ಚನ್ನಮ್ಮನ ಕಿತ್ತೂರಿನ ಗಡಾದ ಮರಡಿ ನಿರ್ಲಕ್ಷ್ಯ ಬೇಡ: ಮರಡಿ ಮರುನಿರ್ಮಾಣಕ್ಕೆ ಆಗ್ರಹ

ಚನ್ನಮ್ಮನ ಕಿತ್ತೂರಿನ ಗಡಾದ ಮರಡಿ ನಿರ್ಲಕ್ಷ್ಯ ಬೇಡ: ಮರಡಿ ಮರುನಿರ್ಮಾಣಕ್ಕೆ ಆಗ್ರಹ

ಚನ್ನಮ್ಮನ ಕಿತ್ತೂರಿನ ಗಡಾದ ಮರಡಿ ನಿರ್ಲಕ್ಷ್ಯ ಬೇಡ: ಮರಡಿ ಮರುನಿರ್ಮಾಣಕ್ಕೆ ಆಗ್ರಹ

ಚನ್ನಮ್ಮನ ಕಿತ್ತೂರು: ಕಿತ್ತೂರು ಸಂಸ್ಥಾನ ಕಾಲದ ರೋಚಕ ಇತಿಹಾಸ ಹಾಗೂ ಸಂಸ್ಥಾನ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಇಲ್ಲಿನ ಐತಿಹಾಸಿಕ ಗಡಾದ ಮರಡಿ ಆವರಣದಲ್ಲಿಯ ವೀಕ್ಷಣಾ ಗೋಪುರವು ತನ್ನ ರಕ್ಷಣೆಗೆ ಇಂದು ಮೊರೆ ಇಡುವ ಸ್ಥಿತಿ ನಿರ್ಮಾಣವಾಗಿದೆ.

ಮರಡಿ ನವೀಕರಣದ ಸಂದರ್ಭದಲ್ಲಾದ ದೋಷದ ಕಾಮಗಾರಿಯಿಂದಾಗಿ, ಗೋಪುರದ ಒಂದು ಬದಿ ಕುಸಿದು ಬಿದ್ದಿದೆ. ಇದರಿಂದ ಮರಡಿ ಸೌಂದರ್ಯ ಮಸುಕಾಗಿದೆ. ಸ್ಮಾರಕ ಪಟ್ಟಿಯಲ್ಲಿನ ಮಹತ್ವದ ತಾಣವಾಗಿದ್ದರೂ ಗೋಪುರ ಸರಿಪಡಿಸುವಲ್ಲಿ ವಿಳಂಬವೇಕೇ ಎಂಬ ಅಸಮಾಧಾನದ ಮಾತುಗಳು ಇತಿಹಾಸಪ್ರಿಯರಿಂದ ಕೇಳಿ ಬರುತ್ತಿವೆ.

ಎರಡು ಶತಮಾನಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಿತ್ತೂರು ಸಂಸ್ಥಾನದ ಗತ ಇತಿಹಾಸಕ್ಕೆ ಮೂಕಸಾಕ್ಷಿಯಾಗಿ ನಿಂತಿದ್ದ ಗೋಪುರದ ಭಾಗವು ಅವೈ ಜ್ಞಾನಿಕ ಕಾಮಗಾರಿಯಿಂದಾಗಿ ಕುಸಿದು ಬಿದ್ದು ಭರ್ತಿ ಎರಡು ವರ್ಷ ತುಂಬಿವೆ.

ಕಳಚಿ ಬಿದ್ದ ಕಲ್ಲುಗಳು ಅಂದಿನ ಶೌರ್ಯದ ಕತೆ ಹೇಳುತ್ತ ಅನಾಥವಾಗಿ ಬಿದ್ದಿವೆ. ಮತ್ತೆ ಕಳಚದಂತೆ ಅದಕ್ಕೆ ಚೀಲಗಳಲ್ಲಿ ಎಂ ಸ್ಯಾಂಡ್ ತುಂಬಿ ಆಸರೆ ಒದಗಿಸಲಾಗಿದೆ. ಐತಿಹಾಸಿಕ ಕುರುಹುಗಳ ರಕ್ಷಣೆಗೆಂದೇ ಸೃಷ್ಟಿ ಯಾಗಿರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವೂ ಗೋಪುರ ಮರು ನಿರ್ಮಾಣದ ವಿಷಯದಲ್ಲಿ ಮೌನವಾಗಿ ರುವ ಬಗ್ಗೆ ಜನರಲ್ಲಿ ಅಸಮಾಧಾನ ಮೂಡಿದೆ.

₹1.80 ಕೋಟಿ ವೆಚ್ಚದ ಯೋಜನೆ: ಇತಿಹಾಸ ಪ್ರಸಿದ್ಧ ಗಡಾದ ಮರಡಿಯ ಅಭಿವೃದ್ಧಿ, ಸುತ್ತಲಿನ ಪರಿಸರದ ಸೌಂದರ್ಯೀಕರಣ, ಅಲ್ಲಿಗೆ ತೆರಳಲು ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ, ಮೇಲೆ ಹೋದ ವಾಯುವಿಹಾರಿಗಳಿಗೆ ಕುಳಿತುಕೊಳ್ಳಲು ಕಲ್ಲು ಬೆಂಚು ಸೌಲಭ್ಯ, ತಿನಿಸು ಕಟ್ಟೆ, 80 ಅಡಿ ಎತ್ತರದ ಕಂಬದ ಮೇಲೆ ರಾಷ್ಟ್ರೀಯ ಹಬ್ಬಗಳಂದು ಧ್ವಜಾರೋಹಣಕ್ಕೆ ವ್ಯವಸ್ಥೆ ಮಾಡುವುದು ಸೇರಿ ‘ಪಿಕ್ನಿಕ್ ಸ್ಪಾಟ್’ ಆಗಿ ಇದನ್ನು ನಿರ್ಮಿಸುವ ಉದ್ದೇಶದೊಂದಿಗೆ ಹಲವು ಕಾಮಗಾರಿ ಕೈಗೊಳ್ಳಲು ₹1.80 ಕೋಟಿ ಅನುದಾನವನ್ನು ಹಿಂದಿನ ಬಿಜೆಪಿ ಸರ್ಕಾರದಿಂದ ಬಿಡುಗಡೆ ಮಾಡಿಸುವಲ್ಲಿ ಆಗಿನ ಶಾಸಕ ಮಹಾಂತೇಶ ದೊಡ್ಡ ಗೌಡರ ಸಫಲವಾಗಿದ್ದರು.

ಕೆಲಸವೂ ವೇಗ ಪಡೆದು ಕೊಂಡಿತ್ತು. ಬೃಹತ್ ರಾಷ್ಟ್ರಧ್ವಜ ಆರೋಹಣಕ್ಕೂ ದೊಡ್ಡ ಸ್ತಂಭ ನಿರ್ಮಾಣವೂ ಆಗಿ 2023ರ ಜ.26ರಂದು ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ವಿಶಾಲ ಧ್ವಜಸ್ತಂಭ, ಅಧಿಕ ಗಾತ್ರದ ಧ್ವಜ, ತಲೆಯೆತ್ತಿ ನೋಡಿದರೆ ಮೋಡಗಳ ಮೆರವಣಿಗೆ, ಪ್ರಥಮ ಬಾರಿ ಈ ಕಾರ್ಯಕ್ರಮವನ್ನು ವೀಕ್ಷಿಸಿದ ಜನರಲ್ಲಿ ಪುಳಕವನ್ನುಂಟು ಮಾಡಿತ್ತು ಎಂದು ಅನೇಕರು ನೆನಪಿಸುತ್ತಾರೆ.

ಆದರೆ, ಈ ಪುಳಕ, ಸಂತಸ, ಹೆಮ್ಮೆ ಬಹಳ ಕಾಲ ಜನರ ಮನಸಿನಲ್ಲಿ ಉಳಿಯಲಿಲ್ಲ. 2024ರ ಆ. 1ರಂದು ಗೋಪುರದ ಅರ್ಧ ಭಾಗ ಕುಸಿದು ಬಿತ್ತು. ಮಳೆಯ ನೀರು ಗೋಪುರದ ಮೇಲ್ಭಾಗದಲ್ಲಿ ಇಳಿದಿದ್ದೆ ಇದಕ್ಕೆ ಕಾರಣ ಎಂದು ವಿಶ್ಲೇಷಣೆಗಳು ಸಾಗಿದವು. ಗೋಪುರದ ಮೇಲಿದ್ದ 80 ಅಡಿ ಧ್ವಜ ಸ್ತಂಭವನ್ನೂ ಕೆಳಗೆ ಇಳಿಸಲಾಯಿತು. ಈಗ ಅದರ ಪಕ್ಕಕ್ಕಿರುವ ಮೊದಲಿದ್ದ ಸ್ತಂಭದ ಮೇಲೆ ಜ. 26 ಹಾಗೂ ಆ. 15ರಂದು ಧ್ವಜಾರೋಹಣ ನೆರವೇರಿಸುತ್ತ ಬರಲಾಗುತ್ತಿದೆ.

ಅಪೂರ್ಣ ಕಾಮಗಾರಿ: ₹1.80 ಕೋಟಿ ಅನುದಾನದಲ್ಲಿ ₹90 ಲಕ್ಷ ವೆಚ್ಚದ ಕಾಮಗಾರಿ ನೆರವೇರಿಸಲಾಗಿದೆ. ಸಿಮೆಂಟ್ ಕಾಂಕ್ರೀಟ್ ರಸ್ತೆ, ಎರಡೂ ಬದಿಗೆ ಬೀದಿದೀಪದ ಕಂಬ ಅಳವಡಿಕೆ, ತಿನಿಸು ಕಟ್ಟೆ ಸೇರಿ ಹಲವು ಕಾಮಗಾರಿ ಆಗಿವೆ. ಸರ್ಕಾರ ಬದಲಾದ ನಂತರ ಸ್ಥಗಿತಗೊಂಡ ಕಾಮಗಾರಿ ಆರಂಭ ವಾಗುತ್ತಿಲ್ಲ.

ಈಗಾಗಲೇ ಮಾಡಲಾಗಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ತಿನಿಸು ಕಟ್ಟೆಯ ಅಂಗಡಿ ಬಾಗಿಲುಗಳನ್ನು ಕಿಡಿಗೇಡಿಗಳು ಮುರಿದಿದ್ದಾರೆ. ಒಳಗೆ ಅಕ್ರಮ ಚಟುವಟಿಕೆಗಳು ಕತ್ತಲಾದ ನಂತರ ನಡೆಯುತ್ತವೆ ಎಂದು ಸಾರ್ವಜನಿಕರು ದೂರುತ್ತಾರೆ.

ಅಪೂರ್ಣಗೊಂಡಿರುವ ಕಾಮಗಾರಿ ಜತೆಗೆ ಬಿದ್ದಿರುವ ಗೋಪುರದ ಕಾಮಗಾರಿಯೂ ನಡೆದು ಮೊದಲಿನ ಸೌಂದರ್ಯವು ಮರುಕಳಿಸಬೇಕಿದೆ. ಉದ್ದೇಶದಂತೆ ಅದೊಂದು ‘ಪಿಕ್ನಿಕ್ ಸ್ಪಾಟ್’ ಆಗಿ ರೂಪಾಂತರಗೊಳ್ಳಬೇಕಿದೆ. ರಾಷ್ಟ್ರೀಯ ಹಬ್ಬಗಳಂದು 80 ಅಡಿ ಎತ್ತರದ ಮೇಲೆ ಬೃಹತ್ ಗಾತ್ರದ ಧ್ವಜವು ಪಟ, ಪಟಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

‘ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’ ಎಂದು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ ಹೇಳಿದ್ದಾರೆ. ಶತಾಯ– ಗತಾಯ ಭಾರತೀಯರಲ್ಲಿ ಇತಿಹಾಸ ಪ್ರಜ್ಞೆ ಅತ್ಯಂತ ಕಡಿಮೆ ಇರುವುದನ್ನು ನೋಡಿಯೇ ಅವರು ಈ ಮಾತು ಹೇಳಿದ್ದಾಗಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ನಾವು ಇತಿಹಾಸ ಮರೆತರೆ ಇತಿಹಾಸಕ್ಕೆ ಏನೂ ನಷ್ಟವಿಲ್ಲ. ಆದರೆ, ಇತಿಹಾಸದಲ್ಲಿ ನಾವೇ ಮರೆತುಹೋಗುತ್ತೇವೆ. ಇದು ತುಂಬಲಾರದ ನಷ್ಟ ಎಂಬುದು ಅವರ ಮಾತಿನ ಅರ್ಥ.

ಅದರಲ್ಲೂ ಕಿತ್ತೂರು ಕರ್ನಾಟಕ ಭಾಗದವರಲ್ಲಿ ಇತಿಹಾಸ ಪ್ರಜ್ಞೆ ಇನ್ನೂ ಒಡಮೂಡಬೇಕಿದೆ. ಶೌರ್ಯ, ಸಾಹಸ, ಬಲಿದಾನಕ್ಕೆ ಹೆಸರಾಗಿದ್ದ ಈ ನೆಲವನ್ನು ಅದೇ ರೀತಿಯಲ್ಲಿ ‘ಪೋಕಸ್‌’ ಮಾಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಇದೇ ಕಾರಣಕ್ಕೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಿಗೆ ಸಿಕ್ಕಷ್ಟು ‍ಪ್ರಾಧಾನ್ಯ ರಾಣಿ ಚನ್ನಮ್ಮನಿಗೆ ಸಿಗಲಿಲ್ಲ.

ಮಾತ್ರವಲ್ಲ; ಭಗತಸಿಂಗ್‌, ಸುಖದೇವ್‌ ಹಾಗೂ ರಾಜಗುರು ಎಂಬ ಮೂವರು ಸ್ವಾತಂತ್ರ್ಯ ಯೋಧರನ್ನು ಗಲ್ಲಿಗೇರಿಸಿದ್ದು ವಿಶ್ವದೆಲ್ಲೆಡೆ ವೀರೋಚಿತ ಕಥನವಾಯಿತು. ಅದೇ ರೀತಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಇತರ ಆರು ಜನರನ್ನು (ಒಟ್ಟು ಏಳು) ಗಲ್ಲಿಗೇರಿಸಿದ ವಿಷಯ ಅಷ್ಟಾಗಿ ಪ್ರಚಾರವಾಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಕಿತ್ತೂರು ಉತ್ಸವ ಆರಂಭವಾದ ಮೇಲೆ ಇಂಥ ರಕ್ತಸಿಕ್ತ, ಬಲಿದಾನಗಳ ಸಂಗತಿಗಳು ದೇಶದ ಬೇರೆಬೇರೆ ಭಾಗಕ್ಕೆ ಪ್ರಚಾರವಾಗಿವೆ. ದುರಂತವೆಂದರೆ ರಾಯಣ್ಣನೊಂದಿಗೆ ಗಲ್ಲಿಗೇರಿದ ಇತರ ಆರು ವೀರರು ಯಾರು ಎಂದು ಹುಡುಕಲು ಶತಮಾನಗಳೇ ಗತಿಸಿದವು. ಅವರ ಸಂಬಂಧಿಕರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಅದನ್ನು ಅರಿಯುವ ಗೋಜಿಗೂ ಸ್ಥಳೀಯ ಜನಪ್ರತಿನಿಧಿಗಳೂ ಪ್ರಯತ್ನಪಟ್ಟಿಲ್ಲವೇನೋ. ಇಂತಹ ಇತಿಹಾಸವನ್ನು ಮರೆಮಾಚುವ ಕೃತ್ಯವೇ ಆಗಿದೆ.

ಸದ್ಯ ತುಣುಕು– ತುಣುಕಾಗಿ ಉಳಿದ ಕಿತ್ತೂರು ಕೋಟೆಯ ಅವಶೇಷಗಳನ್ನಾದರೂ ಉಳಿಸಿಕೊಳ್ಳಬೇಕಿದೆ. ಅದರಲ್ಲಿ ಮುಖ್ಯವಾದ ಗಡಾದ ಮರಡಿಗೆ ಈಗ ಧಕ್ಕೆ ಒದಗಿಬಂದಿದೆ. ಅದನ್ನು ಕಾಪಾಡಿದರೆ ಮಾತ್ರ ಮುಂದಿನ ‍ಪೀಳಿಗೆ ಇಂದಿನ ಜನಪ್ರತಿನಿಧಿಗಳನ್ನು ನೆನೆಸಲಿದೆ ಎಂಬುದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ.

ಗಡಾದ ಮರಡಿ... ಹಾಗೆಂದರೇನು?

ಗಡಾದ ಎಂಬ ಪದ ರೂಢಿಯಲ್ಲಿ ಬಂದಿದ್ದು ಗಢ (ಹಿಂದಿಯಲ್ಲಿ ಘಡ) ಎಂಬ ಪದದಿಂದ. ಮರಾಠಿ ಭಾಷಾ ಪ್ರಭಾವಳಿಯಲ್ಲಿ ಖಿಲ್ಲಾ ಮತ್ತು ಗಢ ಪದಗಳು ಬಳಕೆಯಲ್ಲಿವೆ.

ಗಢ ಎಂದು ಕೋಟೆ ಎಂದರ್ಥ. ಮರಡಿ ಎಂದರೆ ಮಡ್ಡಿ ಅಥವಾ ಎತ್ತರದ ದಿಬ್ಬ ಎಂಬ ಅರ್ಥವಿದೆ. ಹೀಗಾಗಿ, ಗಢದ ‘ಬಾರ್ಡರ್‌’ ಅನ್ನು ಗಡಾದ ಮರಡಿ ಎಂದು ಬಳಸಿಕೊಂಡು ಬರಲಾಗಿದೆ ಎನ್ನುತ್ತಾರೆ ಇತಿಹಾಸ ತಜ್ಞರು. ಇಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಧ್ವಜಾರೋಹಣ ನೋಡುವುದೇ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತಿತ್ತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ