
ಕಾರವಾರ: ಸಮುದ್ರ ಕೊರೆತಕ್ಕೆ ದಶಕದ ಮೀನುಗಾರಿಕೆ ಶೆಡ್ ನಾಮಾವಶೇಷ
ಕಾರವಾರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಇಲ್ಲಿನ ಲಂಡನ್ ಸೇತುವೆ ಸಮೀಪದಲ್ಲಿನ ಕಡಲತೀರ ಕಡಲು ಕೊರೆತಕ್ಕೆ ನಲುಗಿದೆ. ದಶಕದ ಹಿಂದೆ ನಿರ್ಮಿಸಿದ್ದ ಮೀನುಗಾರಿಕೆ ಶೆಡ್ ನಾಮಾವಶೇಷವಾಗಿದೆ.
ಕಡಲತೀರಕ್ಕೆ ಹೊಂದಿಕೊಂಡು, ಮೀನುಗಾರಿಕೆ ಪರಿಕರ ಇರಿಸಲು 2016ರಲ್ಲಿ ಲಕ್ಷಾಂತರ ಮೊತ್ತ ವ್ಯಯಿಸಿ ಜಿಲ್ಲಾಡಳಿತ ಶೆಡ್ ನಿರ್ಮಿಸಿತ್ತು. ಅಲೆಗಳ ಅಬ್ಬರಕ್ಕೆ ಸಿಲುಕಿ ಶೆಡ್‌ನ ಅಡಿಪಾಯದ ಕಾಂಕ್ರೀಟ್ ಹಾಸು ಕಿತ್ತು, ನೀರಿನಲ್ಲಿ ಕೊಚ್ಚಿಹೋಗಿದೆ.
ಶೆಡ್‌ಗೆ ಅಳವಡಿಸಿರುವ ಕಬ್ಬಿಣದ ಕಮಾನು, ಅದಕ್ಕೆ ಆಧಾರವಾಗಿರುವ ಕಾಂಕ್ರೀಟ್ ಅಡಿಪಾಯ ಮಾತ್ರವೇ ಸದ್ಯ ಉಳಿದುಕೊಂಡಿದೆ. ಗಾಳಿಯ ಅಬ್ಬರಕ್ಕೆ ಶೆಡ್‌ಗೆ ಅಳವಡಿಸಿದ್ದ ತಗಡಿನ ಶೀಟುಗಳು ಕಳಚಿ ಬಿದ್ದು ನಾಲ್ಕೈದು ವರ್ಷಗಳೇ ಕಳೆದಿತ್ತು.
ಕಡಲು ಕೊರೆತದ ಪರಿಣಾಮ ಶೆಡ್‌ಗೆ ಅನತಿ ದೂರದಲ್ಲಿದ್ದ ಐದಾರು ತೆಂಗಿನ ಮರಗಳು, ಇತರ ಮರಗಳು ಬುಡ ಸಮೇತ ಕಿತ್ತುಬಿದ್ದಿವೆ. ನಗರಸಭೆಯ ಉದ್ಯಾನದ ಹೊರಗೆ ಅಲೆ ತಡೆಗೋಡೆಗೆ ಅಳವಡಿಸಿದ್ದ ಹಲವು ಕಲ್ಲುಗಳು ಕಿತ್ತು ಹೋಗಿವೆ.
‘ಮೀನುಗಾರಿಕೆ ಶೆಡ್ 8ರಿಂದ 10 ನಾಡದೋಣಿ ನಿಲುಗಡೆಗೆ, ಬಲೆ, ಇನ್ನಿತರ ಪರಿಕರಗಳನ್ನು ಇರಿಸಲು ಬಳಕೆ ಆಗುತ್ತಿತ್ತು. ಆದರೆ, ಚಾವಣಿ ಕಿತ್ತು ಹಲವು ವರ್ಷ ಕಳೆದರೂ ಅದನ್ನು ಸರಿಪಡಿಸಿಕೊಡುವ ಕೆಲಸ ಮಾಡಿರಲಿಲ್ಲ’ ಎಂದು ನಾಡದೋಣಿ ಮೀನುಗಾರ ಗೌರೀಶ ಉಳ್ವೇಕರ ಹೇಳಿದರು.
‘ಕಡಲತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದವರು ಪರಿಕರ ಇಟ್ಟುಕೊಳ್ಳಲು ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ಏಕಾಏಕಿ ತೆರವುಗೊಳಿಸಿದ್ದ ಜಿಲ್ಲಾಡಳಿತವು, ಕಣ್ಣೊರೆಸುವ ತಂತ್ರವಾಗಿ ಶೆಡ್ ನಿರ್ಮಿಸಿತ್ತು. ಕಡಲತೀರಕ್ಕೆ ಅತಿ ಸಮೀಪದಲ್ಲಿ, ಗಾಳಿ ಬೀಸುವ ದಿಕ್ಕಿಗೆ ಶೆಡ್ ನಿರ್ಮಿಸಿದ್ದರಿಂದ ಅದು ಬಳಕೆಗೆ ಯೋಗ್ಯಆಗಿರಲಿಲ್ಲ’ ಎಂದೂ ದೂರಿದರು.