
ಕೊಪ್ಪಳ: ವಿಘ್ನ ನಿವಾರಕನ ಸ್ವಾಗತಕ್ಕೆ ಸಜ್ಜಾದ ಜಿಲ್ಲೆ
ಕೊಪ್ಪಳ: ಜನರ ನಡುವೆ ಸೌಹಾರ್ದ ಹಾಗೂ ಬಾಂಧವ್ಯ ಬೆಸೆಯುವ ಹಬ್ಬವೆಂದೇ ಹೆಸರಾದ ಗಣೇಶ ಚತುರ್ಥಿ ಸೋಮವಾರ ಆರಂಭವಾಗಲಿದ್ದು ಮುಂದಿನ 15ರಿಂದ 20 ದಿನಗಳ ಕಾಲ ಜಿಲ್ಲೆಯಾದ್ಯಂತ ಇದರ ಸಂಭ್ರಮ ಇರಲಿದೆ.
ಜನರ ಗಮನ ಸೆಳೆಯುವ ಬೃಹತ್ ಗಾತ್ರಗಳ ಗಣೇಶನ ಮೂರ್ತಿಗಳನ್ನು ಕಲಾವಿದರು, ಚಿತ್ರಗಾರ ಸಮುದಾಯದವರು ತಿಂಗಳಾನುಗಟ್ಟಲೆ ಶ್ರಮಪಟ್ಟು ತಯಾರಿಸಿದ್ದಾರೆ. ಅವುಗಳನ್ನು ಪ್ರತಿಷ್ಠಾಪಿಸುವುದು ಒಂದು ಸಂಭ್ರಮವಾದರೆ ಕಲಾವಿದರ ಬಳಿಯಿಂದ ಮೂರ್ತಿ ಪ್ರತಿಷ್ಠಾಪನೆಯ ಜಾಗದ ತನಕ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವ ಸಂಭ್ರಮವೇ ಮತ್ತೊಂದು ಬಗೆಯದ್ದು.
ಜಿಲ್ಲಾ ಕೇಂದ್ರ ಕೊಪ್ಪಳ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಸಂಘ ಸಂಸ್ಥೆಗಳು ತಮ್ಮ ಬಡಾವಣೆಗಳಲ್ಲಿ, ಅನೇಕ ವರ್ಷಗಳಿಂದ ಪ್ರತಿಷ್ಠಾಪನೆ ಮಾಡಿಕೊಂಡು ಬಂದಿರುವ ಜಾಗದಲ್ಲಿ ಟೆಂಟ್ ಹಾಕಿ ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿನ ಕೋಟೆ ರಸ್ತೆ, ಗಡಿಯಾರ ಕಂಬದಿಂದ ಗವಿಮಠಕ್ಕೆ ಹೋಗುವ ರಸ್ತೆ, ಜವಾಹರ ಮಾರ್ಗ, ಈಶ್ವರ ಪಾರ್ಕ್ ಹೀಗೆ ಅನೇಕ ಸ್ಥಳಗಳಲ್ಲಿ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಳ್ಳುವ ಕೆಲಸ ಭರದಿಂದ ಸಾಗಿದೆ. ಸೋಮವಾರ (ಸೆ. 14) ಗಣೇಶನ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸುವ ಮೂಲಕ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಮೊದಲು ಮನೆಮನೆಗೆ ಸೀಮಿತವಾಗಿದ್ದ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಬೀದಿಬೀದಿಗಳಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನಾಗಿ ಮಾಡಿದ್ದರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಕಾಲದ ಚಕ್ರ ಉರುಳಿದಂತೆಲ್ಲ ಹಲವು ದಶಕಗಳಿಂದ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸ್ವರೂಪವೇ ಬದಲಾಗಿದೆ. ಮೂರ್ತಿಯನ್ನು ತರುವುದು ಮತ್ತು ವಿಸರ್ಜನೆಯ ಸಮಯದಲ್ಲಿ ನಡೆಯುವ ಡಿಜೆಗಳ ಅಬ್ಬರವೇ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಪ್ರತಿ ವರ್ಷ ಸರ್ಕಾರ ಡಿ.ಜೆ. ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿದರೂ ಇದರ ಅಬ್ಬರ ಜೋರಾಗಿರುತ್ತದೆ.
ಅರಳಿದ ಗಣೇಶ ಮೂರ್ತಿ: ಗಣೇಶ ಮೂರ್ತಿ ತಯಾರಕರು ಈಗಾಗಲೇ ಕೆಲವು ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಸಿದ್ಧಗೊಳಿಸಿದ್ದರೆ, ಕೆಲವು ಮೂರ್ತಿಗಳಿಗೆ ಅಂತಿಮ ರೂಪ ನೀಡುವಲ್ಲಿ ನಿರತರಾಗಿದ್ದರು.
ಪಿಒಪಿ ಗಣೇಶ ಮೂರ್ತಿಗಳ ಮಾರಾಟ, ತಯಾರಿಕೆಗೆ ನಿಷೇಧ ಹೇರುವಂತೆ ಸರ್ಕಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರಿಂದ ಜಿಲ್ಲೆಯಲ್ಲಿ ಪಿಒಪಿ ಮೂರ್ತಿಗಳ ಮಾರಾಟಕ್ಕೆ ಅಲ್ಪ ಪ್ರಮಾಣದಲ್ಲಿ ಕಡಿವಾಣ ಬಿದ್ದಿದೆ. ಇದರಿಂದ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಬಂದಿದೆ. ತಿಂಗಳುಗಳ ಮುಂಚೆಯೇ ಗಣೇಶ ಮೂರ್ತಿಗಳು ಬುಕ್ ಆಗಿವೆ. ಕಳೆದ ಬಾರಿಗಿಂತ ಬೆಲೆ ಕೊಂಚ ದುಬಾರಿಯಾಗಿದೆ.
ಕುಕನೂರಿನಲ್ಲಿ ತಲೆಮಾರಿನಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಅಕ್ಕಸಾಲಿಗ, ಕುಂಬಾರ ಹಾಗೂ ಇತರೆ ಕಲಾವಿದ ಕುಟುಂಬದವರು ಡಿಸೆಂಬರ್ ಹಾಗೂ ಯುಗಾದಿ ಹಬ್ಬದಿಂದಲೇ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರ್ತಿಗಳ ಮಾರಾಟ ಪ್ರಕ್ರಿಯೆ ಚುರುಕುಗೊಂಡಿದ್ದು, ಗ್ರಾಹಕರು ಮೂರ್ತಿಗಳನ್ನು ಬುಕ್ ಮಾಡುತ್ತಿದ್ದಾರೆ.
ತಯಾರಕರು ಜಿಗಿ ಜೇಡಿ ಮಣ್ಣಿನಿಂದ ಸಿಂಹಾಸನ ಗಣಪತಿ, ಬಲಮುರಿ ಗಣಪತಿ, ನಾಗರಹಾವು, ಇಲಿ, ತ್ರಿಶೂಲ, ಕಮಲ, ಕೈ ಹಾಗೂ ಢಮರುಗದ ಮೇಲೆ ಕುಳಿತ ಗಣಪತಿ, ನಿಂತ ಗಣಪತಿ, ಶ್ರೀಕೃಷ್ಣ, ಬಸವಣ್ಣನ ತಲೆ ಮೇಲೆ ಗಣೇಶ ಹಾಗೂ ವಿಶೇಷವಾಗಿ ಪುನೀತರಾಜ್ ಕುಮಾರ್ ಜೊತೆಗೆ ಗಣೇಶ ಮೂರ್ತಿ ಹೀಗೆ ವಿಶಿಷ್ಟ ರೀತಿಯ ಗಣೇಶ ಮೂರ್ತಿಗಳು ಸಿದ್ಧವಾಗಿವೆ.
ತಾತ, ಮುತ್ತಜ್ಜನ ಕಾಲದಿಂದೂ ಗಣೇಶ ಮೂರ್ತಿ ತಯಾರಿಸುವ ಕುಶಾಲ ಅವರ ಕುಟುಂಬ ಈ ಮೊದಲು ಮೂರ್ತಿಗೆ ಬೇಕಾಗುವ ಮಣ್ಣನ್ನು ಹುಬ್ಬಳ್ಳಿ, ಚನ್ನಾಪುರ, ಅಂಚಟಗೇರಿ ಭಾಗದಲ್ಲಿ ಖರೀದಿಸುತ್ತಿದ್ದರು. ಸದ್ಯ ಒಂದು ಟ್ರ್ಯಾಕ್ಟರ್ ಜೇಡಿ ಮಣ್ಣಿನ ಬೆಲೆ ₹10 ಸಾವಿರ ಆಗಿದ್ದರಿಂದ ಬೆಳಗಾವಿಯ ಗೋಕಾಕ್ ಭಾಗದಿಂದ 1 ಟನ್ ಜೇಡಿ ಮಣ್ಣು ₹6,500ಕ್ಕೆ ಖರೀದಿಸಿದ್ದಾರೆ. ‘ಬಣ್ಣದ ಬೆಲೆ ಜತೆಗೆ ಸಾಗಾಣಿಕೆ ವೆಚ್ಚ ದುಪ್ಪಟ್ಟಾಗಿರುವುದರಿಂದ ಮೂರ್ತಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿದೆ’ ಎನ್ನುತ್ತಾರೆ ಮೂರ್ತಿ ತಯಾರಕ ಕುಶಾಲ.
ಪೂರ್ವಿಕರ ಕಾಲದಿಂದಲೂ ಗಣೇಶ ಮೂರ್ತಿ ತಯಾರಿಕೆಯಲ್ಲಿರುವ ಕುಟುಂಬ ಈವರೆಗೆ ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದು, ಈವರೆಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ಸಂಕಷ್ಟ ಎದುರಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾಡಳಿತ ವಿಶೇಷ ಸೌಲಭ್ಯ ಒದಗಿಸಬೇಕೆಂದು ಕುಂಬಾರರ ಕುಟುಂಬ ಒತ್ತಾಯಿಸಿದೆ.