
ನಾಪೋಕ್ಲು: ಕೊಟ್ಟೂರು ದೇವಸ್ಥಾನ ಅಷ್ಟಮಿಗೆ ಸಜ್ಜು
ನಾಪೋಕ್ಲು: ಇಲ್ಲಿಗೆ ಸಮೀಪದ ಚೇರಂಬಾಣೆಯ ಕೊಟ್ಟೂರಿನ ಶ್ರೀಗೋಪಾಲಕೃಷ್ಣ ದೇವಸ್ಥಾನ ಗ್ರಾಮೀಣ ಜನರ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದು ಶ್ರೀಕೃಷ್ಣ ಜನ್ಮಾ ಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮಡಿಕೇರಿ- ಭಾಗಮಂಡಲ ಮುಖ್ಯರಸ್ತೆ ಯಿಂದ ಕೊಟ್ಟೂರಿನಲ್ಲಿ 1 ಕಿ.ಮೀ. ಅಂತರವನ್ನು ಕ್ರಮಿಸಿದರೆ ಪ್ರಕೃತಿಯ ಮಡಿಲಿನಲ್ಲಿ ನೆಲೆನಿಂತಿರುವ ಶ್ರೀಗೋಪಾಲ ಕೃಷ್ಣದೇವಸ್ಥಾನ ಸಿಗುತ್ತದೆ.
ನಯನ ಮನೋಹರವಾದ ಪ್ರಕೃತಿಯಿಂದ ಕೂಡಿದ ಈ ದೇವಾಲಯದ ಮುಂಭಾಗ ಹಸಿರುಗದ್ದೆಗಳು, ಮತ್ತೊಂದು ಪಾರ್ಶ್ವದಲ್ಲಿ ಹೊಳೆ ಇತ್ಯಾದಿ ದೃಶ್ಯಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತಿವೆ.
ಈ ದೇವಾಲಯ ಸುಮಾರು 400 ವರ್ಷಗಳ ಹಳೆಯ ದೇವಸ್ಥಾನವೆಂದು ಹೇಳಲಾಗಿದೆ.
ದೇವಾಲಯದ ಪುನರ್ ನಿರ್ಮಾಣದ ಸಂದರ್ಭದಲ್ಲಿ ದೊರೆತ 2 ತಾಮ್ರದ ನಾಣ್ಯಗಳಿಂದ ಕರ್ನಾಟಕವನ್ನು ಆಳಿದ ಗಂಗರ ಕಾಲಕ್ಕೆ ಸೇರಿದೆ ಎಂದು ತಿಳಿದುಬಂದಿದೆ.
ಇದು ಸಾಮಂತ ರಾಜರ ನೆಲೆಯಾಗಿತ್ತು ಎಂಬ ಮಾಹಿತಿಯೂ ಇದೆ. ಇಲ್ಲಿ ಆಡಳಿತ ಕಚೇರಿಯೂ ನಡೆಯುತ್ತಿತ್ತೆಂದು ಪ್ರತೀತಿ ಇದೆ. ದೇವಾಲಯದ ಮುಭಾಗದ ಗದ್ದೆಗಳಿಗೆ ಕಛೇರಿಕಂಡ ಎಂಬ ಹೆಸರಿದ್ದು ಪೂರ್ವಿಕರ ಕಾಲದಲ್ಲಿ ಇದು ನ್ಯಾಯಸ್ಥಾನವಾಗಿ ಕಾರ್ಯ ನಿರ್ವಹಿಸುತ್ತಿತ್ತೆಂದು ಉಲ್ಲೇಖಗಳಿವೆ.
ದೇವಾಲಯದ ಪೂರ್ವದಿಕ್ಕಿನಲ್ಲಿಒಂದು ಹೆಬ್ಬಂಡೆ ಇದ್ದು ಇದನ್ನು ಸತ್ಯ ಪ್ರಮಾಣ ಕಲ್ಲು ಎಂದು ಇಂದಿಗೂ ಕರೆಯ ಲಾಗುತ್ತದೆ. ಅಪರಾಧ ಮಾಡಿಲ್ಲ ಎಂದು ಹೇಳುವ ವ್ಯಕ್ತಿಯು ಪೂರ್ವಭಾಗದಲ್ಲಿ ಹರಿಯುವ ನದಿಯಲ್ಲಿ ಸ್ನಾನ ಮಾಡಿ ದೇವರ ಎದುರು ನಿಂತು ಸತ್ಯ ಪ್ರಮಾಣ ಕಲ್ಲನ್ನು ಮುಟ್ಟಿ ತಾನು ನಿರಪರಾಧಿ ಎಂದು ಘೋಷಿಸಬೇಕಾಗಿತ್ತು. ಸತ್ಯ ಪ್ರಮಾಣ ಮಾಡಲು ಎಲ್ಲರೂ ಹಿಂಜರಿಯುತ್ತಿದ್ದರು. ಈ ದೇವಾಲಯವು ಬೇಂಗ್ ನಾಡಿನ ಕೇಂದ್ರ ಸ್ಥಾನವಾಗಿದೆ.
ಹುತ್ತರಿ ಹಬ್ಬದ ನಂತರ 7 ಗ್ರಾಮಗಳ ಜನರು ಒಟ್ಟಾಗಿ ಸೇರಿ ಕೋಲಾಟ, ಬೊಳಕಾಟ, ಪರೆಯಕಳಿ ಮೊದಲಾದ ಸಾಂಸ್ಕೃತಿಕ ನೃತ್ಯಗಳನ್ನು ನಡೆಸಿ ಸಂಭ್ರಮಿಸುತ್ತಾರೆ. ಇಂದಿಗೂ 5 ಗ್ರಾಮಗಳ ಜನರು ತಪ್ಪದೇ ಭಾಗವಹಿಸುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-51-1785500600