ಸೂರಪ್ಪನಹಟ್ಟಿ: ಸೂರೂ ಇಲ್ಲ, ನೀರೂ ಇಲ್ಲ

ಸೂರಪ್ಪನಹಟ್ಟಿ: ಸೂರೂ ಇಲ್ಲ, ನೀರೂ ಇಲ್ಲ

ಸೂರಪ್ಪನಹಟ್ಟಿ: ಸೂರೂ ಇಲ್ಲ, ನೀರೂ ಇಲ್ಲ

ಹಿರಿಯೂರು: ಕೃಷಿ, ಕುರಿ–ಮೇಕೆ ಸಾಕಣೆ, ಕೂಲಿ ಮಾಡಿಕೊಂಡಿರುವ ಜನರೇ ವಾಸಿಸುವ ಸೂರಪ್ಪನಹಟ್ಟಿಗೆ ಈವರೆಗೆ ಸರ್ಕಾರದ ಯಾವುದೇ ವಸತಿ ಯೋಜನೆಗಳ ಪ್ರಯೋಜನ ಸಿಕ್ಕಿಲ್ಲ. ರಸ್ತೆ–ಚರಂಡಿಗಳಿಲ್ಲ, ಮಳೆಗಾಲದಲ್ಲೂ ಕುಡಿಯಲು ನೀರು ಸಿಗುವುದಿಲ್ಲ. ಒಟ್ಟಾರೆ ಗ್ರಾಮವು ‘ಇಲ್ಲ’ಗಳ ತವರೂರಾಗಿದೆ.

160 ಮನೆಗಳು, ಅಂದಾಜು 1,000 ಜನಸಂಖ್ಯೆ ಹೊಂದಿರುವ ಸೂರಪ್ಪನಹಟ್ಟಿ ಗ್ರಾಮದಲ್ಲಿರುವ ಎರಡೂ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ನಿತ್ಯ ಪಂಚಾಯಿತಿಯವರು ಕಳಿಸುವ 2 ಟ್ಯಾಂಕರ್ ನೀರು ಸಾಲುತ್ತಿಲ್ಲ. ಟ್ಯಾಂಕರ್ ನೀರು ಬಳಸಲು ಮಾತ್ರ ಎಂದು ದಿಂಡಾವರ ಗ್ರಾಮ ಪಂಚಾಯಿತಿಯವರೇ ಹೇಳುತ್ತಿದ್ದಾರೆ. ಶುದ್ಧ ಕುಡಿಯುವ ನೀರಿಗಾಗಿ 5 ಕಿ.ಮೀ. ದೂರದ ಲಕ್ಕೇನಹಳ್ಳಿ ಅಥವಾ 6 ಕಿ.ಮೀ. ದೂರದಲ್ಲಿರುವ ದಸೂಡಿಗೆ ಹೋಗಬೇಕು. ಬೈಕ್‌ ಸೌಲಭ್ಯವಿದ್ದವರು ಒಂದೆರಡು ಕ್ಯಾನ್ ನೀರು ತರುತ್ತಾರೆ. ವಾಹನ ಇಲ್ಲದವರ ಪಾಡು ಹೇಳತೀರದು.

ಕಾಯಿಲೆ ಬಿದ್ದ ಒಂಟಿ ಅಜ್ಜಿ: ಗ್ರಾಮದಲ್ಲಿ ರುವ 80 ವರ್ಷ ವಯಸ್ಸಿನ ಯರ್ರಮ್ಮ ಅವರಿಗೆ ಮಕ್ಕಳಿಲ್ಲ. ಪತಿಯ ಮರಣಾನಂತರ ಒಂಟಿಯಾಗಿ ವಾಸಿಸುತ್ತಿರುವ ಇವರು ಟ್ಯಾಂಕರ್ ಬಂದಾಗ ಯಾರದ್ದಾದರೂ ನೆರವಿನಿಂದ ಕಷ್ಟಪಟ್ಟು ಒಂದು ಕೊಡ ನೀರು ಒಯ್ಯುತ್ತಾರೆ. ನೆರೆಹೊರೆಯವರು ಒಂದೆರಡು ತಂಬಿಗೆ ಕುಡಿಯುವ ನೀರು ಕೊಟ್ಟರೆ ಅದನ್ನೇ ಜೋಪಾನ ಮಾಡಿ ಇಟ್ಟುಕೊಳ್ಳುತ್ತಾರೆ. ಇಲ್ಲವಾದರೆ ಟ್ಯಾಂಕರ್ ನೀರನ್ನೇ ಬಟ್ಟೆಯಲ್ಲಿ ಸೋಸಿಕೊಂಡು ಕುಡಿಯುತ್ತಾರೆ. ಈಚೆಗೆ ಟ್ಯಾಂಕರ್ ನೀರು ಕುಡಿದು ಕಾಯಿಲೆ ಬಿದ್ದಾಗ ಊರಿನ ಯುವಕರು ಅಜ್ಜಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.

ಹಾಸನ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗದ ಕಡೆ ಬೇಸಿಗೆ ಸಮಯದಲ್ಲಿ ಕುರಿಮಂದೆ ಹೊಡೆದುಕೊಂಡು ಹೋಗುತ್ತಿದ್ದ ಕುರಿಗಾಹಿಗಳು ಪ್ರತಿ ವರ್ಷ ಮಳೆಗಾಲಕ್ಕೆ ಕುರಿಗಳೊಂದಿಗೆ ಮರಳಿ ಊರಿಗೆ ಬರುತ್ತಿದ್ದರು. ಈ ವರ್ಷ ಜನರಿಗೇ ಕುಡಿಯುವ ನೀರು ಸಿಗುತ್ತಿಲ್ಲವಾದ ಕಾರಣಕ್ಕೆ ಊರಿಗೆ ಮರಳಿ ಬಂದಿಲ್ಲ. 1,000 ಅಡಿಯವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಶುದ್ಧೀಕರಣ ಘಟಕವಿದ್ದರೂ ಅದಕ್ಕೆ ಪೂರೈಸಲು ನೀರೇ ಇಲ್ಲ. ಹೊಸದಾಗಿ ಕೊಳವೆ ಬಾವಿ ಕೊರೆಯಿಸಲು ಪಾಯಿಂಟ್ ಮಾಡಿ ಒಂದು ತಿಂಗಳಾದರೂ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳು ಪತ್ತೆ ಇಲ್ಲ ಎಂದು ಗ್ರಾಮದ ಯುವಕ ಕೃಷ್ಣ ಆರೋಪಿಸುತ್ತಾರೆ.

₹ 20 ಕೋಟಿ ವೆಚ್ಚದಲ್ಲಿ ಜವನಗೊಂಡನಹಳ್ಳಿ ಹೋಬಳಿ ವ್ಯಾಪ್ತಿಯ 39 ಗ್ರಾಮಗಳಿಗೆ ಗಾಯತ್ರಿ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಆರೇಳು ವರ್ಷ ಗತಿಸಿದರೂ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ನೀರು ಸರಬರಾಜಿಗೆ ತಂದಿದ್ದ ಪೈಪ್‌ಗಳು ತುಕ್ಕು ಹಿಡಿಯುತ್ತಿವೆ. ಓವರ್‌ಹೆಡ್ ಟ್ಯಾಂಕ್‌ಗಳು ಬಣ್ಣ ಕಳೆದುಕೊಳ್ಳುತ್ತಿವೆ. ನಾಲ್ಕು ತಿಂಗಳಿಂದ ಶಾಸಕರು ಇಲ್ಲದ ಕಾರಣಕ್ಕೆ ಕಾರ್ಯಾಂಗ ನಿಸ್ತೇಜವಾಗಿರುವಂತೆ ಭಾಸವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಬೇಡಿಕೆ: ಗ್ರಾಮದಲ್ಲಿ ಪಾಯಿಂಟ್ ಗುರುತಿಸಿರುವ ಕಡೆ ತಕ್ಷಣ ಕೊಳವೆ ಬಾವಿ ಕೊರೆಸಬೇಕು. ನಿತ್ಯ 6 ಟ್ಯಾಂಕರ್‌ಗಳ ಮೂಲಕ ಕುಡಿಯಲು ಯೋಗ್ಯ ನೀರು ಪೂರೈಸಬೇಕು. ವಿಬಿ–ಜಿ ರಾಮ್ ಜಿ ಯೋಜನೆಯಡಿ ಗ್ರಾಮದಲ್ಲಿ ರಸ್ತೆ, ಚರಂಡಿ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಇಡೀ ಪಂಚಾಯಿತಿಯಲ್ಲಿ ಸಮಸ್ಯೆ’

‘ದಿಂಡಾವರ ಗ್ರಾಮ ಪಂಚಾಯಿತಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಂತರ್ಜಲ ಕುಸಿತದ ಕಾರಣಕ್ಕೆ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸಿದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಅಲ್ಲಿಯವರೆಗೆ ಟ್ಯಾಂಕರ್‌ನಲ್ಲಿ ನೀರು ಕೊಡುತ್ತೇವೆ’ ಎನ್ನುತ್ತಾರೆ ದಿಂಡಾವರ ಪಿಡಿಒ ಲೋಕೇಶ್

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ