ಮಡಿಕೇರಿ ರಾಜಾಸೀಟ್ ರಸ್ತೆ ಕಾಮಗಾರಿ ಸ್ಥಗಿತ; ದಸರಾ ಶೋಭಾಯಾತ್ರೆಗೆ ಅಡ್ಡಿ

ಮಡಿಕೇರಿ ರಾಜಾಸೀಟ್ ರಸ್ತೆ ಕಾಮಗಾರಿ ಸ್ಥಗಿತ; ದಸರಾ ಶೋಭಾಯಾತ್ರೆಗೆ ಅಡ್ಡಿ

ಮಡಿಕೇರಿ ರಾಜಾಸೀಟ್ ರಸ್ತೆ ಕಾಮಗಾರಿ ಸ್ಥಗಿತ; ದಸರಾ ಶೋಭಾಯಾತ್ರೆಗೆ ಅಡ್ಡಿ

ಮಡಿಕೇರಿ: ಇಲ್ಲಿನ ಐತಿಹಾಸಿಕ ರಾಜಾಸೀಟ್ ಉದ್ಯಾನದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ದಸರಾ ವೇಳೆಗೆ ಪೂರ್ಣಗೊಳಿಸುವುದು ಕಷ್ಟಕರವಾಗಿರುವುದರಿಂದ ಹಳೆಯ ರಸ್ತೆಯಲ್ಲೇ ದಸರೆಯ ದಶಮಂಟಪಗಳ ಶೋಭಾಯಾತ್ರೆ ನಡೆಯುವುದು ಬಹುತೇಕ ನಿಶ್ಚಿತ ಎನಿಸಿದೆ.

ನಿರಂತರವಾಗಿ ಮಳೆ ಇದ್ದುದ್ದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗಿರಲಿಲ್ಲ. ಮಳೆ ನಿಂತ ನಂತರ ಕಾಮಗಾರಿ ಆರಂಭವಾಯಿತಾದರೂ ಅದಕ್ಕೆ ಹಲವು ತೊಡಕುಗಳು ಎದುರಾದವು. ಹೀಗಾಗಿ, ಆ. 14ರಂದು ಆರಂಭವಾದ ₹ 1.5 ಕೋಟಿ ಮೊತ್ತದ ಈ ಕಾಮಗಾರಿ ನಿಂತಲ್ಲೆ ನಿಂತಿದೆ.

ಮುಖ್ಯವಾಗಿ, ‌ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕಾಗಿ ರಸ್ತೆಬದಿಯಲ್ಲೇ ಇರುವ ಸುಮಾರು ಏಳೆಂಟು ಚಿಕ್ಕ ಚಿಕ್ಕ ಮರಗಳನ್ನು ತೆಗೆಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ಮರ ತೆಗೆಯಲು ಅನುಮತಿಗಾಗಿ ನಗರಸಭೆ ಅರಣ್ಯ ಇಲಾಖೆಗೆ ನೀಡಿದೆ. ಇನ್ನೂ ಸಹ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಇನ್ನೇನು ಅನುಮತಿ ಸಿಗುವ ನಿರೀಕ್ಷೆ ಇದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

ಇಲ್ಲಿ ಕೇವಲ ಮರಗಳು ಮಾತ್ರವಲ್ಲ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳೂ ತೊಡಕಾಗಿ ಪರಿಣಮಿಸಿವೆ. ರಾಜಾಸೀಟ್ ರಸ್ತೆಯಲ್ಲಿ ಒಟ್ಟು 23 ವಿದ್ಯುತ್ ಕಂಬಗಳಿವೆ. ಇವುಗಳಲ್ಲಿ ಕೆಲವೊಂದು ಕಂಬಗಳನ್ನು ರಸ್ತೆಬದಿಗೆ ಸ್ಥಳಾಂತರ ಮಾಡಬೇಕಿದೆ. ಮೊನ್ನೆಯಷ್ಟೇ ನಗರಸಭೆ ಮತ್ತು ಸೆಸ್ಕ್ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲಿ ಕಂಬಗಳನ್ನು ಹಿಂದಕ್ಕೆ ಸ್ಥಳಾಂತರ ಮಾಡುವ ಕಾರ್ಯ ಆರಂಭವಾಗಲಿದೆ.

ಇನ್ನು ಇಷ್ಟೆಲ್ಲ ಕೆಲಸ ಮುಗಿಸಿ ಕಾಮಗಾರಿ ಆರಂಭಿಸಿದರೆ ಪೂರ್ಣಗೊಳ್ಳಲು ಕನಿಷ್ಠ ಎಂದರೂ 40 ದಿನಗಳು ಬೇಕೇ ಬೇಕು. ಆದರೆ, ಕರಗೋತ್ಸವ ಆರಂಭವಾಗುವುದಕ್ಕೆ ಇನ್ನು ಇರುವುದು 32 ದಿನಗಳು ಮಾತ್ರ. ಹಾಗಾಗಿ, ಕಾಮಗಾರಿ ಆರಂಭವಾದರೂ ಅಷ್ಟರಲ್ಲಿ ಮುಗಿಯುವುದು ಕಷ್ಟಸಾಧ್ಯ ಎನಿಸಿದೆ.

ದಸರೆಗೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ದಶಮಂಟಪಗಳ ಶೋಭಾಯಾತ್ರೆ ಮುಗಿದ ಬಳಿಕ ಕಾಮಗಾರಿ ಆರಂಭಿಸುವ ಕುರಿತೂ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಮಳೆ ಇದ್ದಾಗಲೇ ಮರ ತೆಗೆಯುವ ಕಾರ್ಯ, ವಿದ್ಯುತ್ ಕಂಬಗಳನ್ನು ಹಿಂದಕ್ಕೆ ಸ್ಥಳಾಂತರ ಮಾಡುವ ಕಾರ್ಯಗಳನ್ನು ಮಾಡಿದ್ದರೆ ಮಳೆ ನಿಂತ ಕೂಡಲೇ ಕಾಮಗಾರಿ ಆರಂಭಿಸಿ, ದಸರೆ ವೇಳೆ ನೂತನ ರಸ್ತೆಯನ್ನು ಸಿದ್ಧಪಡಿಸಬಹುದಿತ್ತು. ಆದರೆ, ಮಂದಗತಿಯ ಕಾರ್ಯನಿರ್ವಹಣೆಯಿಂದ ಕಾಮಗಾರಿ ತಡವಾಗುತ್ತಿದೆ ಎಂದು ನಾಗರಿಕರು ದೂರುತ್ತಾರೆ.

ಕನಿಷ್ಠ ಪಕ್ಷ ಆಗಸ್ಟ್ 14ರಂದು ಕಾಮಗಾರಿ ಆರಂಭವಾಯಿತು. ಅಂದಿನಿಂದಲಾದರೂ ಮರ ತೆಗೆಯಲು, ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುವ ಕಾರ್ಯ ಚುರುಕಾಗಿ ಮಾಡಿದ್ದರೆ ದಸರೆ ವೇಳೆ ಹೊಸ ರಸ್ತೆ ಸಿದ್ಧವಾಗುತ್ತಿತ್ತು. ಅಧಿಕಾರಿಗಳು ಅದನ್ನೂ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಸಾಮಾಜಿಕ ಮಾಧ್ಯಮಗಳಲ್ಲಿಯೂ ರಾಜಾಸೀಟ್ ರಸ್ತೆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಗರಕ್ಕೆ ಬಂದಾಗ ಮಣ್ಣು ಹಾಕಿ ರಸ್ತೆಯನ್ನು ದುರಸ್ತಿಪಡಿಸುವ ಕಾರ್ಯ ಆರಂಭವಾಗಿತ್ತು. ಅವರು ಹೋದ ಕೂಡಲೇ ಕಾಮಗಾರಿಯನ್ನು ನಿಲ್ಲಿಸಲಾಯಿತು ಎಂಬುದು ಸೇರಿದಂತೆ ನಾನಾ ಬಗೆಯ ಟೀಕೆಗಳು ವ್ಯಕ್ತವಾಗುತ್ತಿವೆ.

ಜಿಲ್ಲಾಡಳಿತ ಭವನ, ವಿಶ್ವ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್‌ ಇದೇ ರಸ್ತೆಯಲ್ಲೇ ಇದೆ. ನಿತ್ಯವೂ ಸಾವಿರಾರು ಮಂದಿ ಇಲ್ಲಿ ಸಂಚರಿಸುತ್ತಾರೆ. ಇಂತಹ ರಸ್ತೆಯ ಸ್ಥಿತಿ ಕಂಡು ಎಲ್ಲರೂ ಬೇಸರಪಟ್ಟುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.

₹ 1.5 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಆಗಿದ್ದರೂ ಕೆಲಸ ಆರಂಭವಾಗಿಲ್ಲ ಎಂದು ‘ಪ್ರಜಾವಾಣಿ’ ಆಗಸ್ಟ್ 13ರಂದು ವಿಶೇಷ ವರದಿ ಪ್ರಕಟಿಸಿತ್ತು. ಮರುದಿನವೇ ಕಾಮಗಾರಿ ಆರಂಭವಾಗಿತ್ತು. ಆದರೆ, ಅದು ಎಲ್ಲಿ ಆರಂಭವಾಗಿತ್ತೋ ಅಲ್ಲಿಯೇ ಕಾಮಗಾರಿ ಇದ್ದು, ಮುಂದುವರಿದಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ