
ಮೊಳಕಾಲ್ಮುರು: 96 ಕಡೆ ಗಣಪತಿ ವಿಸರ್ಜನೆ ಕಾರ್ಯಕ್ರಮ
ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ಸೋಮವಾರದಿಂದ ಮೂರು ದಿನ ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮ ವೈಭವದಿಂದ ನಡೆಯಿತು.
ಕಸಬಾ ಹೋಬಳಿಯಲ್ಲಿ ಒಟ್ಟು 68 ಕಡೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾ ಗಿದ್ದು, ಇದರಲ್ಲಿ 48 ಮೂರ್ತಿಗಳನ್ನು ಬುಧವಾರ ಸಂಜೆ ವಿಸರ್ಜನೆ ಮಾಡಲಾಯಿತು. ಉಳಿದ ಮೂರ್ತಿಗಳ ಪೈಕಿ ಬಹುತೇಕ ಶುಕ್ರವಾರ ವಿಸರ್ಜನೆಯಾಗಲಿವೆ.
ಮೊಳಕಾಲ್ಮುರಿನ ಹಿಂದೂ ಮಹಾ ಗಣಪತಿ ಮೂರ್ತಿ ಮತ್ತು ಜತೆಯಲ್ಲಿ ಎರಡು ಮೂರ್ತಿಗಳ ವಿಸರ್ಜನೆ ಕಾರ್ಯವು 9ನೇ ದಿನದಲ್ಲಿ ನಡೆಯಲಿದೆ ಎಂದು ಪಿಎಸ್‌ಐ ಮಹೇಶ್ ಹೊಸಪೇಟೆ ಮಾಹಿತಿ ನೀಡಿದರು.
ದೇವಸಮುದ್ರ ಹೋಬಳಿಯಲ್ಲಿ ಒಟ್ಟು 85 ಕಡೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಇದರಲ್ಲಿ 48 ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ಬುಧವಾರ ನಡೆದಿದೆ. ಉಳಿದವುಗಳ ಪೈಕಿ ಬಹುತೇಕ ಮೂರ್ತಿಗಳ ವಿಸರ್ಜನೆ ಶುಕ್ರವಾರ ನಡೆಯಲಿದೆ ಎಂದು ರಾಂಪುರ ಪಿಎಸ್‌ಐ ಬಾಹುಬಲಿ ಮಾಹಿತಿ ನೀಡಿದರು.
ಬುಧವಾರ ಸಂಜೆ ಟ್ರ್ಯಾಕ್ಟರ್, ಎತ್ತಿನಬಂಡಿಗಳಲ್ಲಿ ಮೂರ್ತಿಗಳನ್ನು ಇರಿಸಿ ಡಿಜೆ ಹಾಡುಗಳಿಗೆ ಯುವಕರು ಹೆಜ್ಜೆ ಹಾಕುತ್ತಾ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಿ ಮೂರ್ತಿಗಳನ್ನು ವಿಸರ್ಜಿಸಿದ ದೃಶ್ಯ ಗ್ರಾಮಗಳಲ್ಲಿ ಕಂಡುಬಂದಿತು.