
ಚಿತ್ರರಂಗದಿಂದ ನ್ಯಾಯಾಂಗದವರೆಗೆ: ರಮೇಶ್ ಜತೆ ನಟಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ
ಬೆಂಗಳೂರು: ಒಂದು ದಿನದ ಕಲಾಪದ ಅವಧಿಯಲ್ಲಿ ಒಟ್ಟು 534 ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳ ವಿಚಾರಣೆ ಪೂರೈಸುವ ಮೂಲಕ ನ್ಯಾಯಮೂರ್ತಿ ಎಂ .ನಾಗಪ್ರಸನ್ನ ಅವರು ಹೈಕೋರ್ಟ್ ಕಲಾಪಗಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
ಈ ಅಪರೂಪದ ಸಾಧನೆ ಮಾಡುತ್ತಿದ್ದಂತೆ, ಅವರ ಹಳೆಯ ದಿನಗಳು ಮತ್ತು ಸಾಧನೆಯ ವಿಚಾರ ಮುನ್ನಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ನಾಗಪ್ರಸನ್ನ ಅವರು ತಮ್ಮದೇ ಆದ ವಿಶಿಷ್ಟ ಕಾರ್ಯಶೈಲಿಗೆ ಹೆಸರಾದವರು. ಇವರ ವೃತ್ತಿಜೀವನದ ಇನ್ನೊಂದು ಕುತೂಹಲಕಾರಿ ಸಂಗತಿಯೂ ಇದೆ. ಅದುವೇ ನಟನಾ ಪ್ರವೃತ್ತಿ.
1990ರ ದಶಕದ ಕೊನೆಯಲ್ಲಿ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದಾಗ, ನಾಗಪ್ರಸನ್ನ ಅವರು ಕೆಲವು ಕನ್ನಡ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿದ್ದರು. ಬಳಿಕ ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ಹಾಗೂ ರಮೇಶ್ ಅರವಿಂದ್ ಅಭಿನಯದ ರಾಷ್ಟ್ರಪ್ರಶಸ್ತಿ ವಿಜೇತ 'ಹೂಮಳೆ' (1998) ಚಿತ್ರದಲ್ಲೂ ಅವರು ನಟಿಸಿದ್ದರು.
ಈ ಚಿತ್ರದಲ್ಲಿ ನಾಗಪ್ರಸನ್ನ ಅವರು ನಾಯಕನ ತಂಗಿಯ ಪ್ರಿಯಕರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಮೇಶ್ ಅರವಿಂದ್ (ಸಂತೋಷ್ ಪಾತ್ರದಲ್ಲಿ)ಸುಮನ್ ನಗರ್ಕರ್ (ಸುಭಾಷಿಣಿ ಪಾತ್ರದಲ್ಲಿ)ಎಚ್. ಜಿ. ದತ್ತಾತ್ರೇಯ (ದತ್ತಣ್ಣ)ಸೋರತ್ ಅಶ್ವಥ್, ಎಚ್. ಜಿ. ಸೋಮಶೇಖರ್ ರಾವ್, ಬಿ. ವಿ. ರಾಧಾ, ವಿನಯಾ ಪ್ರಸಾದ್ ಮುಂತಾದ ದಿಗ್ಗಜ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಮುಂದೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು, ಪ್ರಕರಣಗಳನ್ನು ಅತ್ಯಂತ ಶೀಘ್ರವಾಗಿ ವಿಲೇವಾರಿ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ನಾಗಪ್ರಸನ್ನ ಅವರು ಈ ಅಪರೂಪದ ಸಾಧನೆ ಮಾಡುತ್ತಿದ್ದಂತೆ ಅವರ ನಟಿಸಿದ್ದ ಸಿನಿಮಾದ ಕ್ಲಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ‘ಸುರದ್ರೂಪಿ ಆಗಿರೋ ಅವರು ಹೀರೋ ಮೆಟೀರಿಯಲ್ ಆಗಿದ್ದರು’ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
550ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸಿ ಹೊಸ ದಾಖಲೆ
ಚಿತ್ರರಂಗದಿಂದ ನ್ಯಾಯಾಂಗ ಕ್ಷೇತ್ರದವರೆಗೆಪಯಣ ಬೆಳೆಸಿರುವ ನಾಗಪ್ರಸನ್ನ ಅವರು ತುರ್ತು ವಿಚಾರಣೆಗೆ ಕೋರಿದ್ದ 240ಕ್ಕೂ ಹೆಚ್ಚು ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸುವ ಮೂಲಕ ಹೈಕೋರ್ಟ್ ಕಲಾಪಗಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
ಬೆಳಿಗ್ಗೆ ಎಂದಿನ ಕಲಾಪದಲ್ಲಿ ತುರ್ತು ವಿಚಾರಣೆಗೆ ಕೋರಲಾದ 240ಕ್ಕೂ ಹೆಚ್ಚು ಮೆಮೊ ಸ್ವೀಕರಿಸಿ ಅವುಗಳನ್ನು ಮಧ್ಯಾಹ್ನದ ಕಲಾಪ ಪಟ್ಟಿಗೆ ಅಣಿಗೊಳಿಸುವಂತೆ ಆದೇಶಿಸಿದರು. ಬೆಳಗಿನ ಕಲಾಪದಲ್ಲಿ ಎಂದಿನಂತೆ ನಿಗದಿಯಾಗಿದ್ದ 318 ಅರ್ಜಿಗಳ ವಿಚಾರಣೆ ಪೂರೈಸಿದರು. ಭೋಜನ ವಿರಾಮದ ನಂತರ 2.30ಕ್ಕೆ ಆರಂಭಿಸಿದ ಕಲಾಪವನ್ನು ರಾತ್ರಿ 8.07ಕ್ಕೆ ಮುಕ್ತಾಯ ಗೊಳಿಸಿದರು.
ಒಂದು ದಿನದ ಕಲಾಪದ ಅವಧಿಯಲ್ಲಿ ಒಟ್ಟು 534 ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳ ವಿಚಾರಣೆ ಪೂರೈಸಿ ಅವುಗಳಲ್ಲಿ ಒಟ್ಟು 85 ಅರ್ಜಿಗಳನ್ನು ವಿಲೇವಾರಿ ಮಾಡಿದ್ದಾರೆ.
ವಿಚಾರಣೆಯಲ್ಲಿ ಕಿಕ್ಕಿರಿದಿದ್ದ ಹಿರಿ-ಕಿರಿಯ ವಕೀಲರು ‘ನ್ಯಾಯಮೂರ್ತಿಗಳು ದಿನವೊಂದರಲ್ಲಿ 10 ಗಂಟೆಗಳ ನಿರಂತರ ಕಲಾಪ ನಡೆಸಿದ ಹೆಗ್ಗಳಿಕೆ ಹೊಂದುವ ಮೂಲಕ ದೇಶದ ಹೈಕೋರ್ಟ್‌ಗಳ ಇತಿಹಾಸದಲ್ಲಿ ಹೊಸ ಹೆಜ್ಜೆ ಮೂಡಿಸಿದ್ದೀರಿ’ ಎಂದು ನ್ಯಾ.ನಾಗಪ್ರಸನ್ನ ಅವರನ್ನು ಶ್ಲಾಘಿಸಿದರು.
ಕನ್ನಡ ಚಿತ್ರರಂಗದ ಸಣ್ಣ ಪಾತ್ರದಿಂದ ಹಿಡಿದು ಹೈಕೋರ್ಟ್‌ನಲ್ಲಿ ಐತಿಹಾಸಿಕ ತೀರ್ಪು ನೀಡುವ ಹಂತದವರೆಗಿನ ಅವರ ಪ್ರಯಾಣ ನಿಜಕ್ಕೂ ವಿಶೇಷ.