
ವಿದೇಶಿ ಹೂಡಿಕೆ ಆಕರ್ಷಣೆಗೆ ಪ್ರತ್ಯೇಕ ಇಲಾಖೆ: ಸಚಿವ ಸಂಪುಟ ನಿರ್ಣಯ
ಬೆಂಗಳೂರು: ವಿದೇಶಿ ಬಂಡವಾಳ ಆಕರ್ಷಿಸುವತ್ತ ಪ್ರಮುಖ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ಇದಕ್ಕಾಗಿಯೇ ವಿಶೇಷ ಇಲಾಖೆ ಆರಂಭಿಸಲು ಮುಂದಾಗಿದೆ.
ಈ ಉದ್ದೇಶಕ್ಕಾಗಿ, ‘ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರ’ಗಳ ಇಲಾಖೆ ಸ್ಥಾಪಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ. ಸಂಪುಟ ಸಭೆ ಬಳಿಕ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಈ ವಿಷಯ ತಿಳಿಸಿದರು.
‘ಉದ್ದೇಶಿತ ಹೊಸ ಇಲಾಖೆಯ ಹೆಸರಿನ ‘ವಿದೇಶಾಂಗ’ ಪದ ಬದಲಾಗಬಹುದು. ‘ಸಾಗರೋತ್ತರ’ ವ್ಯವಹಾರಗಳ ಇಲಾಖೆ ಎಂದು ಬದಲಾಯಿಸಬಹುದು ಎಂಬ ಸಲಹೆ ಸಭೆಯಲ್ಲಿ ಬಂದಿದೆ’ ಎಂದು ಅವರು ತಿಳಿಸಿದರು.
‘ಹೊಸ ಇಲಾಖೆಯು ಅನಿವಾಸಿ ಭಾರತೀಯರ (ಎನ್ಆರ್‌ಐ) ವ್ಯವಹಾರ, ಕಲ್ಯಾಣಕ್ಕೆ ಏಕಗವಾಕ್ಷಿ ವ್ಯವಸ್ಥೆ, ಎನ್ಆರ್‌ಐ ಕಾರ್ಡು ವಿತರಣೆ ಮಾಡಲಿದೆ. ವಿದೇಶದಲ್ಲಿ ಉದ್ಯೋಗಾವಕಾಶಗಳಿಗೆ ನೆರವು, ವಿದೇಶಿ ನಿಯೋಗಗಳಿಗೆ ಸತ್ಕಾರ ಮಾಡುವುದು, ಪಾಲುದಾರಿಕೆ, ಸಹಯೋಗ, ಹೂಡಿಕೆಯ ನಿರೀಕ್ಷೆ ಇಟ್ಟುಕೊಂಡು ಬರುವ ವಿದೇಶಿಗರಿಗೆ ಮುಖ್ಯಮಂತ್ರಿ ಜೊತೆ ಭೇಟಿ ಮಾಡಿಸಿ, ಅವರ ಪ್ರಸ್ತಾವಗಳನ್ನು ಸ್ವೀಕರಿಸಿ ಆಡಳಿತ ಇಲಾಖೆಗಳಿಗೆ ಕಳುಹಿಸಿಕೊಡುವ ಕೆಲಸ ಮಾಡಲಿದೆ’ ಎಂದು ವಿವರಿಸಿದರು.
‘ಹೂಡಿಕೆದಾರರನ್ನು ಕೇಳುವವರಿಲ್ಲ. ಹೀಗಾಗಿ, ಬೇರೆ ರಾಜ್ಯಗಳ ಕಡೆ ಹೋಗಿ ಹೂಡಿಕೆ ಮಾಡುತ್ತಾರೆ ಎಂಬ ಆರೋಪಗಳಿಗೆ ಉತ್ತರವಾಗಿ ಈ ಇಲಾಖೆ ಕೆಲಸ ಮಾಡಲಿದೆ. ವಿದೇಶಿ ಹೂಡಿಕೆದಾರರು ಕಾಯುವುದನ್ನು ತಪ್ಪಿಸಬೇಕೆಂಬ ಪ್ರಮುಖ ಉದ್ದೇಶದಿಂದ ಈ ಇಲಾಖೆ ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದರು.
‘ಜಾಗತಿಕ ಸಂಶೋಧನೆ, ಅಭಿವೃದ್ಧಿ, ಜಾಗತಿಕ ಸಾಂಸ್ಕೃತಿಕ ವಿನಿಮಯ, ಜಾಗತಿಕ ಕ್ರೀಡಾ ರಾಜತಾಂತ್ರಿಕತೆ ಮತ್ತು ಸಹಯೋಗ, ಜಾಗತಿಕ ಆರೋಗ್ಯ, ವೈದ್ಯಕೀಯ ಹಾಗೂ ಪ್ರವಾಸೋದ್ಯಮ ಕುರಿತಂತೆ ‘ರಾಜ್ಯ ಫೆಲಿಸಿಟೇಶನ್ ಕೌನ್ಸಿಲ್’ ಕೂಡಾ ರಚಿಸಲಾಗುವುದು. ಈ ಕೌನ್ಸಿಲ್‌ಗೆ ಮುಖ್ಯಮಂತ್ರಿ ಅಧ್ಯಕ್ಷ, ಉಪಮುಖ್ಯಮಂತ್ರಿ ಉಪಾಧ್ಯಕ್ಷ, ಉಳಿದಂತೆ ವಾಣಿಜ್ಯ ಮತ್ತು ಕೈಗಾರಿಕೆ, ಕೃಷಿ, ತೋಟಗಾರಿಕೆ, ಐ.ಟಿ– ಬಿ.ಟಿ, ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ, ಉನ್ನತ ಶಿಕ್ಷಣ, ಇಂಧನ, ಆರೋಗ್ಯ ಮತ್ತು ಕ್ರೀಡೆ ಹಾಗೂ ಯುವಜನ ಖಾತೆ ಸಚಿವರು ಸದಸ್ಯರಾಗಿರುತ್ತಾರೆ’ ಎಂದರು.