‘ಕೌನ್ ಬನೇಗಾ ಕರೋಡ್ ಪತಿ’ಯಿಂದ ಹೊರ ನಡೆಯಲಿದ್ದಾರಾ ಅಮಿತಾಭ್ ಬಚ್ಚನ್?
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಅಭಿನಯನದಲ್ಲಿ ಮಾತ್ರವಲ್ಲದೆ ನಿರೂಪಣೆಯಲ್ಲಿಯೂ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚೆಗೆ ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ ಪತಿ’ (ಕೆಬಿಸಿ)ಯಿಂದ ಅಮಿತಾಭ್ ಅವರು ನಿವೃತ್ತಿ ಪಡೆಯಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದವು.
ಇದೀಗ ಈ ಎಲ್ಲಾ ವಂದತಿಗಳ ಕುರಿತು ಅಮಿತಾಭ್ ಬಚ್ಚನ್ ಅವರು ಮೌನ ಮುರಿದಿದ್ದಾರೆ. ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ‘ಬ್ಲಾಗ್‌ನಲ್ಲಿ ನಿವೃತ್ತಿ ಹೊಂದುವ ಸಮಯ ತಡವಾಯಿತು ಎಂದು ಬರೆದಿದ್ದೆ. ಅದರ ಅರ್ಥ ನಿದ್ದೆಗೆ ಜಾರುವುದು ತಡವಾಯಿತು ಎಂಬುದಾಗಿತ್ತು’ ಎಂದಿದ್ದಾರೆ.
‘‘ನಿವೃತ್ತಿ’ ಪದವನ್ನು ದಿನ ಸೂಚಕವಾಗಿ ಬಳಸಿದ್ದೇನೆ. ನಟನೆ ಅಥವಾ ನಿರೂಪಣೆಯಿಂದ ನಿವೃತ್ತಿ ಪಡೆದುಕೊಳ್ಳುವುದರ ಬಗ್ಗೆ ಅಲ್ಲ. ಪ್ರಸ್ತುತ ನಿವೃತ್ತಿ ಪಡೆದುಕೊಳ್ಳುವ ಯಾವುದೇ ಯೋಜನೆ ಇಲ್ಲ. ಇಂಗ್ಲಿಷ್‌ನಲ್ಲಿ ‘ರಿಟೈರ್’ ಎಂದರೆ ‘ಮಲಗಲು ಹೋಗುವುದು’ (Going to sleep) ಎಂದೂ ಅರ್ಥವಿದೆ’ ಎಂದು ಹೇಳಿದ್ದಾರೆ.
‘ಕೌನ್ ಬನೇಗಾ ಕರೋಡ್ ಪತಿ’ ರಿಯಾಲಿಟಿ ಶೋ ಆರಂಭವಾದಾಗಿನಿಂದ ಪ್ರಸ್ತುತ ನಡೆಯುತ್ತಿರುವ ಆವೃತಿಯವರೆಗೂ ಅಮಿತಾಭ್ ಬಚ್ಚನ್ ಅವರೇ ನಿರೂಪಣೆ ಮಾಡಿದ್ದಾರೆ. ಒಂದು ಸೀಸನ್‌ನಲ್ಲಿ ಮಾತ್ರ ಶಾರುಖ್ ಖಾನ್ ಅವರು ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು.