ಎಂಜಿನಿಯರ್ಸ್ ದಿನ: ಆಧುನಿಕ ಭಾರತದ ಶಿಲ್ಪಿ, ಕರ್ನಾಟಕದ ಹೆಮ್ಮೆಯ ವಿಶ್ವೇಶ್ವರಯ್ಯ

ಎಂಜಿನಿಯರ್ಸ್ ದಿನ: ಆಧುನಿಕ ಭಾರತದ ಶಿಲ್ಪಿ, ಕರ್ನಾಟಕದ ಹೆಮ್ಮೆಯ ವಿಶ್ವೇಶ್ವರಯ್ಯ

ಎಂಜಿನಿಯರ್ಸ್ ದಿನ: ಆಧುನಿಕ ಭಾರತದ ಶಿಲ್ಪಿ, ಕರ್ನಾಟಕದ ಹೆಮ್ಮೆಯ ವಿಶ್ವೇಶ್ವರಯ್ಯ

ಆಧುನಿಕ ಭಾರತದ ನೀರಾವರಿ, ವಾಸ್ತುಶಿಲ್ಪ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಕೈಗಾರಿಕೆಗಳು, ಮೈ ಸೂರು ಸಂಸ್ಥಾನದಲ್ಲಿ ರಾಜನೀತಿಯನ್ನು ರೂಪಿಸಿದ ಕೀರ್ತಿ ಕರ್ನಾಟಕದ ಹೆಮ್ಮೆಯ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ.

ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಅವರ ಅಪ್ರತಿಮ ಸಾಧನೆಗಾಗಿ ಭಾರತ ಸರ್ಕಾರ ನಾಡಿನ ಹೆಮ್ಮೆಯ ಮೇಧಾವಿಗೆ ಭಾರತರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಪ್ರತಿ ವರ್ಷ ಅವರ ಜನ್ಮದಿನವಾದ ಸೆಪ್ಟೆಂಬರ್ 15ಅನ್ನು ಎಂಜಿನಿಯರ್‌ಗಳ ದಿನವನ್ನಾಗಿ ಆಚರಿಸುವ ಮೂಲಕ ವಿಶ್ವೇಶ್ವರಯ್ಯ ಅವರಿಗೆ ಯೋಗ್ಯ ಗೌರವವನ್ನು ಸಲ್ಲಿಸಲಾಗುತ್ತಿದೆ.

1861ರ ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷಮ್ಮ. ತಂದೆ ಸಂಸ್ಕೃತ ಪಂಡಿತರು, ವೇದಾಂತ ಧುರೀಣರು, ತಾಯಿ ಸುಶೀಲೆ ಸುಸಂಪನ್ನೆ.

ವಿಶ್ವೇಶ್ವರಯ್ಯನವರು 15ನೇ ವರ್ಷದ ಬಾಲಕನಾಗಿದ್ದಾಗ ತಂದೆ ವಿಧಿವಶರಾದರು. ಬೆಂಗಳೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಅನಂತರ ಸೆಂಟ್ರಲ್ ಕಾಲೇಜಿನಲ್ಲಿ ಇವರ ವಿದ್ಯಾಭ್ಯಾಸ ಮುಂದುವರಿಯಿತು. ಹಣದ ಅವಶ್ಯಕತೆಯನ್ನು ನೀಗಿಸಲು ಮನೆ ಪಾಠವನ್ನು ಹೇಳುತ್ತಿದ್ದರು. ಎಷ್ಟೋ ಬಾರಿ ಪಾಠ ಹೇಳುವ ಮನೆಯಲ್ಲೋ, ಬೀದಿಯ ದೀಪದ ಕೆಳಗೋ ಕುಳಿತು ಓದಬೇಕಾಗುತ್ತಿತ್ತು. ಸೋದರ ಮಾವನ ಮನೆಯಲ್ಲಿ ಎರಡು ಹೊತ್ತಿನ ಊಟ ಮಾತ್ರ ದೊರೆಯುತ್ತಿತ್ತು. ಮೆಟ್ರಿಕ್ಯುಲೇಶನ್ ಪರೀಕ್ಷೆಗೆ ಹಣ ಕಟ್ಟಬೇಕಾಗಿತ್ತು; ಆದರೆ, ವಿಶ್ವೇಶ್ವರಯ್ಯನವರ ಹತ್ತಿರ ಹಣ ಇರಲಿಲ್ಲ. ಆದಕಾರಣ ಶಾಲೆ ಮುಗಿಸಿ ಸಂಜೆ ಹೊತ್ತಿಗೆ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು. ಮನೆಗೆ ಬಂದ ವಿಶ್ವೇಶ್ವರಯ್ಯನವರಿಗೆ ವಿಚಾರಿಸಿದಾಗ ಪರೀಕ್ಷೆ ಶುಲ್ಕ ಕಟ್ಟಲು ಹಣ ಬೇಕೆಂದು ತಾಯಿಗೆ ಕೇಳಿದರು. ಆ ಸಮಯದಲ್ಲಿ ತಾಯಿ ಹತ್ತಿರ ಸಹ ಹಣ ಇರಲಿಲ್ಲ. ಆದ್ದರಿಂದ ಪಕ್ಕದ ಮನೆಯವರ ಹತ್ತಿರ ಎರವಲು ಮೇಲೆ ಹಣ ಪಡೆದು ವಿಶ್ವೇಶ್ವರಯ್ಯನವರಿಗೆ ಕೊಡುತ್ತಾರೆ. ಅದೇ ಸಮಯದಲ್ಲಿ ಮುದ್ದೇನಹಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಹಣ ಕಟ್ಟುತ್ತಾರೆ. ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಮೊದಲನೆಯವರಾಗಿ ತೇರ್ಗಡೆ ಹೊಂದುತ್ತಾರೆ.

ಒಂದು ದಿವಸ ಸೋದರ ಮಾವನ ಮನೆಗೆ ಊಟಕ್ಕೆ ಹೋದಾಗ ಸೋದರ ಮಾವನ ಹೆಂಡತಿ (ಅತ್ತೆ) ತಿನ್ನಲು ಪುಡಿ ಹಿಟ್ಟು ಕೊಟ್ಟಿರುತ್ತಾರೆ. ಪುಡಿ ಹಿಟ್ಟು ವಿಶ್ವೇಶ್ವರಯ್ಯನವರಿಗೆ ಗಂಟಲಿನಲ್ಲಿ ಸಿಲುಕುತ್ತದೆ. ತಕ್ಷಣ ಅತ್ತೆ ನೀರು ತರಲು ಹೋದಾಗ ಒಂದು ಲೋಟ ನೀರು ಸಹ ಸಿಗುವುದಿಲ್ಲ. ವಿಶ್ವೇಶ್ವರಯ್ಯನವರಿಗೆ ಜೀವ ಹೋದಂತೆ ಆಗುತ್ತದೆ. ಆ ಸಮಯದಲ್ಲಿ ಅತ್ತೆ ಗದ್ಗದಿರಾಗಿ ವಿಶ್ವೇಶ್ ನೋಡಪ್ಪಾ ಒಂದು ಲೋಟದ ನೀರಿಗೆ ಹಾಹಾಕಾರ. ಈ ದೇಶಕ್ಕೆ ನೀರಿಗೆ ಎಷ್ಟು ಬರ ಇದೆ, ನೀರಿನ ಬಗ್ಗೆ ಕಾಳಜಿ ವಹಿಸಪ್ಪಾ ಎಂದು ನುಡಿದು ಒಂದು ಲೋಟ ಹಾಲನ್ನು ಕೋಡುತ್ತಾರೆ. ಹಾಲನ್ನು ಕುಡಿದ ವಿಶ್ವೇಶ್ವರಯ್ಯನವರಿಗೆ ಮರು ಜೀವ ಬಂದ ಹಾಗೆ ಆಗುತ್ತದೆ. ಅದರಂತೆ ವಿಶ್ವೇಶ್ವರಯ್ಯನವರು ಜೀವನ ಪರ್ಯಂತ ನೀರಿಗಾಗಿ ಕಾಳಜಿ ವಹಿಸುತ್ತಾರೆ ಎಂಬ ಪ್ರತೀತಿ ಇದೆ.

ಬ್ರಿಟಿಷ್ ಸರ್ಕಾರದಲ್ಲಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ 1885ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಳ್ಳುವ ವಿಶ್ವೇಶ್ವರಯ್ಯ ಅವರು ನಂತರ ನೀರಾವರಿ ಕಮಿಷನ್‌ಗೆ ಸೇರ್ಪಡೆಯಾಗಿ ಪುಣೆ ಸಮೀಪದ ಖಡಕ್ ವಾಸ್ಲಾ ಹಾಗೂ ಗ್ವಾಲಿಯರ್ ಸಮೀಪದ ಟಿಗ್ರಾ ಅಣೆಕಟ್ಟೆಗಳಿಗೆ ಸ್ವಯಂಚಾಲಿತ ಗೇಟ್‌ಗಳನ್ನು ಅಳವಡಿಸಿ ಭಾರಿ ಪ್ರಮಾಣದ ನೀರು ಹರಿದು ಹೋಗದಂತೆ ತಡೆದು ನಿಲ್ಲಿಸುತ್ತಾರೆ. ನಂತರ ಮೈಸೂರಿನ ಐತಿಹಾಸಿಕ ಕೆಆರ್‌ಎಸ್ ಡ್ಯಾಮ್ ಮತ್ತು ಕೊಲ್ಹಾಪುರದ ಬಳಿ ಲಕ್ಷ್ಮಿ ತಾಳವ್ ಡ್ಯಾಮ್‌ಗಳನ್ನು ನಿರ್ಮಿಸುತ್ತಾರೆ.

ಬ್ರಿಟಿಷ್ ಸರ್ಕಾರವು ತನ್ನದೇ ವಸಾಹತು ದೇಶವಾಗಿದ್ದ ಯೆಮೆನ್‌ನಲ್ಲಿನ ನೀರಾವರಿ ಮತ್ತು ಒಳಚರಂಡಿ ವ್ಯವಸ್ಥೆಯ ಪರಿಶೀಲನೆಗೆ ಕಳುಹಿಸುತ್ತದೆ. ಅಲ್ಲಿನ ನೀರಾವರಿ ಬಳಕೆ ಕುರಿತು ಸಲ್ಲಿಸಿದ್ದ ಯೋಜನಾ ವರದಿಯನ್ನು ಬ್ರಿಟಿಷ್ ಸರ್ಕಾರ ಅನುಷ್ಠಾನಗೊಳಿಸುತ್ತದೆ.

ಪ್ರಾಮಾಣಿಕತೆಗೆ ಹೆಸರಾಗಿದ್ದ ವಿಶ್ವೇಶ್ವರಯ್ಯನವರ ಬಗ್ಗೆ ಜನಪ್ರಿಯ ಘಟನೆಯೊಂದು ಚಾಲ್ತಿಯಲ್ಲಿದೆ. ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ತಮ್ಮ ಸ್ವಂತ ಬರವಣಿಗೆಯ ಸಂದರ್ಭದಲ್ಲಿ ಸಂಸ್ಥಾನದಿಂದ ಒದಗಿಸಲಾದ ಮೇಣದ ಬತ್ತಿಗಳನ್ನು ಉರಿಸುವ ಬದಲು ತಾವೇ ಖರೀದಿಸಿದ್ದ ಮೇಣದ ಬತ್ತಿಯನ್ನು ಹಚ್ಚುತ್ತಿದ್ದರಂತೆ. ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಈ ಉಜ್ವಲ ಉದಾಹರಣೆ ನಮ್ಮ ಬದುಕಿನ ದಾರಿದೀಪವಾಗಬೇಕಿದೆ.

1962ರ ಏಪ್ರಿಲ್ 14ರಂದು ಈ ಜಗತ್ತಿಗೆ ವಿದಾಯ ಹೇಳಿದರು. ಅವರು ನಿರ್ಮಿಸಿದ ಅಣೆಕಟ್ಟುಗಳು, ರೂಪಿಸಿದ ನೀರಾವರಿ ಯೋಜನೆಗಳ ಮೂಲಕ ಇಂದಿಗೂ ಅಮರರಾಗಿದ್ದಾರೆ.

ಮೈಸೂರು ಬ್ಯಾಂಕ್ ಸ್ಥಾಪನೆ ಸೇರಿ ವಿವಿಧ ಮಹತ್ಕಾರ್ಯ

ಸರ್‌ ಎಂ.ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ದಿವಾನರಾಗಿ ಮಾದರಿ ಕಾರ್ಯಗಳನ್ನು ಮಾಡುತ್ತಾರೆ. ಕೃಷ್ಣರಾಜಸಾಗರ ಆಣೆಕಟ್ಟು ಅಷ್ಟೆ ಅಲ್ಲದೇ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ಬ್ಯಾಂಕ್ ಸ್ಥಾಪನೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಯಂತಹ ಮಹತ್ಕಾರ್ಯಗಳನ್ನು ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಕಟ್ಟಿದ ರಾ.ಹ. ದೇಶಪಾಂಡೆ ಅವರಿಗೂ ವಿಶ್ವೇಶ್ವರಯ್ಯನವರಿಗೂ ಅವಿನಾಭಾವ ಸ್ನೇಹ. ಧಾರವಾಡಕ್ಕೆ ಬಂದಾಗ ಕೆರೆ ನಿರ್ಮಿಸುವ ಬಗ್ಗೆ ಚರ್ಚಿಸಿದರು. ಸ್ಥಳ ಪರಿಶೀಲನೆ ನಡೆಸಿದ ವಿಶ್ವೇಶ್ವರಯ್ಯ ಕೆಲಗೇರಿ ಬಳಿ ಕೆರೆ ನಿರ್ಮಿಸುವ ಯೋಜನೆ ರೂಪಿಸಿಕೊಟ್ಟರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ