚಾರಿ ಮಾರ್ಗ, ಹುಲಿ, ಚಿರತೆ, ಜಿಂಕೆ ಪ್ರತಿಕೃತಿ, ಗ್ರಾನೈಟ್ ಶಿಲೆಯ ಮಂಟಪ, ಕೃತಕ ಕಲ್ಲು ಗುಂಡುಗಳ ಗುಡ್ಡ, ಕೃತಕ ಜಲಪಾತ ಉದ್ಯಾನಕ್ಕೆ ಮೆರುಗು ತಂದಿದೆ.
ಆಕರ್ಷಕ ಮಹಾದ್ವಾರ ದಾಟಿ ಒಳಗೆ ಪ್ರವೇಶಿಸಿದರೆ, ಬಗೆ ಬಗೆಯ ಹೂವಿನ ಸೌಂದರ್ಯ, ಔಷಧ ಸಸ್ಯಗಳ ಪರಿಮಳ, ಪರಗೋಲಾ, ಸಾಲುಮರದ ತಿಮ್ಮಕ್ಕ ಪ್ರತಿಮೆ ಹಾಗೂ ವಿಶಿಷ್ಟ ಸಸ್ಯಗಳ ವೈವಿಧ್ಯ ಮತ್ತು ಮಿಯಾವಾಕಿಯ ದಟ್ಟ ಹಸಿರು ಕಾಡು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.
ಒಂದೆಡೆ ಹುಲಿಯ ಚಿತ್ರ, ಒಳಗಡೆ ಚಿರತೆಯ ರೂಪ; ನಡುವೆ ಪರಿಸರ ಸಂರಕ್ಷಣೆಯ ಸಂಕೇತವಾಗಿ ನಿಂತಿರುವ ಸಾಲು ಮರದ ತಿಮ್ಮಕ್ಕನ ಪ್ರತಿಮೆ ನಿಸರ್ಗದ ಅನುಭೂತಿ ನೀಡುತ್ತಿದೆ. ಬಂಡೆಗಳನ್ನು ಒಡೆದು ಮಣ್ಣು ತುಂಬಿ, ಮಣ್ಣಿನಲ್ಲಿ ಸಸಿಗಳನ್ನು ನೆಟ್ಟು, ಸಸಿಗಳಲ್ಲಿ ಹಸಿರು ಬೆಳೆಸಿ, ಹಸಿರಿನಲ್ಲಿ ಬದುಕಿನ ಭರವಸೆ ಮೂಡಿಸಿದ ಈ ವೃಕ್ಷ್ಯೋದ್ಯಾನ, ನಿಜಕ್ಕೂ ‘ಕಲ್ಲರಳಿ ಹೂವಾದ ಕತೆ’ ಸಾರುತ್ತಿದೆ. ಪ್ರಕೃತಿಯನ್ನು ಪ್ರೀತಿಸುವವರಿಗೆ ನೆಮ್ಮದಿಯ ತಾಣ, ಮಕ್ಕಳಿಗೆ ಆಟದ ಲೋಕ ಅನಾವರಣ, ಯುವಜನರಿಗೆ ಉಲ್ಲಾಸದ ವಿಹಾರ ತಾಣವಾಗಿದೆ.
ಅವಳಿ ಪಟ್ಟಣಗಳಾದ ಚಿಂಚೋಳಿ-ಚಂದಾಪುರ ಸುತ್ತಲಿನ ಪರಿಸರ ಪ್ರೇಮಿಗಳು ಹಾಗೂ ಶಾಲಾ ಮಕ್ಕಳಿಗೆ ಉದ್ಯಾನವೇ ಇರಲಿಲ್ಲ. ಹೀಗಾಗಿ ಜನತೆಯ ಆಶಯಕ್ಕೆ ಸ್ಪಂದಿಸಿ, ವಿಶೇಷ ಅನುದಾನ ತಂದು ಉದ್ಯಾನ ಅಭಿವೃದ್ಧಿ ಪಡಿಸಲಾಗಿದೆ