
ಚಿಕ್ಕಮಗಳೂರು: 1936ರಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಗಣೇಶ ಉತ್ಸವ
ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ಸಾರ್ವಜನಿಕ ಗಣಪತಿ ಸೇವಾ ಸಮಿತಿ ಈ ವರ್ಷ 90ನೇ ವರ್ಷದ ಗಣೇಶೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಂಡಿದೆ.
1936ರಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಗಣೇಶ ಉತ್ಸವ ನಡೆಸಿಕೊಂಡು ಬರಲಾಗಿದೆ. ಅಂದು ಆರಂಭವಾದ ಸಾರ್ವಜನಿಕ ಗಣಪತಿ ಸೇವಾ ಸಮಿತಿ ಈಗ ತನ್ನದೇ ಆದ ಸ್ವಂತ ಕಟ್ಟಡ, ಟ್ರಸ್ಟ್‌ಗಳನ್ನು ಹೊಂದಿದೆ. ಪ್ರತಿವರ್ಷ ಉತ್ಸವವನ್ನು ವೈಭವದಿಂದ ನಡೆಸುತ್ತಿದೆ.
ಪ್ರಸನ್ನ ಗಣಪತಿ ಮೂರ್ತಿ ಸಿದ್ಧವಾಗಿದ್ದು, ಸೋಮವಾರ ಮೆರವಣಿಗೆ ಮೂಲಕ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಗುತ್ತದೆ.
24 ದಿನಗಳ ಕಾಲ ಗಣೇಶೋತ್ಸವ ನಡೆಯಲಿದ್ದು, 14 ದಿನ ಶಾಸ್ತ್ರೀಯ ಸಂಗೀತ, ಜಾನಪದ, ಹರಿಕಥೆ, ಭಾವಗೀತೆ, ಭಕ್ತಿಗೀತೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಿವೆ. ಅ. 4ರಂದು ಗಣಹೋಮ ಇರಲಿದೆ. ಅ. 7ರಂದು ಮೆರವಣಿಗೆ ನಡೆಸಿ ದಂಟರಮಕ್ಕಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಸಿ.ಎಸ್. ಕುಬೇರಪ್ಪ ತಿಳಿಸಿದರು.
ಅ. 4ರಂದು ಗಣಹೋಮ, ಅನ್ನ ಸಂತರ್ಪಣೆ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ತುಮಕೂರು ಮತ್ತು ಬೆಂಗಳೂರಿನ ತಂಡದಿಂದ ಸಂಗೀತ ರಸಮಂಜರಿ ಇರಲಿದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಆರ್. ಕೇಶವಮೂರ್ತಿ ಮಾಹಿತಿ ನೀಡಿದರು.
ದಕ್ಷಿಣ ಕಾಶಿ ಸಭಾಭವನ ನಿರ್ಮಾಣ
ಕಳಸ: ಇಲ್ಲಿನ ಸೌಹಾರ್ದ ಗಣಪತಿ ಸಮಿತಿಯು ಮೂರನೇ ವರ್ಷದ ಗಣಪತಿ ಆರಾಧನೆ ನಡೆಸುತ್ತಿದೆ. ಸಮಿತಿಯು ಈ ಬಾರಿ ಅರಮನೆ ಮಕ್ಕಿ ಮೈದಾನದಲ್ಲಿ ₹1 ಕೋಟಿ ವೆಚ್ಚದಲ್ಲಿ ಶಾಶ್ವತ ರಂಗಮಂದಿರ ನಿರ್ಮಾಣ ಮಾಡಿದೆ.
ಸೌಹಾರ್ದ ಗಣಪತಿಯ ಭಕ್ತರ ಸಹಕಾರದಿಂದಾಗಿ ಭವ್ಯವಾದ ರಂಗಮಂದಿರ ನಿರ್ಮಾಣ ಮಾಡಲಾಗಿದೆ. ಭವಿಷ್ಯದಲ್ಲಿ ಕಳಸದ ಎಲ್ಲ ಸಂಸ್ಕೃತಿಕ ಚಟುವಟಿಕೆಗೆ ಈ ಸಭಾಭವನ ಆಧಾರ ಆಗಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಬ್ರಹ್ಮದೇವ ಹೇಳುತ್ತಾರೆ.
ಕಳಸ ತಾಲೂಕು ಮಟ್ಟದಲ್ಲಿ 9 ದಿನಗಳ ಕಾಲ ಅತ್ಯಂತ ವಿಜೃಂಭಣೆಯ ಗಣೇಶ ಉತ್ಸವ ನಡೆಯಲಿದೆ. ರಾಜ್ಯದ ವಿವಿಧೆಡೆಯ ಕಲಾವಿದರಿಂದ ಆಕರ್ಷಕ ಕಾರ್ಯಕ್ರಮಗಳು ಮೂಡಿ ಬರಲಿದೆ. ಪ್ರತಿ ವರ್ಷವೂ ವಿನೂತನ ಕಾರ್ಯಕ್ರಮಗಳು ಜನರ ಮನ ತಣಿಸಿ ಸ್ಮರಣೀಯ ಎನಿಸುತ್ತಿವೆ ಎಂದು ಸಮಿತಿ ಅಧ್ಯಕ್ಷ ರವಿ ರೈ ತಿಳಿಸಿದರು.
70 ವರ್ಷದ ಹಬ್ಬಕ್ಕೆ ಸಿದ್ಧತೆ
ತರೀಕೆರೆ: ಪಟ್ಟಣದ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ 70 ವರ್ಷದಿಂದ ಪಟ್ಟಣ ಸೇರಿ ತಾಲ್ಲೂಕಿನ ಸಮಸ್ತ ನಾಗರಿಕರು ಸೇರಿ ಆಚರಿಸುತ್ತಿದ್ದಾರೆ.
ಎಲ್ಲಾ ಜಾತಿ, ಧರ್ಮೀಯರು ಸೇರಿ ಆಚರಿಸುವ ಗಣೇಶೋತ್ಸವ ಭಾವೈಕ್ಯತೆಯ ಪ್ರತೀಕವಾಗಿದೆ. ಈ ಉತ್ಸವವು ಒಂದು ತಿಂಗಳಿಗೂ ಹೆಚ್ಚು ದಿನ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಗಣಪತಿ ಪೆಂಡಾಲ್‌ನಲ್ಲಿ ವಿಶೇಷವಾಗಿ ಅರಮನೆ ಅಲಂಕಾರದ ಪೆಂಡಾಲ್‍ನಲ್ಲಿ ನಡೆಯಲಿದೆ. ಅರಸೀಕೆರೆ ತಾಲ್ಲೂಕು ಹಾರನಹಳ್ಳಿಯ ಶ್ರೀಬಸಪ್ಪನವರ ಮಕ್ಕಳಾದ ಮಹದೇವಪ್ಪ ಅವರಿಂದ ಸುಂದರವಾಗಿ ತಯಾರಿಸಲ್ಪಟ್ಟ ಶ್ರೀ ಪ್ರಸನ್ನ ಗಣಪತಿ ವಿಗ್ರಹ ಆರು ಅಡಿ ಎತ್ತರ ಹೊಂದಿದೆ ಎಂದು ಸಮಿತಿಯ ಅಧ್ಯಕ್ಷ ಟಿ.ಆರ್. ಇಂದ್ರಯ್ಯ ತಿಳಿಸಿದರು.
ಅರ್ಚಕ ಎಚ್.ಪಿ. ಮುರಳೀಧರ ರಾವ್ ಅವರ ನೇತೃತ್ವದಲ್ಲಿ ಪೂಜೆ ನಡೆಯಲಿದೆ. ಅ. 10ರಂದು ಶನಿವಾರ ಸಂಜೆ ಗಣಪತಿ ವಿಸರ್ಜನೆ ಚಿಕ್ಕೆರೆ ಬಳಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಧಾರ್ಮಿಕ ಆಚರಣೆಗೆ ಆದ್ಯತೆ
ಮೂಡಿಗೆರೆ: ಪಟ್ಟಣದ ಅಡ್ವಾಂತಯ ರಂಗಮಂದಿರದಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾಸಭಾ ಗಣಪತಿ ಆಚರಣೆಯು ಎರಡು ವರ್ಷಗಳಿಂದ ಧಾರ್ಮಿಕ ಆಚರಣೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ವಿಶೇಷತೆಯಾಗಿದೆ. 12 ದಿನಗಳ ಕಾಲ ಪ್ರತಿಷ್ಠಾಪಿಸುವ ಹಿಂದೂ ಮಹಾಸಭಾ ಗಣಪತಿಯು ಈ ಬಾರಿ ತಾಲ್ಲೂಕಿನ ಎಲ್ಲಾ ಗ್ರಾಮಗಳ ಜನರನ್ನು ಒಗ್ಗೂಡಿಸುತ್ತಿರುವುದು ಆಕರ್ಷಣೀಯವಾಗಿದೆ. ಇದಕ್ಕಾಗಿ ಅನುಕುಮಾರ್ ನೇತೃತ್ವದಲ್ಲಿ ಸಜ್ಜಾಗಿರುವ ತಂಡ, ಎಲ್ಲಾ ಹಳ್ಳಿಗಳಲ್ಲೂ ಸಂಚರಿಸಿ ಪ್ರತಿ ಮನೆಗೂ ಗಣಪತಿ ಉತ್ಸವದ ಕರೆಯೋಲೆ ತಲುಪಿಸಲಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಗಣಪತಿ ಉತ್ಸವದಲ್ಲಿ ಧಾರ್ಮಿಕ ಆಚರಣೆಗೆ ಹೆಚ್ಚು. ಆದ್ಯತೆ ನೀಡಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಕ್ತಿ ಪ್ರಧಾನವಾಗಿಸಿದ್ದು, ಮಾದರಿ ಆಚರಣೆಗೆ ಸಿದ್ಧತೆ ನಡೆದಿದೆ.
110ಕ್ಕೂ ಹೆಚ್ಚು ಕಡೆ ಪ್ರತಿಷ್ಠಾಪನೆ
ಕೊಪ್ಪ: ತಾಲ್ಲೂಕಿನಲ್ಲಿ ಈ ಬಾರಿ 110ಕ್ಕೂ ಹೆಚ್ಚು ಕಡೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಕಳೆದ ಬಾರಿ 122 ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು.
ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ ವತಿಯಿಂದ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಬಾರಿ 49ನೇ ವರ್ಷದ ಗಣೇಶೋತ್ಸವ ನಡೆಯುತ್ತಿದೆ. ಆರಂಭದಲ್ಲಿ ಗಣೇಶೋತ್ಸವ ಸಮಿತಿಯಲ್ಲಿ ಇತರೆ ಸಮುದಾಯದವರೂ ಪದಾಧಿಕಾರಿಗಳಾಗಿದ್ದರು.
ಪೌರ ಗಣೇಶೋತ್ಸವ ಸಮಿತಿ ವತಿಯಿಂದ 52ನೇ ವರ್ಷದ ಗಣಪತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ ಪೂಜೆ, ವಿದ್ಯಾರ್ಥಿಗಳಿಗೆ ಚಿತ್ರ ಕಲೆ, ಧಾರ್ಮಿಕ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್, ಇನ್ನರ್‌ವೀಲ್ ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ.
ಬಿಂತ್ರವಳ್ಳಿಯಲ್ಲಿ ಈ ಬಾರಿ 50ನೇ ವರ್ಷದ ಅದ್ದೂರಿ ಗಣೇಶೋತ್ಸವಕ್ಕೆ ಸಿದ್ಧತೆ ನಡೆದಿದೆ. ಸ್ಥಳೀಯರಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ಮುಂತಾದವುಗಳನ್ನು ಆಯೋಜಿಸಲಾಗಿದೆ.
ಈ ಬಾರಿ ಸಿಗದಾಳುವಿನಲ್ಲಿ 66ನೇ ವರ್ಷದ ಗಣೇಶೋತ್ಸವ ನಡೆಯುತ್ತಿದ್ದು, ಗೌರಿ ಗಣೇಶನ ರಚನೆ ಒಂದೇ ಮೂರ್ತಿಯಲ್ಲಿ ಮೂಡಿ ಬಂದಿದೆ.
ನರಸಿಂಹರಾಜಪುರ: ಪಟ್ಟಣದ ವಿದ್ಯಾಗಣಪತಿ ಸಂಘಕ್ಕೆ 76 ವರ್ಷಗಳ ಇತಿಹಾಸವಿದೆ. ಹಿಂದೆ ಇಡೀ ಊರಿಗೆ ಒಂದೇ ಗಣಪತಿ ಇತ್ತು. ಆನಂತರದಲ್ಲಿ ಪಟ್ಟಣದ ಬೇರೆ, ಬೇರೆ ಬಡಾವಣೆಗಳಲ್ಲೂ ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.
ಪಟ್ಟಣದ ಬಸ್ ನಿಲ್ದಾಣದ ಸಮೀವಿರುವ ವಿದ್ಯಾಗಣಪತಿ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಗಣೇಶೋತ್ಸವದ ಅಂಗವಾಗಿ 11 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಗಣಪತಿ ಪ್ರತಿಷ್ಠಾಪನೆಯ ದಿನದಿಂದ ವಿಸರ್ಜನಾ ದಿನದವರೆಗೆ ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಪ್ರತಿ ದಿನ ರಾತ್ರಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ. ಸರ್ವ ಧರ್ಮಿಯರು ಸೌಹಾರ್ತದದಿಂದ ಗಣೇಶೋತ್ಸವ ಆಚರಿಸುವುದು ವಿಶೇಷ.
ಶೃಂಗೇರಿ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಗಣೇಶ ಹಬ್ಬಕ್ಕೆ ಸಿದ್ಧತಾ ಕಾರ್ಯಗಳು ನಡೆದವು. ತಾಲ್ಲೂಕಿನಾದಂತ್ಯ ಹಬ್ಬದ ಆಚರಣೆ ಸಂಭ್ರಮದಿಂದ ಕೂಡಿದೆ.
ತಾಲ್ಲೂಕಿನ ಪಟ್ಟಣ ಪಂಚಾಯಿತಿಯ ವಿ.ಆರ್. ಗೌರಿಶಂಕರ ಸಭಾಂಗಣ, ಕಾಂಗ್ರೆಸ್ ಭವನ, ಕಾಂಚಿನಗರ, ಕಲ್ಕಟ್ಟೆ, ಆನೆಗುಂದ, ವೈಕುಂಠಪುರ, ಬೆಟ್ಟಗೆರೆ, ತೆಕ್ಕೂರು, ಕುಂಚೇಬೈಲ್, ಮೆಣಸೆ, ಹೊಳೆಕೊಪ್ಪ, ಕಾವಡಿ, ಅಡ್ಡಗದ್ದೆ, ನೆಮ್ಮಾರ್, ವಿದ್ಯಾರಣ್ಯಪುರ ಇನ್ನು ಹಲವು ಕಡೆ ಬಣ್ಣಬಣ್ಣದ ಅಲಂಕಾರಿಕ ವಸ್ತುಗಳನ್ನು ಬಳಸಿಕೊಂಡು ಆಕರ್ಷಕ ಮಂಟಪ ಸಿದ್ಧತಾ ಕಾರ್ಯ ನಡೆದಿದೆ.
ಮಾರುಕಟ್ಟೆಯಲ್ಲಿ ಗೌರಿ-ಗಣೇಶ ವಿಗ್ರಹಗಳು ಹೆಚ್ಚಾಗಿ ಮಾರಟವಾಗುತ್ತಿದೆ. ಈ ಬಾರಿ ಬೇಡಿಕೆ ಹೆಚ್ಚಿದೆ. ಎರಡು ಅಡಿಗಿಂತ ಹೆಚ್ಚು ಎತ್ತರದ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಶೃಂಗೇರಿ ಪಟ್ಟಣ ಪಂಚಾಯಿತಿ ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿಯಿಂದ 67ನೇ ವರ್ಷದ ಗಣೇಶೋತ್ಸವ ನಡೆಯುತ್ತಿದೆ. ತಾಲ್ಲೂಕಿನಲ್ಲಿ ಅತಿ ದೊಡ್ಡ ಗಣಪತಿ ವಿಗ್ರಹ ನಿರ್ಮಾಣವಾಗಿದ್ದು, ಶನಿವಾರ ಕೂಡ ಕಲಾವಿದ ಹರೀಶ್ ಡೋಂಗ್ರೆ ಬಾಕುರ್ಡಿ ಅವರು ಅಂತಿಮ ರೂಪ ನೀಡಿದರು.
ಗಣೇಶೋತ್ಸವಕ್ಕೆ ಸಕಲ ಸಿದ್ಧತೆ
ಅಜ್ಜಂಪುರ: ಪಟ್ಟಣದ ಟಿ.ಪಿ. ಕೈಲಾಸಂ ಬಯಲು ರಂಗ ಮಂದಿರದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾನ ವತಿಯಿಂದ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಸತತ ಐದನೇ ವರ್ಷದ ಪ್ರತಿಷ್ಠಾಪನೆ ಪ್ರಯುಕ್ತ ಸೋಮವಾರ ಅಂಬೇಡ್ಕರ್ ಬಡಾವಣೆಯಿಂದ ಗಣಪತಿ ಮೂರ್ತಿಯನ್ನು ಗಾಂಧಿ ವೃತ, ಬಸ್ ನಿಲ್ದಾಣ ಮಾರ್ಗವಾಗಿ ಕೈಲಾಸಂ ಕಲಾಕ್ಷೇತ್ರಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಗಿರೀಶ್ ತಿಳಿಸಿದರು. ಪ್ರತಿಷ್ಠಾಪನೆ ನಿಯಮಿತ ಕೈಲಾಸಂ ಕಲಾಕ್ಷೇತ್ರದಿಂದ ಬಸ್ ನಿಲ್ದಾಣದವರೆಗೆ ವಿಶೇಷ ವಿದ್ಯುತ್ ಅಲಂಕಾರ ಮಾಡಲಾಗಿದೆ. ಗಣೇಶೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅನ್ನ ಸಂತರ್ಪಣೆ ಕೂಡ ನಡೆಯಲಿದೆ ಎಂದು ಮುಖಂಡ ಸಂತೋಷ್ ಹೇಳಿದರು.
ಪೂರಕ ಮಾಹಿತಿ: ರವಿ ಕೆಳಂಗಡಿ, ಕೆ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಕೆ.ವಿ.ನಾಗರಾಜ್, ಕೆ.ಎನ್. ರಾಘವೇಂದ್ರ, ಜೆ.ಒ. ಉಮೇಶ್‌ಕುಮಾರ್
260914-126-1610057373