ಮಳೆ, ಚಳಿ ಲೆಕ್ಕಿಸದೆ ವರ್ಷವಿಡೀ ಕೆಲಸ ನಿರ್ವಹಿಸುವ ಪತ್ರಿಕಾ ಏಜೆಂಟರು, ವಿತರಕರು

ಮಳೆ, ಚಳಿ ಲೆಕ್ಕಿಸದೆ ವರ್ಷವಿಡೀ ಕೆಲಸ ನಿರ್ವಹಿಸುವ ಪತ್ರಿಕಾ ಏಜೆಂಟರು, ವಿತರಕರು

ಮಳೆ, ಚಳಿ ಲೆಕ್ಕಿಸದೆ ವರ್ಷವಿಡೀ ಕೆಲಸ ನಿರ್ವಹಿಸುವ ಪತ್ರಿಕಾ ಏಜೆಂಟರು, ವಿತರಕರು

ಬೀದರ್‌: ಮನೆ, ಸರ್ಕಾರಿ ಕಚೇರಿ, ಮಳಿಗೆ, ಹೋಟೆಲ್‌ ಹೀಗೆ ಪ್ರತಿಯೊಂದು ಜಾಗಕ್ಕೆ ಪತ್ರಿಕೆ ತಲುಪಿಸುವ ಪತ್ರಿಕಾ ಏಜೆಂಟರು ಹಾಗೂ ವಿತರಕರು ಜನರಿಗೆ ಸುದ್ದಿ ತಲುಪಿಸುವ ನಿಜವಾದ ವೀರರು.

ವರದಿಗಾರರು ಆಯಾ ಭಾಗಗಳಿಂದ ಸುದ್ದಿ ಸಂಗ್ರಹಿಸಿ, ಸುದ್ದಿ ಮನೆಗೆ ಕಳುಹಿಸುತ್ತಾರೆ. ಸುದ್ದಿ ಮನೆಯಲ್ಲಿ ಯಾವುದೇ ತಪ್ಪಿಲ್ಲದಂತೆ ಅಂತಿಮ ಸ್ಪರ್ಶ ನೀಡಲಾಗುತ್ತದೆ. ಪುಟ ವಿನ್ಯಾಸಕಾರರು ಚೆಂದದಿಂದ ಪುಟ ವಿನ್ಯಾಸಗೊಳಿಸಿ ಅದಕ್ಕೊಂದು ರೂಪ ನೀಡುತ್ತಾರೆ. ಬಳಿಕ ಪತ್ರಿಕೆ ಮುದ್ರಣಗೊಳ್ಳುತ್ತದೆ. ಅದನ್ನು ಶಿಸ್ತಾಗಿ ಜೋಡಿಸಿಕೊಂಡು, ಪ್ರತಿಯೊಂದು ಮನೆಯ ಬಾಗಿಲಿಗೆ ತಲುಪಿಸಿ, ಇಡೀ ಜಗತ್ತಿನ ವಿದ್ಯಮಾನ ತಿಳಿಸುವ ಮಹತ್ವದ ಕೆಲಸ ಮಾಡುವವರು ಈ ಪತ್ರಿಕಾ ವಿತರಕರು.

ಇನ್ನೂ ಬೆಳಕು ಹರಿಯುವುದಿಲ್ಲ ಅಷ್ಟೊತ್ತಿಗೆ ಪತ್ರಿಕಾ ವಿತರಕರ ಕೆಲಸ ಆರಂಭಗೊಳ್ಳುತ್ತದೆ. ಜನರು ಗಾಢ ನಿದ್ರೆಯಲ್ಲಿದ್ದರೆ ಇವರು ತಡರಾತ್ರಿ 2 ಗಂಟೆಗೆಲ್ಲ ಎದ್ದು ಪತ್ರಿಕೆಗಳ ನಿರೀಕ್ಷೆಯಲ್ಲಿ ಕಾದು ಕುಳಿತಿರುತ್ತಾರೆ. ಬಸ್‌, ಜೀಪು ಹಾಗೂ ವ್ಯಾನ್‌ಗಳಲ್ಲಿ ಆಯಾ ನಗರದ ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತಗಳು, ಜನನಿಬಿಡ ಸ್ಥಳಗಳಿಗೆ ಪತ್ರಿಕೆಗಳ ಬಂಡಲ್‌ಗಳು ಬರುತ್ತವೆ. ಅವುಗಳನ್ನು ಸಂಗ್ರಹಿಸಿ, ಒಂದೆಡೆ ಕುಳಿತು, ಯಾವ ಬಡಾವಣೆಗಳಿಗೆ ಎಷ್ಟು ಪತ್ರಿಕೆಗಳು ಹೋಗುತ್ತವೆಯೋ ಅವುಗಳನ್ನು ವಿಂಗಡಿಸಿ, ಕಳುಹಿಸಿಕೊಡುತ್ತಾರೆ.

ಪ್ರಿಂಟಿಂಗ್‌ ಪ್ರೆಸ್‌ನಿಂದ ಎಷ್ಟು ಶಿಸ್ತಿನಿಂದ ಪತ್ರಿಕೆ ಬರುತ್ತದೆಯೋ ಅಷ್ಟೇ ಜತನದಿಂದ ಅದನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಯಾರಿಂದಲೂ ಒಂದು ಸಣ್ಣ ದೂರಿಗೆ ಆಸ್ಪದ ಮಾಡಿಕೊಡುವುದಿಲ್ಲ. ಅದು ಕೂಡ ನಿತ್ಯ ಬೆಳಕು ಹರಿಯುವ ನಿಗದಿತ ಸಮಯಕ್ಕೆ.

ಮಳೆ, ಚಳಿ ಸೇರಿದಂತೆ ಎಂತಹುದೇ ಪ್ರತಿಕೂಲ ಸನ್ನಿವೇಶವಿದ್ದರೂ ತಮ್ಮ ಜವಾಬ್ದಾರಿಯಿಂದ ಹಿಂದಡಿ ಇರಿಸುವುದಿಲ್ಲ. ಸೈನಿಕರಂತೆ ಇವರು ಕೂಡ ಶಿಸ್ತು, ಸಮಯ ಪಾಲನೆ ಹಾಗೂ ಬದ್ಧತೆಗೆ ಹೆಸರಾಗಿದ್ದಾರೆ. ವಾಸ್ತವದಲ್ಲಿ ಇವರೇ ದಿನಪತ್ರಿಕೆಗಳ ಮುಖ್ಯ ಜೀವಾಳ.

ಜನರ ಮನೆ ಬಾಗಿಲಿಗೆ ಪತ್ರಿಕೆಗಳು ತಲುಪದಿದ್ದರೆ ಗಲ್ಲಿಯಿಂದ ದಿಲ್ಲಿವರೆಗೆ ನಡೆಯುವ ಬೆಳವಣಿಗೆಗಳು ಜನರಿಗೆ ಗೊತ್ತಾಗುವುದಿಲ್ಲ. ಇವರೇ ನಿಜ ಅರ್ಥದಲ್ಲಿ ಪತ್ರಿಕೆಗಳ ಆಧಾರ ಸ್ತಂಭ. ಎಷ್ಟೇ ಸಂದಿ, ಗೊಂದಿ ಇರಲಿ ಅಲ್ಲಿ ಬೈಸಿಕಲ್‌, ಬೈಕುಗಳ ಮೂಲಕ ತಲುಪಿ ಜನರಿಗೆ ಪತ್ರಿಕೆ ತಲುಪಿಸುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಬೀದಿ ನಾಯಿಗಳು, ಕಳ್ಳಕಾಕರನ್ನು ಎದುರಿಸಿದ ಸಂದರ್ಭಗಳಿವೆ. ಆದರೆ, ಎಂದೂ ಕೂಡ ಧೃತಿಗೆಟ್ಟಿಲ್ಲ. ಛಲದಂಕ ಮಲ್ಲರಂತೆ ಕೆಲಸ ನಿರ್ವಹಿಸುತ್ತಾರೆ. ಸದಾ ಹಸನ್ಮುಖದಿಂದ ಜನರಿಗೆ ಪತ್ರಿಕೆ ಕೈಗಿಟ್ಟು, ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇವರ ಹಾಗೂ ಓದುಗರ ನಡುವಿನ ಸಂಬಂಧ ವ್ಯವಹಾರಕ್ಕಷ್ಟೇ ಸೀಮಿತವಾಗಿದೆ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿದೆ.

ಇನ್ನು ಅನೇಕ ಕಡೆಗಳಲ್ಲಿ ನಿತ್ಯ ನಡೆಯುವ ವಿದ್ಯಮಾನಗಳ ಕುರಿತು ಇವರು ವರದಿಗಾರರಿಗೆ ತಿಳಿಸಿ, ಆ ಮೂಲಕ ಪರೋಕ್ಷವಾಗಿ ವರದಿಗಾರರಂತೆ ಕೆಲಸ ನಿರ್ವಹಿಸಿದ ಅನೇಕ ನಿದರ್ಶನಗಳೂ ಇವೆ.

‘ಪತ್ರಿಕೆಗಳು ವರ್ಷದಲ್ಲಿ ನಾಲ್ಕು ದಿನಗಳು ಬಿಟ್ಟರೆ ಮಿಕ್ಕುಳಿದ ದಿನಗಳೆಲ್ಲ ಮುದ್ರಣಗೊಳ್ಳುತ್ತದೆ. ನಮಗೆ ರಜೆ ಮಾಡಿ ಗೊತ್ತೇ ಇಲ್ಲ. ಪತ್ರಿಕೆ ತಲುಪುವುದು ಸ್ವಲ್ಪ ತಡವಾದರೂ ಓದುಗರಿಗೆ ಸಮಯಕ್ಕೆ ಓದಿ ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಆದಕಾರಣ ಸಮಯಕ್ಕೆ ಹೆಚ್ಚು ಒತ್ತು ಕೊಡುತ್ತೇವೆ’ ಎನ್ನುತ್ತಾರೆ ಪತ್ರಿಕಾ ವಿತರಕರು ಹಾಗೂ ಏಜೆಂಟರು.

‘ಪತ್ರಿಕೆಗಳ ಬೆಳವಣಿಗೆಯಲ್ಲಿ ನಮ್ಮ ಪಾತ್ರ ಕೂಡ ಬಹಳ ದೊಡ್ಡದಿದೆ. ಅದರಿಂದ ನಾವು ಕೂಡ ಬದುಕು ಕಟ್ಟಿಕೊಂಡಿದ್ದೇವೆ. ಸಂಧ್ಯಾ ಕಾಲದಲ್ಲಿ ನಮ್ಮ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಆರೋಗ್ಯ ವಿಮೆ, ಮಾಸಾಶನ ಸೇರಿದಂತೆ ಇತರೆ ಸರ್ಕಾರಿ ಸೌಲಭ್ಯ ಕಲ್ಪಿಸಿದರೆ ನಮಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ.

ಕೋವಿಡ್‌ನಲ್ಲಿ ಜೀವ ಪಣಕ್ಕಿಟ್ಟರು

ಕೋವಿಡ್‌ ಸಂದರ್ಭದಲ್ಲಿ ಬಹುತೇಕರು ಮನೆಯಲ್ಲಿದ್ದರು. ಆದರೆ, ಪತ್ರಿಕಾ ಏಜೆಂಟರು ಹಾಗೂ ವಿತರಕರು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದರು.

ಸೋಂಕು ವ್ಯಾಪಕವಾಗಿ ಹರಡುವ ಸಂದರ್ಭದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಂಡು ಕೆಲಸ ನಿರ್ವಹಿಸಿದ್ದರು. ಪತ್ರಿಕೆಗಳ ಮೂಲಕವೂ ಸೋಂಕು ಹರಡುತ್ತದೆ ಎಂದು ಗಾಳಿ ಸುದ್ದಿ ಹರಡಿದಾಗ, ಓದುಗರಿಗೆ ಮನವರಿಕೆ ಮಾಡಿ, ಪತ್ರಿಕೆ ಓದುವಂತೆ ಮಾಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-33-798357097

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ