
ದಕ್ಷಿಣ ಕನ್ನಡ: ಉತ್ಸವದ ಹುರುಪು ಬಾಂಧವ್ಯದ ಬಿಸುಪು
ಮಂಗಳೂರು: ನಾಡಿನಾದ್ಯಂತ ಗಣೇಶ ಹಬ್ಬದ ಸಂಭ್ರಮ. ನಗರದ ಮಣ್ಣಗುಡ್ಡದಲ್ಲಿರುವ ಸುಧಾಕರ ರಾವ್ ಅವರ ಮನೆಯಲ್ಲಿ ಒಂದೂವರೆ ತಿಂಗಳ ಹಿಂದೆಯೇ ಖುಷಿಯ ಅಲೆ. 97 ವರ್ಷಗಳಿಂದ ‘ರಾವ್’ ನಿವಾಸದಲ್ಲಿ ಹೀಗೆಯೇ. ಚಿತ್ರಾ ನಕ್ಷತ್ರದಂದು ಆವೆಮಣ್ಣು ತೆಗೆದುಕೊಂಡು ಬಂದು ಪೂಜೆ ಮಾಡಿದ ನಂತರ ಬಗೆಬಗೆ ವಿನ್ಯಾಸದ, ಹಲವು ಆಸನಗಳ ಗಣಪ ಇಲ್ಲಿ ಸಿದ್ಧವಾಗುತ್ತವೆ. ಈ ಕುಟುಂಬಕ್ಕೆ ಇದು ವ್ಯಾಪಾರವಲ್ಲ, ತಪಸ್ಸು.
28 ವರ್ಷಗಳಿಂದ ಅಮೆರಿಕದ ಕ್ಯಾಲಿಫೋರ್ನಿಯಾಗೂ ಇಲ್ಲಿಂದ ಒಂದು ಮೂರ್ತಿಯನ್ನು ವಿಮಾನದಲ್ಲಿ ಕಳುಹಿಸಲಾಗುತ್ತದೆ. ಈ ವರ್ಷ ಮೂರು ವಾರಗಳ ಹಿಂದೆ ಹೋದ ಮೂರ್ತಿ ಕಳೆದ ವಾರ ಅಲ್ಲಿನ ಶೆರ್ಲೇಕರ್ ಕುಟುಂಬದ ಮನೆ ಸೇರಿದೆ. ಇತ್ತ ಕರ್ನಾಟಕ, ಕೇರಳದ ವಿವಿಧ ಗಣೇಶ ಸಮಿತಿಗಳಿಗೂ ಮನೆಗಳಿಗೂ ಸಿದ್ಧಪಡಿಸಿದ ಮೂರ್ತಿಗಳು ಕಾರು, ಆಟೊ, ದ್ವಿಚಕ್ರ ವಾಹನಗಳಲ್ಲಿ ಅಲ್ಲಲ್ಲಿಗೆ ತಲುಪಿವೆ.
ಗಣೇಶೋತ್ಸವ ಎಂದರೆ ಹೀಗೆಯೇ, ಅದು ಮನಸ್ಸುಗಳನ್ನು, ಊರು– ಕೇರಿಗಳನ್ನು ಎಲ್ಲ ಗಡಿ ದಾಟಿ ಒಂದಾಗಿಸುತ್ತದೆ. ಸಂಸ್ಕೃತಿ, ಪರಂಪರೆಯನ್ನು ಪಸರಿಸುತ್ತದೆ. ರಾವ್ ಕುಟುಂಬದಲ್ಲಿ ತಯಾರಾದ ಮೂರ್ತಿ ಕೂಗಳತೆ ದೂರದಲ್ಲಿ ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ ಪ್ರತಿಷ್ಠಾಪಿಸುವ ಸಮೀಪದ ಸಂಘನಿಕೇತನಕ್ಕೂ ಹೋಗುತ್ತದೆ, ಹಿಂದೂ ಸೇವಾ ಸಮಿತಿ ಟ್ರಸ್ಟ್‌ನ ಕುಲಶೇಖರದ ‘ಮಂಟಪ’ಕ್ಕೂ ತಲುಪುತ್ತದೆ. ಬೊಕ್ಕಪಟ್ಣದ ದೋಸ್ತ್ ಕ್ರಿಕೆಟ್ ಟೀಂ ಸಾರ್ವಜನಿಕ ಗಣೇಶೋತ್ಸವ ಸಮಿತಿಗೂ ಇಲ್ಲಿಯದೇ ಮೂರ್ತಿ, ಫರಂಗಿಪೇಟೆ ಸಮಿತಿಯಲ್ಲೂ ಬೆಳಗು ವುದು ರಾವ್ ಮನೆಯ ಮೂರ್ತಿ ಗಳು. ಇಲ್ಲೆಲ್ಲ ಸ್ನೇಹ, ಸೌಹಾರ್ದ, ಪ್ರೀತಿ, ಬಾಂಧವ್ಯವನ್ನು ಸೃಷ್ಟಿಸುತ್ತದೆ.
ಸಂಘನಿಕೇತನ ಕಣಪನಿಗೂ ಕುಲಶೇಖರ ಗಣಪನಿಗೂ ಸಂಬಂಧವಿ ರಲು ಇಂಥ ಬಾಂಧವ್ಯದ ಬೇರುಗಳೇ ಕಾರಣ. ಸಂಘನಿಕೇತನದಲ್ಲಿ 1948ರ ವೇಳೆ ಮರ್ತಪ್ಪ ಪ್ರಭು ‘ಬಾಂಬೆ’ ಮಾದರಿ ಯಲ್ಲಿ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸಿದಾಗ ಜೊತೆಯಾದವರು ಕುಲಶೇಖರದ ನರಸಿಂಹ ಪ್ರಭು ಮತ್ತು ರಾಮಚಂದ್ರ ಭಂಡಾರ್ಕರ್. ಕುಲಶೇಖರದಲ್ಲಿ ನರಸಿಂಹ ಪ್ರಭು ಅವರ ಪುತ್ರ ಪ್ರದೀಪ್ ಪ್ರಭು ಅವರ ನೇತೃತ್ವದಲ್ಲಿ ಆಚರಣೆ ಮುಂದುವರಿದಿದೆ. ಸಂಘ ನಿಕೇತನದಲ್ಲೂ ಪರಂಪರೆ ಮುಂದುವರಿದಿದೆ. ಜಿಲ್ಲೆಯ ವಿವಿಧೆಡೆ ತಲೆಮಾರುಗಳಿಂದ ಆಚರಿಸಿ ಕೊಂಡು ಬರುತ್ತಿರುವ ಗಣೇಶೋತ್ಸವ ಹಳೆ ಬೇರು, ಹೊಸ ಚಿಗುರು ಕೂಡಿಕೊಂಡು ಸಾಗುತ್ತಿದೆ. 50–60 ವರ್ಷಗಳಿಂದ ಆಚರಣೆ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಕಡೆ ಯುವ ತಲೆಮಾರಿಗೆ ಜವಾಬ್ದಾರಿ ಹಂಚುವ ಪ್ರಕ್ರಿಯೆಯೂ ನಡೆಯುತ್ತಿದೆ.
ಗಣೇಶನ ಹಬ್ಬ ಎಂದರೆ ಚಕ್ಕುಲಿ, ಕಜ್ಜಾಯ, ಕಡುಬುಪ್ರಿಯ ಗಣಪನ ಪೂಜೆ, ಮೋದಕದ ಆಮೋದ ಮಾತ್ರವಲ್ಲ. ವೈವಿಧ್ಯಮಯ ಕಾರ್ಯಕ್ರಮಗಳಿಗೂ ಅಲ್ಲಿ ಆದ್ಯತೆ ಇದೆ. ಟ್ಯಾಬ್ಲೊ, ಭಜನೆ, ಬೊಂಬೆ ಕುಣಿತ, ಕುಣಿತ ಭಜನೆ, ಜಾನಪದ ನೃತ್ಯ, ಭಕ್ತಿ ಸಂಗೀತ ಮುಂತಾದವುಗಳ ಆ ವೈಭವಕ್ಕೆ ಮಂಗಳೂರು ನಗರ ಸೇರಿದಂತೆ ಜಿಲ್ಲೆ ಜ್ಜಾಗಿದೆ. ತುಳುನಾಡಿನಲ್ಲಿ ಗಣೇಶೋತ್ಸವದ ಸ್ವರೂಪ ಸ್ವಲ್ಪ ಭಿನ್ನ. ಇಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿ ಪೂಜಿಸುವ ಪದ್ಧತಿ ದೊಡ್ಡಮಟ್ಟದಲ್ಲಿಲ್ಲ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಇಲ್ಲಿ ಆದ್ಯತೆ. ಹೀಗೆ ದಶಕಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಮಿತಿಗಳೂ ಈಚೆಗೆ ಆರಂಭವಾದ ಸಮಿತಿಗಳೂ ಧಾರಾಳ ಇವೆ. ಬಹುತೇಕ ಸಮಿತಿಗಳು ಸಾಂಪ್ರದಾಯಿಕ ಶೈಲಿ ಯಲ್ಲಷ್ಟೇ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.
ಮಂಗಳೂರು ನಗರದಲ್ಲೇ 50ಕ್ಕೂ ಹೆಚ್ಚು ಕಡೆಗಳಲ್ಲಿ ಗಣಪತಿ ಕೂರಿಸುತ್ತಾರೆ. 79 ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಿರುವ ಕೇಶವ ಸ್ಮೃತಿ ಸಂವರ್ಧನ ಸಮಿತಿ, 6 ದಶಕ ಸಮೀಪಿಸುತ್ತಿರುವ ಕುಲಶೇಖರ ಹಿಂದೂ ಸೇವಾ ಸಮಿತಿ ಟ್ರಸ್ಟ್, ಅರ್ಧಶತಮಾನ ಕಳೆದಿರುವ ಕಂಕನಾಡಿ ಪಂಪ್‌ವೆಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ, 35 ವರ್ಷಗಳ ಸಮೀಪವಿರುವ ಗೌರಿಮಠ ರಸ್ತೆಯ ಶ್ರೀ ಮಹಾಮಾರಿಯಮ್ಮ ಯುವಕ ವೃಂದ, 30 ವರ್ಷಗಳಿಂದ ನಗರದ ಕೇಂದ್ರ ಮೈದಾನದಲ್ಲಿ ನಡೆಯುತ್ತಿರುವ ಉತ್ಸವ ಮುಂತಾದವುಗಳ ಜೊತೆಯಲ್ಲಿ ಸೂಟರ್‌ಪೇಟೆ, ಬಂಟರ ಯಾನೆ ನಾಡವರ ಮಾತೃಸಂಘದ ‘ಓಂಕಾರ ನಗರ’ ಗಣಪ, ಫರಂಗಿಪೇಟೆ ಹಿಂದು ಧಾರ್ಮಿಕ ಸೇವಾ ಸಮಿತಿಯ ಗಣಪ, ಬಿಕರ್ನಕಟ್ಟೆ ಹಿಂದೂ ಯುವಸೇನೆ, ತಲಪಾಡಿ ಗಣಪ, ಕದ್ರಿ, ಶರವು ದೇವಸ್ಥಾನ, ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕೋಡಿಕಲ್ ಘಟಕ, ಶಕ್ತಿ ನಗರ, ಕರಂಗಲ್ಪಾಡಿ ಹಾಪ್‌ಕಾಮ್ಸ್, ಪೊಲೀಸ್ ಲೇನ್, ಪದವಿನಂಗಡಿಯ ದೇವಿನಗರ, ಮಂಗಳೂರಿನ ವೆಂಕಟರಮಣ ದೇವಸ್ಥಾನ, ಬಂಟ್ಸ್ ಹಾಸ್ಟೆಲ್, ರಥಬೀದಿ, ಜಪ್ಪಿನಮೊಗರು, ಬಲ್ಮಠ, ಅತ್ತಾವರ, ಕೆಎಸ್‌ಆರ್‌ಟಿಸಿ, ಮಾರಿಗುಡಿ, ಎನ್‌ಎಂಪಿಎ, ಎಂಸಿಎಫ್, ಕೆಒಐಸಿಎಲ್, ಕರ್ನಾಟಕ ಗೃಹ ಮಂಡಳಿ, ತೊಕ್ಕೊಟ್ಟು, ಕೊಣಾಜೆ, ಮೀನುಗಾರಿಕಾ ಕಾಲೇಜು, ಶ್ರೀ ಮಹಾಮಾರಿಯಮ್ಮ ಯುವಕ ವೃಂದ, ಜಪ್ಪಿನಮೊಗರು ಮುಂತಾದ ಕಡೆಗಳ ಉತ್ಸವಗಳೂ ಭಿನ್ನ, ವಿಶಿಷ್ಟ. ಎಲ್ಲ ಉತ್ಸವದ ಆಶಯ ಸಂಘಟನೆ, ಸೌಹಾರ್ದ ಮತ್ತು ಕಲಾಸೇವೆ.
ಸಂಘನಿಕೇತನದಲ್ಲಿ ಈ ವರ್ಷವೂ ಧಾರ್ಮಿಕ ಮತ್ತು ಕಲಾ ಕಾರ್ಯಕ್ರಮಗಳಿಗೆ ಆದ್ಯತೆ. ಐದು ದಿನಗಳ ಕಾರ್ಯಕ್ರಮದ ಪೈಕಿ ಒಂದು ದಿನ ನಡೆಯುವ ಉಷಕಾಲ ಪೂಜೆ ವಿಶಿಷ್ಟ. ಈ ವರ್ಷ ಅದು 16ರಂದು ಮುಂಜಾನೆ 5 ಗಂಟೆಯಿಂದ ನಡೆಯಲಿದೆ.
ಮರ್ತಪ್ಪ ಪ್ರಭು ಅವರು ಮುಂಬೈಯಲ್ಲಿ ನೊಡಿ ಇಲ್ಲಿ 1948ರಲ್ಲಿ ಶುರು ಮಾಡಿದರು. ಅವರಿಗೆ ಬಸ್ತಿ ರಮಾನಾಥ ಶೆಣೈ ಸಹಕಾರ ನೀಡಿದರು. ನಂತರ ಮಾರಪ್ಪಣ್ಣ ಬಜಿಲಕೇರಿಯವರೂ ಕೂಡಿಕೊಂಡರು. ಅವರು ಹಾಕಿಕೊಟ್ಟ ದಾರಿಯಲ್ಲಿ ವೈಭವಯುತ ಉತ್ಸವ ನಡೆಯುತ್ತಿದೆ ಎಂದು ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ ಉಪಾಧ್ಯಕ್ಷ ರಘುವೀರ್ ಕಾಮತ್ ತಿಳಿಸಿದರು.
ಮನೆದೇವರಂತೆ ಪೂಜೆ: ಉತ್ಸವ
ನಮ್ಮ ತಂದೆ ನರಸಿಂಹ ಪ್ರಭು ಅವರು ರಾಮಚಂದ್ರ ಭಂಡಾರ್ಕರ್ ಜೊತೆಗೂಡಿ ಹಿಂದೂ ಸೇವಾ ಸಮಿತಿ ಆರಂಭಿಸಿ ಮನೆಯಲ್ಲೇ ಮೊದಲು ಪ್ರತಿಷ್ಠಾಪಿಸಿದರು. ನರಸಿಂಹ ಪ್ರಭು ಮತ್ತು ರಾಮಚಂದ್ರ ಅವರಿಗೆ ಸಂಘನಿಕೇತನದ ಜೊತೆ ಸಂಬಂಧವಿದೆ. ಈ ಕಾರಣದಿಂದ ಈಗ ನಮಗೂ ತುಂಬ ಜವಾಬ್ದಾರಿ ಇದೆ. ಇಲ್ಲಿನ ಯುವಜನರನ್ನು ನಾನು ಹುರಿದುಂಬಿಸುತ್ತಿದ್ದೇನೆ. ಎಲ್ಲರೂ ಮನೆದೇವರ ಹಾಗೆ ಪೂಜಿಸಿ ಪ್ರೀತಿಯಿಂದ ಉತ್ಸವ ಆಚರಿಸುತ್ತೇವೆ. 50 ವರ್ಷ ಹೊರಗೆ ಕಟ್ಟೆಯಲ್ಲಿದ್ದ ಗಣಪನ ಪ್ರತಿಷ್ಠಾಪನೆ ಈಗ 10 ವರ್ಷಗಳಿಂದ ಮಂದಿರದಲ್ಲಿ ಆಗುತ್ತಿದೆ. 100 ವರ್ಷಗಳಿಗೂ ಹೆಚ್ಚು ಈ ಉತ್ಸವ ಸಾಗುವ ಭರವಸೆ ಇದೆ.
ಪ್ರದೀಪ್ ಪ್ರಭು, ಕುಲಶೇಖರದ ಹಿಂದೂ ಸೇವಾ ಸಮಿತಿ ಟ್ರಸ್ಟ್ ಟ್ರಸ್ಟಿ
ಪರಿಸರಕ್ಕೆ ಹಾನಿ ಮಾಡಿದರೆ ಕ್ರಮ
ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಭಾರಲೋಹ ಮಿಶ್ರಿತ ವಿಷಕಾರಿ ರಾಸಾಯನಿಕ ಗುಣವುಳ್ಳ ವಸ್ತುಗಳನ್ನು ಬಳಸಿ ತಯಾರಿಸಿದ ಗೌರಿ- ಗಣೇಶ ಮೂರ್ತಿಗಳ ಉತ್ಪಾದನೆ, ಸಂಗ್ರಹ ಹಾಗೂ ವಿಸರ್ಜನೆಯನ್ನು ನಿಷೇಧಿಸಿದ್ದು ಇಂಥ ಮೂರ್ತಿಗಳ ಸಂಗ್ರಹಣೆ, ಮಾರಾಟ, ವಿತರಣೆ ಹಾಗೂ ಪ್ರದರ್ಶನ ಜಲಮೂಲಗಳಲ್ಲಿ ವಿಸರ್ಜಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಎಚ್ಚರಿಸಿದ್ದಾರೆ.
ಹಾನಿಕಾರಕ ಮೂರ್ತಿಗಳು ಕಂಡುಬಂದರೆ ವಶಪಡಿಸಿಕೊಂಡು ಸಂಬಂಧಪಟ್ಟವರ ವಿರುದ್ಧ 1974ರ ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಅಧಿನಿಯಮ, 1981ರ ವಾಯುಮಾಲಿನ್ಯ ತಡೆ ಮತ್ತು ನಿಯಂತ್ರಣ ಅಧಿನಿಯಮ ಹಾಗೂ 1986ರ ಪರಿಸರ ಸಂರಕ್ಷಣೆ ಅಧಿನಿಯಮದ ಪ್ರಕಾರ ಕ್ರಮ ಆಗಲಿದೆ. ಆದ್ದರಿಂದ ಪಾಲಿಕೆಯ ಸೂಚನೆಯನ್ನು ವ್ಯಾಪಾರಿಗಳು, ತಯಾರಕರು ಹಾಗೂ ಗಣೇಶೋತ್ಸವ ಸಮಿತಿಗಳು ಪಾಲಿಸಬೇಕು. ಇಲ್ಲದಿದ್ದರೆ 2026ರ ಘನತ್ಯಾಜ್ಯ ನಿರ್ವಹಣೆ ನಿಯಮದಡಿಯೂ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅತಿ ಉದ್ದದ ಮೆರವಣಿಗೆ ಹಾದಿ
ಕುಲಶೇಖರದ ಹಿಂದೂ ಸೇವಾ ಸಮಿತಿ ಟ್ರಸ್ಟ್ ಗಣಪತಿಯ ಮೆರವಣಿಗೆ ನಗರದ ಅತಿ ಉದ್ದದ ಹಾದಿಯಲ್ಲಿ ಸಾಗುತ್ತದೆ ಎನ್ನಲಾಗುತ್ತದೆ. 12 ಕಿ.ಮೀ ಉದ್ದದ ಮೆರವಣಿಗೆ ಕುಲಶೇಖರದಿಂದ ನಂತೂರು ಪದವು, ಬಿಕರ್ನಕಟ್ಟೆ, ಕೈಕಂಬ, ಕಲ್ಪನೆ, ಬೈತುರ್ಲಿ ಮೂಲಕ ಕುಡುಪುವಿನಲ್ಲಿ ಜಲಸ್ತಂಭನ ಮಾಡ ಲಾಗುತ್ತದೆ. ಈ ಬಾರಿ ವಿವಿಧ ತಂಡಗಳಿಂದ ಭಜನೆ. 3 ದಿನ ನಾಟಕ, ಯಕ್ಷಗಾನ, ಪ್ರವಚನ ಇದೆ. ಮೆರವ ಣಿಗೆಯಲ್ಲಿ ಸ್ತಬ್ಧಚಿತ್ರಗಳು, ಹುಲಿ ಕುಣಿತ ಮತ್ತು ಶ್ರೀನಿವಾಸ ಕಲ್ಯಾಣ ವಿಶೇಷ ಎಂದು ಟ್ರಸ್ಟಿ ಪ್ರದೀಪ್ ಪ್ರಭು ತಿಳಿಸಿದರು.
ಬೊಕ್ಕಪಟ್ಣದ ದೋಸ್ತ್ ಕ್ರಿಕೆಟ್ ಟೀಂ ಸಾರ್ವಜನಿಕ ಗಣಪತಿಗೆ ಇದು 50ನೇ ವರ್ಷ. ಇದರ ಅಂಗವಾಗಿ ಮ್ಯಾರಥಾನ್ ಮತ್ತು ಕ್ರಿಕೆಟ್ ಟೂರ್ನಿ ಆಯೋಜಿಸಿರುವ ತಂಡ ವಿದ್ಯಾರ್ಥಿ ವೇತನ, 3 ಶಾಲೆಗಳ ಮಕ್ಕಳಿಗೆ ಸಮವಸ್ತ್ರ ವಿತರಣೆ, ಅನಾಥರಿಗೆ ಸಹಾಯ ಮಾಡಿದೆ ಎಂದು ಪ್ರಮುಖ ದೀಪಕ್ ಕುಮಾರ್ ತಿಳಿಸಿದರು. ಜಪ್ಪಿನಮೊಗರು ಸಾರ್ವಜನಿಕ ಶ್ರೀಗಣೇಶೋತ್ಸವದ ಅಂಗವಾಗಿ ರಂಗಪೂಜೆಯ ದೀಪಾಲಂಕಾರ ವಿಶೇಷ. ಶಕ್ತಿನಗರದ ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿಯ ಉತ್ಸವದಲ್ಲಿ ಮಕ್ಕಳ ಭಜನೆ ಇದೆ.