
ಹಿರಿಯೂರು: ರೈತರಿಂದ ಸಾಂಪ್ರದಾಯಿಕ ವಿಧಾನದ ಮೋಡ ಬಿತ್ತನೆ
ಹಿರಿಯೂರು: ತಾಲ್ಲೂಕಿನ ದಿಂಡಾವರ ಗ್ರಾಮದ ರೈತರು ಭಾನುವಾರ ಮಳೆಗಾಗಿ ಸಾಂಪ್ರದಾಯಿಕ ವಿಧಾನದ ಮೋಡ ಬಿತ್ತನೆ ನಡೆಸಿದರು.
‘2 ತಿಂಗಳಿಂದ ಒಂದು ಹನಿ ಮಳೆ ಬಿದ್ದಿಲ್ಲ. ಮೋಡದತ್ತ ನೋಡಿ ಸಾಕಾಗಿದೆ. ಸರ್ಕಾರದಿಂದಲೂ ಮೋಡ ಬಿತ್ತನೆಯಾಗಲಿಲ್ಲ. ಹೀಗಾಗಿ ಸಾಂಪ್ರದಾಯಿಕ ಮೋಡ ಬಿತ್ತನೆ ಅನಿವಾರ್ಯವಾಯಿತು’ ಎಂದು ಪ್ರಗತಿಪರ ರೈತ ಚಂದ್ರಗಿರಿ ತಿಳಿಸಿದರು.
‘ಬಹಳ ವರ್ಷಗಳ ಹಿಂದೆ ಇದೇ ರೀತಿ ಮಳೆ ಕೈಕೊಟ್ಟಾಗ ನಮ್ಮ ಪೂರ್ವಿಕರು ಎಲೆಗಳನ್ನು ಕಿತ್ತರೆ ಹಾಲು ಒಸರುವ ಮರ– ಗಿಡಗಳ ಕೊಂಬೆ, ಎಲೆಗಳನ್ನು ತಂದು ರಾಶಿ ಹಾಕಿ (ಯಕ್ಕ, ಹತ್ತಿ, ಮರಳೆ, ಹಲಸು ಮುಂತಾದ) 3 ಕ್ವಿಂಟಲ್‌ನಷ್ಟು ಉಪ್ಪು ಸುರಿದು ಬೆಂಕಿ ಹಚ್ಚಿ ವಾತಾವರಣಕ್ಕೆ ದಟ್ಟ ಹೊಗೆಯನ್ನು ಕಳಿಸುವ ಮೂಲಕ ಮಳೆಯನ್ನು ಆಕರ್ಷಿಸುವ (ಮೋಡ ಬಿತ್ತನೆ) ಕೆಲಸ ಮಾಡುತ್ತಿದ್ದರಂತೆ. ಇದರಿಂದ ವಾತಾವರಣದಲ್ಲಿ ಮೋಡಗಳು ಸಾಂದ್ರೀಕರಣಗೊಂಡು ಮಳೆಯನ್ನು ಆಕರ್ಷಿಸುತ್ತವೆ ಎನ್ನುವ ನಂಬಿಕೆ ಹಳ್ಳಿಯ ಜನರಲ್ಲಿದೆ. ಹೀಗಾಗಿ ನಮ್ಮ ಕಾಲ ಘಟ್ಟದಲ್ಲಿ ಮೊದಲ ಬಾರಿಗೆ ಅಂತಹ ಪ್ರಯತ್ನಕ್ಕೆ ಕೈಹಾಕಿದ್ದೇವೆ’ ಎಂದು ಅವರು ಹೇಳಿದರು.
‘ಸತತ ಬರಗಾಲದಿಂದ ಕಂಗೆಟ್ಟಿರುವ ಈ ಭಾಗದ ಜನ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆಸಿರುವ ಅಡಿಕೆ, ತೆಂಗು, ಮಾವಿನ ತೋಟಗಳನ್ನು ಉಳಿಸಿಕೊಳ್ಳಲು ಮಾಡದ ಪ್ರಯತ್ನಗಳಿಲ್ಲ. ಕೊರೆಸಿರುವ ಕೊಳವೆ ಬಾವಿಗಳಿಗೆ ಲೆಕ್ಕವಿಲ್ಲ. ಮಳೆಗಾಗಿ ದೇವರು, ದೇವಸ್ಥಾನದಲ್ಲಿ ವಿಶೇಷ ಪೂಜೆಗಳು, ಪುರಾಣ– ಪಾರಾಯಣ ಎಲ್ಲವೂ ಮಾಡಿದ್ದಾಯಿತು. ಅಂತಿಮವಾಗಿ ನಮ್ಮ ಉಳಿವಿಗಾಗಿ ಸಾಂಪ್ರದಾಯಿಕ ವಿಜ್ಞಾನದ ಮೊರೆ ಹೋಗಿದ್ದೇವೆ’ ಎಂದು ಚಂದ್ರಗಿರಿ ತಿಳಿಸಿದ್ದಾರೆ.