
ಚಿಂತಾಮಣಿ ಬಳಿ ಕ್ಯಾಂಟರ್-ಟೆಂಪೊ ಡಿಕ್ಕಿ; ಟೊಮೆಟೊ ಚೆಲ್ಲಾಪಿಲ್ಲಿ
ಚಿಂತಾಮಣಿ: ಚಿಂತಾಮಣಿ–ಚೇಲೂರು ರಸ್ತೆಯ ಕನಿಶೆಟ್ಟಿಹಳ್ಳಿ ಗೇಟ್ ಬಳಿ ಬುಧವಾರ ಬೆಳಗಿನ ಜಾವ ಕ್ಯಾಂಟರ್ ಮತ್ತು ಟೆಂಪೊ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಟೆಂಪೊ ಚಾಲಕ ಗಾಯಗೊಂಡಿದ್ದು, ಕ್ಯಾಂಟರ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ನೆರೆಯ ಆಂಧ್ರಪ್ರದೇಶದ ಕಂದಕೂರು ಸಮೀಪದ ಗೊಲ್ಲಪಲ್ಲಿ ಗ್ರಾಮದಿಂದ ಟೊಮೆಟೊ ತುಂಬಿಕೊಂಡಿದ್ದ ಕ್ಯಾಂಟರ್ ಚಿಂತಾಮಣಿಯ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿತ್ತು. ಚಿಂತಾಮಣಿಯಿಂದ ಚೇಳೂರು ಕಡೆಗೆ ತೆರಳುತ್ತಿದ್ದ ಟೆಂಪೊ ಕನಿಶೆಟ್ಟಿಹಳ್ಳಿ ಗೇಟ್ ಬಳಿ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿ ರಭಸಕ್ಕೆ ಕ್ಯಾಂಟರ್ ರಸ್ತೆ ಬದಿಗೆ ಮುಗುಚಿಬಿದ್ದಿದ್ದು, ಟೊಮೆಟೊ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಕ್ಯಾಂಟರ್ ಮಾಲೀಕ ಹಾಗೂ ಚಾಲಕ ಲಕ್ಷ್ಮಿನಾರಾಯಣ್ ಅಪಾಯದಿಂದ ಪಾರಾಗಿದ್ದಾರೆ. ಟೆಂಪೊ ಸಹ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಕರಿಯಪಲ್ಲಿಯ ನಿವಾಸಿ ಶಾರುಕ್ ಕಾಲು ಮುರಿದಿದೆ. ಶಾರುಕ್‌ನನ್ನು ಸ್ಥಳೀಯರು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು.