ಕೊಪ್ಪಳ: ಪತ್ರಿಕೆ ಹಂಚುವ ಕಾಯಕಯೋಗಿಗಳ ಪರಿಶ್ರಮದ ಕಥೆ

ಕೊಪ್ಪಳ: ಪತ್ರಿಕೆ ಹಂಚುವ ಕಾಯಕಯೋಗಿಗಳ ಪರಿಶ್ರಮದ ಕಥೆ

ಕೊಪ್ಪಳ: ಪತ್ರಿಕೆ ಹಂಚುವ ಕಾಯಕಯೋಗಿಗಳ ಪರಿಶ್ರಮದ ಕಥೆ

ಕೊಪ್ಪಳ: ಆಗಿನ್ನು ಬೆಳಕು ಹರಿದಿರಲಿಲ್ಲ, ಬೆರಳೆಣಿಕೆಯಷ್ಟೇ ವಾಹನಗಳ ಓಡಾಟ. ಸುತ್ತಲೂ ನೀರವ ಮೌನ. ಆದರೆ, ಅಲ್ಲಿದ್ದ ಹಲವರು ಪತ್ರಿಕೆಗಳ ಮೂಟೆಗಳನ್ನು ಒಂದೆಡೆ ಒಪ್ಪಟವಾಗಿ ಜೋಡಿಸಿಟ್ಟುಕೊಡುತ್ತಿದ್ದರು. ಮತ್ತಷ್ಟು ಹುಡುಗರು ಬಡಾವಣೆವಾರು ತಮ್ಮ ಪಾಲಿನ ಪತ್ರಿಕೆ ಹಂಚಿಕೊಂಡು ಸೈಕಲ್‌ ಮೇಲೆ ಇರಿಸಿ ಪೆಡಲ್‌ ತುಳಿದರು.

ಬಹಳಷ್ಟು ಜನ ಬೆಳಗಿನ ಜಾವ ಸಕ್ಕರೆಯಂಥ ಸವಿನಿದ್ದೆಯ ಸಮಯದಲ್ಲಿ ಮನೆಯಲ್ಲಿ ಆರಾಮವಾಗಿ ಮಲಗಿದ್ದರೆ ಇನ್ನೊಂದೆಡೆ ಪತ್ರಿಕೆ ಹಂಚುವ ವಿದ್ಯಾರ್ಥಿಗಳು, ಯುವಕರು ಹಾಗೂ ಹಿರಿಯರು ಸೂರ್ಯೋದಯಕ್ಕೂ ಮೊದಲು ತಮ್ಮ ಪಾಲಿನ ಕೆಲಸ ಮುಗಿಸಿ ಮತ್ತೊಂದು ಕೆಲಸಕ್ಕೆ ಅಣಿಯಾಗುತ್ತಾರೆ.

ಇದು ಕೊಪ್ಪಳದ ಲೇಬರ್‌ ಸಮೀಪದಲ್ಲಿರುವ ಎಸ್‌ಬಿಐನ ಎಟಿಎಂ ಮುಂಭಾಗ, ಕೇಂದ್ರೀಯ ಬಸ್‌ ನಿಲ್ದಾಣದ ಮುಂಭಾಗ, ಗಂಜ್‌ ವೃತ್ತದ ಸಮೀಪ ಹೀಗೆ ಜಿಲ್ಲಾ ಕೇಂದ್ರದ ಅನೇಕ ಕಡೆ ಬೆಳಿಗ್ಗೆ ನಾಲ್ಕು ಗಂಟೆಗೆಲ್ಲ ಕಂಡುಬರುವ ಸಾಮಾನ್ಯ ಚಿತ್ರಣ.

ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಪತ್ರಿಕೆ ಹಂಚುವುದನ್ನೇ ಕಾಯಕ ಮಾಡಿಕೊಂಡ ಶ್ರಮಜೀವಿಗಳು ಸೂರ್ಯನ ಕಿರಣ ನೆಲಕ್ಕೆ ಬೀಳುವ ಹೊತ್ತಿಗಾಗಲೇ ಪತ್ರಿಕೆ ತಲುಪಿಸುತ್ತಾರೆ. ಹದಗೆಟ್ಟ ರಸ್ತೆ, ನಾಯಿಗಳ ದಾಳಿಯ ಭೀತಿ, ಚಳಿ, ಮಳೆ ಲೆಕ್ಕಿಸದೆ ಅವರು ವರ್ಷಪೂರ್ತಿ ಕೆಲಸ ಮಾಡುತ್ತಲೇ ಇರುತ್ತಾರೆ. ಇಂಥ ಶ್ರಮ ಸಂಸ್ಕೃತಿ ಹೊಂದಿರುವವರ ದಿನ ಇಂದು. ಪ್ರತಿ ವರ್ಷ ಸೆಪ್ಟೆಂಬರ್‌ 4 ವಿಶ್ವ ಪತ್ರಿಕಾ ವಿತರಕರ ದಿನವೆಂದು ಆಚರಿಸಲಾಗುತ್ತದೆ.

ಅನೇಕ ಪತ್ರಿಕಾ ವಿತರಕರು ಈ ಕೆಲಸದ ಜೊತೆಗೆ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿದ್ದಾರೆ. ಪತ್ರಿಕೆ ಹಂಚುವ ಕಾರಣಕ್ಕೆ ಬೆಳಗಿನ ಜಾವ ಬೇಗನೆ ಏಳುವುದು ಅವರಿಗೆ ರೂಢಿಯಾಗಿದ್ದು, ಉತ್ತಮವಾಗಿ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಲಸ ನೆರವಾಗಿದೆ.

ಕೊಪ್ಪಳದ ಕೇಂದ್ರೀಯ ಬಸ್‌ ನಿಲ್ದಾಣದ ಎದುರು ನಾಲ್ಕೂವರೆ ದಶಕಗಳಿಂದ ಇದೇ ಕಾಯಕದಲ್ಲಿ ತೊಡಗಿರುವ ವಿರೂಪಾಕ್ಷಪ್ಪ ಮುರಳಿ ಅವರು ‘45 ವರ್ಷಗಳಿಂದ ಇದೇ ವೃತ್ತಿಯಲ್ಲಿ ಬದುಕು ಕಳೆದಿದ್ದೇನೆ. ದಶಕಗಳು ಉರುಳಿದಂತೆ ಪತ್ರಿಕೆ ಹಂಚುವ ಹುಡುಗರು ಸಿಗುವುದು ಕಷ್ಟವಾಗುತ್ತಿದೆ. ಇದೇ ವೃತ್ತಿಯನ್ನು ನಂಬಿಕೊಂಡವರಿಗೆ ಸರ್ಕಾರ ವೃತ್ತಿಭದ್ರತೆ ಒದಗಿಸಬೇಕು, ನಿವೇಶನ ನೀಡಬೇಕು, ಮನೆ ಕಟ್ಟಲು ನೆರವಾಗಬೇಕು’ ಎಂದು ಮನವಿ ಮಾಡಿದರು.

ಬಾಕಿ ಬಿಲ್‌ ಪಾವತಿಸಲು ಮನವಿ

ಕೊಪ್ಪಳ: ‘ಸಾಕಷ್ಟು ಸಮಸ್ಯೆಗಳ ನಡುವೆಯೂ ನಾವು ಪತ್ರಿಕೆ ವಿತರಕರಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಹಲವು ಇಲಾಖೆಗಳಲ್ಲಿ ವರ್ಷಾನುಗಟ್ಟಲೆ ಪತ್ರಿಕೆ ಖರೀದಿಸಿದ ಬಿಲ್‌ ಬಾಕಿ ಉಳಿದುಕೊಂಡಿವೆ. ಇದರಿಂದ ನಮಗೆ ನಷ್ಟವಾಗುತ್ತಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಪತ್ರಿಕಾ ವಿತರಕರ ಸಂಘದ ಜಿಲ್ಲಾಧ್ಯಕ್ಷ ಗವಿರಾಜ ಕಂದಾರಿ ಮನವಿ ಮಾಡಿದರು.

‘ಅಧಿಕಾರಿಗಳ ಸಮ್ಮತಿ ಪಡೆದೇ ಪತ್ರಿಕೆ ನೀಡಿರುತ್ತೇವೆ. ಆದರೂ ಬಿಲ್‌ ಪಡೆಯಲು ವರ್ಷಗಟ್ಟಲೆ ಕಾಯಬೇಕೆಂದರೆ ನಮಗೆ ಆರ್ಥಿಕ ಹೊರೆಯಾಗುತ್ತದೆ’ ಎಂದು ಅವರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-35-1006473432

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ