
ಉಪ್ಪಿನಂಗಡಿ: ಕೊಯಿಲ ವಿದ್ಯುತ್ ಉಪಕೇಂದ್ರ ಲೋಕಾರ್ಪಣೆಗೆ ಸಿದ್ಧ
ಉಪ್ಪಿನಂಗಡಿ: ಕೊಯಿಲದಲ್ಲಿ 33 ಕೆ.ವಿ (33 ಸಾವಿರ ವೋಲ್ಟೇಜ್) ಸಾಮರ್ಥ್ಯದ ಉಪ ಕೇಂದ್ರ ಕಾಮಗಾರಿ ವರ್ಷದ ಹಿಂದೆಯೇ ಪೂರ್ಣಗೊಂಡಿದ್ದರೂ, ಲೈನ್ ಕೆಲಸ ವಿಳಂಬವಾಗಿತ್ತು. ಇದೀಗ ಆಲಂಕಾರುನಿಂದ ಲೈನ್ ಕಾಮಗಾರಿಯೂ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧಗೊಂಡಿದೆ. ನಿರಂತರವಾಗಿ ಕಾಡುತ್ತಿದ್ದ ವಿದ್ಯುತ್ ಸಮಸ್ಯೆ ನಿವಾರಣೆಯಾಗುವ ಸಂತಸದಲ್ಲಿ ಕೊಯಿಲ, ರಾಮಕುಂಜ ಭಾಗದ ಜನರಿದ್ದಾರೆ.
ಕೊಯಿಲ ಪಶು ಸಂಗೋಪನಾ ಕೇಂದ್ರದ ಅಂಚಿನಲ್ಲಿ 1 ಎಕರೆ ಮೆಸ್ಕಾಂಗೆ ಮಂಜೂರಾಗಿ ರಾಜ್ಯ ಸರ್ಕಾರದ ₹13 ಕೋಟಿ ಅನುದಾನದಲ್ಲಿ 33 ಸಾವಿರ ವೋಲ್ಟೇಜ್ ಸಾಮರ್ಥ್ಯದ 33 ಕೆ.ವಿ. ವಿದ್ಯುತ್ ಉಪ ಕೇಂದ್ರ ನಿರ್ಮಾಣವಾಗಿದೆ. ಬೆಂಗಳೂರು ಇಟಾ ಎಂಜಿನಿಯರ್ಸ್ ಸಂಸ್ಥೆ ಕಾಮಗಾರಿಯ ನಿರ್ವಹಣೆ ವಹಿಸಿಕೊಂಡಿತ್ತು. ಉಪ ಕೇಂದ್ರದ ಮೂಲಕ ಕೊಯಿಲ, ರಾಮಕುಂಜ, ಹಳೆನೇರೆಂಕಿ, ಹಿರೇಬಂಡಾಡಿ, ಬಜತ್ತೂರು ಗ್ರಾಮ ವ್ಯಾಪ್ತಿಗೆ ಒಟ್ಟು 11 ಕೆವಿ (11 ಸಾವಿರ ವೋಲ್ಟೇಜ್) ಹಂಚಿಕೆಯಾಗಲಿದೆ.
₹2 ಕೋಟಿ ವೆಚ್ಚದಲ್ಲಿ ಲಿಂಕ್ ಲೈನ್: ನೆಕ್ಕಿಲಾಡಿ ಗ್ರಾಮದ ಕರ್ವೇಲ್‌ನಲ್ಲಿ 110 ಕೆ.ವಿ ಉಪ ಕೇಂದ್ರ ನಿರ್ಮಾಣಕ್ಕೆ ₹30 ಕೋಟಿ ವೆಚ್ಚದ ಯೋಜನೆ ಮಂಜೂರು ಆಗಿದ್ದು, ಈ ಕೇಂದ್ರದಿಂದ ಕೊಯಿಲಕ್ಕೆ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ, ಕರ್ವೇಲ್‌ನ ಕಾಮಗಾರಿ ಪ್ರಾರಂಭದ ಹಂತದಲ್ಲಿದ್ದು, 1 ವರ್ಷ ವಿಳಂಬವಾಗುವ ಸಾಧ್ಯತೆ ಇರುವುದರಿಂದ ಕೊಯಿಲಕ್ಕೆ ತಾತ್ಕಾಲಿಕವಾಗಿ ಆಲಂಕಾರು ವಿನಿಂದ ಲಿಂಕ್ ಲೈನ್ ಕಲ್ಪಿಸಲು ಸುಮಾರು ₹2 ಕೋಟಿ ಮಂಜೂರು ಆಗಿ 3 ತಿಂಗಳ ಹಿಂದೆ ಕಾಮಗಾರಿ ಆರಂಭವಾಗಿತ್ತು.
ಶೀಘ್ರ ಲೋಕಾರ್ಪಣೆಯಾಗಲಿ: ಕೊಯಿಲ ಭಾಗಕ್ಕೆ ಪುತ್ತೂರಿನಿಂದ ಬೆಳ್ಳಿಪ್ಪಾಡಿ ಮೂಲಕ ಕಾಡು ಹಾದಿಯಾಗಿ ಸುಮಾರು 15 ಕಿ.ಮೀ ದೂರದಿಂದ ವಿದ್ಯುತ್ ಸಂಪರ್ಕದ ಲೈನ್ ಬರುತ್ತಿದ್ದು, ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ಕಡಿತ, ಬೇಸಿಗೆಯಲ್ಲಿ ಲೋವೊಲ್ಟೇಜ್ ಸಮಸ್ಯೆ ಇತ್ತು. ಇದೀಗ ಕೊಯಿಲ ಉಪ ಕೇಂದ್ರ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರವಾಗಿ ಇದರ ಲೋಕಾರ್ಪಣೆ ಆಗಲಿ ಎಂದು ಕೊಯಿಲ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ತಿಳಿಸಿದ್ದಾರೆ.
ಪರೀಕ್ಷಾರ್ಥ ಚಾಲನೆ ಆಗಬೇಕಿದೆ: ಆಲಂಕಾರು ವಿದ್ಯುತ್ ಮೇನ್ ಲೈನ್ ಜಂಕ್ಷನ್‌ನಿಂದ ಕೊಯಿಲಕ್ಕೆ ತಾತ್ಕಾಲಿಕ ಸಂಪರ್ಕ ಕಲ್ಪಿಸುವ ಲಿಂಕ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಸಣ್ಣಪುಟ್ಟ ಇಲಾಖಾತ್ಮಕ ಕೆಲಸಗಳು ಆಗಬೇಕಿವೆ. ಇವು ಪೂರ್ಣಗೊಂಡ ಬಳಿಕ ಲೋಕಾರ್ಪಣೆ ಆಗಲಿದೆ ಎಂದು ಮೆಸ್ಕಾಂನ ಪುತ್ತೂರು ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಎ. ತಿಳಿಸಿದ್ದಾರೆ.
ಅನುಮೋದನೆ ಬಾಕಿ: ವಿದ್ಯುತ್ ಪರಿವೀಕ್ಷಕರಿಂದ ಅನುಮೋದನೆ ಪಡೆಯಬೇಕಾಗಿದೆ. ಅದು ದೊರೆತ ಬಳಿಕ ಪರಿವೀಕ್ಷಣಾ ಚಾಲನೆ ನಡೆಯ ಲಿದೆ. ಈ ಕಾರ್ಯ 10 ದಿನ ನಡೆದ ಬಳಿಕ ಲೋಕಾರ್ಪಣೆಗೆ ಕ್ರಮ ಕೈಗೊಳ್ಳ ಲಾಗುವುದು ಎಂದು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದರು.