ಉಪ್ಪಿನಂಗಡಿ: ಕಾಲೇಜಿನಲ್ಲಿ ಹೆಣ್ಮಕ್ಕಳ ಕಿಕ್‌, ಪಂಚ್

ಉಪ್ಪಿನಂಗಡಿ: ಕಾಲೇಜಿನಲ್ಲಿ ಹೆಣ್ಮಕ್ಕಳ ಕಿಕ್‌, ಪಂಚ್

ಉಪ್ಪಿನಂಗಡಿ: ಕಾಲೇಜಿನಲ್ಲಿ ಹೆಣ್ಮಕ್ಕಳ ಕಿಕ್‌, ಪಂಚ್

ಮಂಗಳೂರು: ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರತಿ ಶನಿವಾರ ಮಧ್ಯಾಹ್ನ ಕಿಕ್ ಮತ್ತು ಪಂಚ್‌ಗಳ ಅಭ್ಯಾಸ, ಮುಗಿಲು ಮುಟ್ಟುವ ಧ್ವನಿಯಲ್ಲಿ ವಿದ್ಯಾರ್ಥಿನಿಯರ ಹೂಂಕಾರ. ಅದು, ಕರಾಟೆ ತರಬೇತುದಾರರು ನೀಡುವ ಆತ್ಮರಕ್ಷಣಾ ಕೌಶಲ ತರಬೇತಿಯ ಝೇಂಕಾರ.

ಬೀದಿ, ಬಸ್‌, ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ ಚುಡಾಯಿಸುವವರಿಂದ ರಕ್ಷಣೆ ಪಡೆಯಲು ಮತ್ತು ಆತ್ಮವಿಶ್ವಾಸ ತುಂಬಲು ಕಾಲೇಜು ಆಡಳಿತದ ನೆರವಿನಲ್ಲಿ ಕ್ರೀಡಾ ವಿಭಾಗ ಆಗಸ್ಟ್‌ 29ರಂದು, ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಆರಂಭಿಸಿರುವ ಕೌಶಲ ತರಬೇತಿಯಲ್ಲಿ 75ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವ ಯೋಜನೆ ಹಮ್ಮಿಕೊಂಡಿದ್ದ ಪುತ್ತೂರಿನ ಟಿ.ಡಿ ಥಾಮಸ್ ಅವರ ಇಂಪ್ಯಾಕ್ಟ್ ಆರ್ಟ್ ಆ್ಯಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯ ಕೆವಿನ್ ಮತ್ತು ಅಜಯ್ ಇಲ್ಲಿ ತರಬೇತಿ ನೀಡುತ್ತಾರೆ.

‘ಬಿ.ಸಿ ರೋಡ್ ಬಸ್ ನಿಲ್ದಾಣದಲ್ಲಿ ತಲವಾರಿನಿಂದ ದಾಳಿ ನಡೆಸಿ ಯುವತಿಯ ಕೊಲೆ ಘಟನೆಯ ನಂತರ ನನ್ನ ಮನಸ್ಸು ವಿಷಣ್ಣವಾಗಿತ್ತು. ಆ ಯುವತಿಗೆ ಯಾವುದಾದರೂ ಆತ್ಮರಕ್ಷಣಾ ಕಲೆ ಗೊತ್ತಿದ್ದರೆ ಹೇಗಾದರೂ ಆತನಿಂದ ತಪ್ಪಿಸಿಕೊಂಡು ಬದುಕುತ್ತಿದ್ದಳು ಎಂದೆನಿಸಿತ್ತು. ಆಗಲೇ ನಮ್ಮ ಕಾಲೇಜಿನಲ್ಲಿ ಇಂಥ ತರಬೇತಿ ನೀಡಬೇಕು ಎಂದೆನಿಸಿತ್ತು. ಆ ಆಲೋಚನೆಯ ಪರಿಣಾಮ ತರಬೇತಿ ಕಾರ್ಯಕ್ರಮ’ ಎಂದು ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರವೀಣ್ ಕುಮಾರ್ ಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡು–ಮೂರು ವಾರಗಳ ತರಬೇತಿ ಪಡೆದುಕೊಂಡಾಗಲೇ ಭರವಸೆ ಮೂಡಿದೆ ಎನ್ನುತ್ತಾರೆ ವಿದ್ಯಾರ್ಥಿನಿ ಫಾತಿಮಾ ಸನಾ. ‘ಸಮಾಜದಲ್ಲಿ ನಡೆಯುವ ಕೆಲವು ಕೃತ್ಯಗಳ ಬಗ್ಗೆ ಯೋಚಿಸುವಾಗ ಭಯ ಆಗುತ್ತದೆ. ಆತ್ಮರಕ್ಷಣಾ ತರಬೇತಿ ಸಿಕ್ಕಿದ್ದರೆ ಧೈರ್ಯದಿಂದ ಹಾದಿ ನಡೆಯಬಹುದಿತ್ತು ಎನಿಸುತ್ತಿತ್ತು. ಈಗ ಕಾಲೇಜಿನಲ್ಲೇ ತರಬೇತಿ ಸಿಗುತ್ತಿರುವುದರಿಂದ ಖುಷಿಯಾಗಿದೆ. ಈಗಿನ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಇಂಥ ತರಬೇತಿ ಅತ್ಯಗತ್ಯ. ಆರಂಭದಲ್ಲಿ ಮೈ–ಕೈ ನೋವಿತ್ತು. ಈಗ ಅಭ್ಯಾಸ ಆಗಿದೆ. ಭರವಸೆಯೂ ಮೂಡುತ್ತಿದೆ’ ಎಂದರು ಫಾತಿಮಾ.

‘ತರಬೇತಿಗೆ ಸೇರಿದ ನಂತರ ನಮ್ಮ ಮೇಲೆ ನಮಗೆ ನಂಬಿಕೆ ಬಂದಿದೆ. ಭರವಸೆ ತುಂಬ ಹೆಚ್ಚಾಗಿದ್ದು ಯಾರನ್ನೂ ಎದುರಿಸಬಲ್ಲೆವು ಎಂಬ ಹುರುಪು ತುಂಬಿದೆ’ ಎಂದು ಸುಸ್ಮಿತಾ ಹೇಳಿದರು.

ವಿದ್ಯಾರ್ಥಿನಿಯರು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಇದು, ಅವರಿಗೆ ಈ ಕಲೆಯ ಅಗತ್ಯ ಎಷ್ಟು ಇತ್ತು ಎಂಬುದನ್ನು ತೋರಿಸುತ್ತದೆ. ಎರಡು ತಿಂಗಳು ತರಬೇತಿ ಪಡೆದುಕೊಂಡರೆ ರಕ್ಷಣೆಗೆ ಬೇಕಾದಷ್ಟು ಪರಿಣಿತಿ ಸಾಧಿಸಿಬಹುದು. ಇದು ಪ್ರಾಥಮಿಕ ತರಬೇತಿ ಮಾತ್ರ. ತರಗತಿಗಳು ಮುಗಿದ ನಂತರ ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳುವಂತೆ ತಿಳಿಸಲಾಗುವುದು ಎಂದು ‘ಇಂಪ್ಯಾಕ್ಟ್’ನ ಕೆವಿನ್ ತಿಳಿಸಿದರು.

ರಕ್ಷಣೆ ಮತ್ತು ಸ್ಟ್ರೆಂಥೆನಿಂಗ್

ಸ್ವಯಂ ರಕ್ಷಣೆ ಮತ್ತು ಸ್ಟ್ರೆಂಥೆನಿಂಗ್ ತರಬೇತಿ ನೀಡಲಾಗುತ್ತದೆ. ಕಿಕ್‌, ಪಂಚ್‌, ಕಿಕ್‌ ಮುಂತಾದ್ದನ್ನು ಕಲಿಸಿ ಸ್ನಾಯುಗಳನ್ನು ಬಲಿಷ್ಠಗೊಳಿಸಲು ಮೊದಲು ಪ್ರಯತ್ನಿಸಲಾಗುತ್ತದೆ. ಆ ನಂತರ ರಕ್ಷಣಾ ಕಲೆಯನ್ನು ಕಲಿಸಲಾಗುವುದು. ಯಾವೆಲ್ಲ ರೀತಿಯಲ್ಲಿ ಆಕ್ರಮಣ ಉಂಟಾಗುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಆದ್ದರಿಂದ ಅನಿರೀಕ್ಷಿತ ದಾಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಹೆಣ್ಣುಮಕ್ಕಳನ್ನು ಹೆಚ್ಚಾಗಿ ಅಪ್ಪಿಕೊಳ್ಳಲು ಪ್ರಯತ್ನಿಸುವವರು ಇದ್ದಾರೆ. ಆಗ ಏನು ಮಾಡಬೇಕು, ಹೇಗೆ ಕೊಸರಿಕೊಳ್ಳಬೇಕು. ಇನ್ನರ್ ಬ್ಲಾಕ್‌, ಔಟರ್ ಬ್ಲಾಕ್‌ಗಳ ಮೂಲಕ ಹೇಗೆ ಮೈ ಸ್ಪರ್ಶಿಸದಂತೆ ತಡೆಯಬಹುದು ಮುಂತಾದವುಗಳನ್ನು ಕಲಿಸಲಾಗುತ್ತದೆ ಎಂದು ಕೆವಿನ್ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ