ಮಳೆ ಸುರಿಯದಿದ್ದರೆ ಕೈಬಿಡಲಿದೆ ರಾಗಿ ಬೆಳೆ: ಹೊಸದುರ್ಗ ರೈತರು ಆತಂಕ

ಮಳೆ ಸುರಿಯದಿದ್ದರೆ ಕೈಬಿಡಲಿದೆ ರಾಗಿ ಬೆಳೆ: ಹೊಸದುರ್ಗ ರೈತರು ಆತಂಕ

ಮಳೆ ಸುರಿಯದಿದ್ದರೆ ಕೈಬಿಡಲಿದೆ ರಾಗಿ ಬೆಳೆ: ಹೊಸದುರ್ಗ ರೈತರು ಆತಂಕ

ಹೊಸದುರ್ಗ: ತಾಲ್ಲೂಕಿನ ಮತ್ತೋಡು, ಶ್ರೀರಾಂಪುರ ಹಾಗೂ ಮಾಡದಕೆರೆ ಹೋಬಳಿಗಳಲ್ಲಿ ಮಳೆ ಕೈಕೊಟ್ಟಿರುವ ಬಿತ್ತನೆ ಮಾಡಿರುವ ರಾಗಿ ಪೈರು ತೇವಾಂಶದ ಕೊರತೆಯಿಂದ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹಲವು ಕಡೆ ಬಿತ್ತನೆ ಕಾರ್ಯವೇ ನಡೆದಿಲ್ಲ. ಕೆಲವೆಡೆ ಬಿತ್ತನೆ ಮಾಡಿದ್ದರೂ ರಾಗಿ ಮೊಳಕೆಯೊಡೆದಿಲ್ಲ. ಮೊಳಕೆಯೊಡೆದಿರುವ ಪ್ರದೇಶಗಳಲ್ಲಿಯೂ ಪೈರಿನ ಬೆಳವಣಿಗೆ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಬೆಳೆ ಸಂಪೂರ್ಣ ಒಣಗುವ ಸಾಧ್ಯತೆ ಹೆಚ್ಚಿದೆ. ಜಾನುವಾರುಗಳ ಮೇವಿಗೂ ಸಮಸ್ಯೆ ಎದುರಾಗಿದೆ. ಮನೆಯಲ್ಲಿರುವ ಮೇವಿನ ದಾಸ್ತಾನು ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ.

ಕಸಬಾ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ರಾಗಿ ಬೆಳೆ ಸ್ವಲ್ಪಮಟ್ಟಿಗೆ ಉತ್ತಮವಾಗಿದೆ. ರೈತರು ಅಂತರ ಬೇಸಾಯ ಮಾಡಿಕೊಂಡು, ಮೇಲುಗೊಬ್ಬರ ಹಾಕಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಗೊಬ್ಬರ ಹಾಕಿದ ಬಳಿಕ ಉತ್ತಮ ಮಳೆಯಾದರೆ ಮಾತ್ರ ಪೈರು ಚೇತರಿಸಿಕೊಂಡು ಉತ್ತಮ ಇಳುವರಿ ನೀಡುತ್ತದೆ. ಹೀಗಾಗಿ ರೈತರು ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಪರಿಸ್ಥಿತಿಯನ್ನು ಕೃಷಿ ಇಲಾಖೆ ಪರಿಶೀಲಿಸಿ ಅಗತ್ಯ ನೆರವು ಹಾಗೂ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

‘ಶ್ರೀರಾಂಪುರ, ಮತ್ತೋಡು ಹೋಬಳಿಗಳಲ್ಲಿ ರಾಗಿ ಬಿತ್ತನೆ ಆಗಿಲ್ಲ. ಕಸಬಾ ಹೋಬಳಿಯಲ್ಲಿ ಬಿತ್ತನೆಯಾಗಿದ್ದ ಬೆಳೆಯೂ ಒಣಗುತ್ತಿದೆ. ತಾಲ್ಲೂಕಿನಾದ್ಯಂತ ಬರಗಾಲ ಆವರಿಸಿ, ಇರುವ ಸ್ವಲ್ಪ ಬೆಳೆಯೂ ಒಣಗುತ್ತಿದೆ. ಸದ್ಯ ಎಲ್ಲಿಯಾದರೂ ಮಳೆಯಾದರೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕಬೇಡಿ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಮನವಿ ಮಾಡಿದ್ದಾರೆ.

‘ಶೇ 25ರಷ್ಟು ಪರಿಹಾರ ಸಂದಾಯ’

ಪ್ರತಿ ವರ್ಷ ತಾಲ್ಲೂಕಿನಾದ್ಯಂತ 25 ಸಾವಿರದಿಂದ 30 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗುತ್ತಿತ್ತು. ಆದರೆ ಮಳೆ ಕೊರತೆಯಿಂದಾಗಿ ಶೇ 75ರಷ್ಟು ಬಿತ್ತನೆ ಕುಂಠಿತವಾಗಿದೆ.

‘ಬೆಳೆ ವಿಮೆ ಕಂತು ಪಾವತಿಸಿರುವ ಹಾಗೂ ಬಿತ್ತನೆ ವಿಫಲವಾಗಿರುವ ರೈತರಿಗೆ ಶೇ 25ರಷ್ಟು ಪರಿಹಾರವನ್ನು ಸಂದಾಯ ಮಾಡಲಾಗುತ್ತದೆ. ಪ್ರತಿ ಎಕರೆಗೆ ₹5,000ನಂತೆ 23,420 ರೈತರಿಗೆ ₹15.10 ಕೋಟಿ ಪರಿಹಾರವನ್ನು ಮುಂದಿನ ದಿನಗಳಲ್ಲಿ ಡಿಬಿಟಿ ಮೂಲಕ ಪಾವತಿ ಮಾಡಲಾಗುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ