
ಚಿಕ್ಕಬಳ್ಳಾಪುರ| ಗೃಹಲಕ್ಷ್ಮಿ ಹಣ ಸಾಲಕ್ಕೆ ಜಮೆ ಸಲ್ಲದು: ಜಿಲ್ಲಾ ಪಂಚಾಯಿತಿ CEO
ಚಿಕ್ಕಬಳ್ಳಾಪುರ: ಬರದ ಪರಿಸ್ಥಿತಿಯಲ್ಲಿ ರೈತರು ಹಾಗೂ ವಿವಿಧ ವರ್ಗದ ಜನರಿಗೆ ಅಗತ್ಯವಿರುವ ಸಾಲ ಸೌಲಭ್ಯಗಳು ಸಕಾಲದಲ್ಲಿ ದೊರೆಯುವಂತೆ ಬ್ಯಾಂಕ್‌ಗಳು ಮತ್ತು ಸಂಬಂಧಿಸಿದ ಇಲಾಖೆಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ. ನವೀನ್ ಭಟ್ ಸೂಚಿಸಿದರು.
ಇಲ್ಲಿನ ಜಿ.ಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ (ಡಿಎಲ್‌ಆರ್‌ಸಿ) ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಜಮೆ ಆಗುವ ಹಣವನ್ನು ಯಾವುದೇ ಕಾರಣಕ್ಕೂ ಸಾಲದ ಕಂತು ಅಥವಾ ಸಾಲದ ಬಡ್ಡಿಗೆ ಜಮೆ ಮಾಡಬಾರದು. ಸರ್ಕಾರದ ಉದ್ದೇಶದಂತೆ ಈ ಹಣವು ಫಲಾನುಭವಿಗಳ ಕುಟುಂಬದ ಅಗತ್ಯಗಳಿಗೆ ಬಳಕೆ ಆಗುವಂತೆ ಬ್ಯಾಂಕ್ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಕಲ್ಪಿಸುವಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಪ್ರಮುಖ ಪಾತ್ರ ವಹಿಸುತ್ತಿದೆ. ಅರ್ಹ ರೈತರಿಗೆ ಇದರ ಸೌಲಭ್ಯ ತಲುಪುವಂತೆ ವಿಶೇಷ ಅಭಿಯಾನ ಕೈಗೊಳ್ಳಬೇಕು. ಕೃಷಿ ಮಾತ್ರವಲ್ಲದೆ ತೋಟಗಾರಿಕೆ, ರೇಷ್ಮೆ ಮತ್ತು ಹಾಲು ಉತ್ಪಾದನೆಯಲ್ಲಿ ತೊಡಗಿರುವ ರೈತರಿಗೂ ಕೆಸಿಸಿ ಸಾಲ ದೊರೆಯಬೇಕು. ಈ ದಿಕ್ಕಿನಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್‌ಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು ಎಲ್ಲ ರೈತರು ಹಾಗೂ 87 ಸಾವಿರ ಜಾನುವಾರು ಪಾಲಕ ರೈತರಿಗೆ ಕೆಸಿಸಿ ಸೇರಿದಂತೆ ಲಭ್ಯವಿರುವ ಸಾಲ ಸೌಲಭ್ಯಗಳ ಕುರಿತು ಎಸ್‌ಎಂಎಸ್, ಜಾಗೃತಿ ಕಾರ್ಯಕ್ರಮಗಳು ಹಾಗೂ ಇತರ ಪರಿಣಾಮಕಾರಿ ಮಾಧ್ಯಮಗಳ ಮೂಲಕ ಮಾಹಿತಿ ತಲುಪಿಸಬೇಕು. ಅರ್ಹ ಫಲಾನುಭವಿಗಳು ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಇಲಾಖೆಗಳು ಮಾರ್ಗದರ್ಶನ ನೀಡಬೇಕು ಎಂದರು.
ಕೆಸಿಸಿಯು ಕೃಷಿ ಅಗತ್ಯಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಸಹಕಾರಿ. ಸಕಾಲದಲ್ಲಿ ಸಾಲ ದೊರೆಯುವುದರಿಂದ ರೈತರು ಖಾಸಗಿ ಸಾಲದಾತರ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು. ಬೆಳೆ ಉತ್ಪಾದನೆ ಹೆಚ್ಚಿಸಲು, ಕೃಷಿ ವೆಚ್ಚ ನಿರ್ವಹಿಸಲು ಹಾಗೂ ರೈತರ ಆರ್ಥಿಕ ಸ್ಥಿರತೆ ಮತ್ತು ಸ್ವಾವಲಂಬನೆ ಹೆಚ್ಚಿಸಲು ಕೆಸಿಸಿ ಸಹಕಾರಿ. ಆದ್ದರಿಂದ ಜಿಲ್ಲೆಯ ಎಲ್ಲ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಆಗಿ ಸೌಲಭ್ಯ ಪಡೆಯಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಹಾಗೂ ಎಪಿವೈ ಯೋಜನೆಗಳಲ್ಲಿಯೂ ನಿಗದಿತ ಗುರಿ ಸಾಧಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳ ಪ್ರಯೋಜನ ದೊರೆಯುವಂತೆ ಕ್ರಮ ವಹಿಸಬೇಕು. ಸರ್ಕಾರದ ವಿವಿಧ ಪ್ರಾಯೋಜಿತ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ ಬ್ಯಾಂಕ್‌ಗಳು ಮತ್ತು ಇಲಾಖೆಗಳ ನಡುವೆ ಉತ್ತಮ ಸಮನ್ವಯದಿಂದ ಜಿಲ್ಲೆಯ ಸಾಲ ವಿತರಣೆ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಗಳ ಅನುಷ್ಠಾನ, ಜಿಲ್ಲಾ ಸಾಲ ಯೋಜನೆಯ ಪ್ರಗತಿ, ಸರ್ಕಾರದ ಪ್ರಾಯೋಜಿತ ಯೋಜನೆಗಳಡಿ ನೀಡಿರುವ ಸಾಲಗಳ ವಸೂಲಿ, ಅನುತ್ಪಾದಕ ಸಾಲಗಳ ಸ್ಥಿತಿ, ಪ್ರಧಾನಮಂತ್ರಿ ಮುದ್ರಾ ಯೋಜನೆ, ಪ್ರಧಾನಮಂತ್ರಿ ಸ್ವನಿಧಿ ಯೋಜನೆ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಪ್ರಧಾನಮಂತ್ರಿ ಜನಧನ್ ಯೋಜನೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಸಭೆಯಲ್ಲಿ ಆರ್.ಬಿ.ಐ ಅಧಿಕಾರಿಗಳು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ನಬಾರ್ಡ್ ಅಧಿಕಾರಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ಸಮನ್ವಯದಿಂದ ಕಾರ್ಯನಿರ್ವಹಿಸಿ’
ಬರ ಪರಿಸ್ಥಿತಿಯಲ್ಲಿ ರೈತರು ಹಾಗೂ ಗ್ರಾಮೀಣ ಜನರಿಗೆ ಆರ್ಥಿಕ ನೆರವು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಜನರಿಗೆ ನೇರವಾಗಿ ನೆರವಾಗಬೇಕು ಎಂದು ಡಾ.ವೈ.ನವೀನ್ ಭಟ್ ಸಲಹೆ ನೀಡಿದರು.