ಸಚಿವ ಸ್ಥಾನ ಸಿಗದಿದ್ದಕ್ಕೆ ಬಂಗಾರಪೇಟೆ ಬಂದ್: ಮಿಶ್ರ ಪ್ರತಿಕ್ರಿಯೆ
ಬಂಗಾರಪೇಟೆ (ಕೋಲಾರ): ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಕರೆ ನೀಡಿರುವ ಬಂಗಾರಪೇಟೆ ಬಂದ್'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿವಿಧ ರಸ್ತೆಗಳಲ್ಲಿ ಅಂಗಡಿ ಬಾಗಿಲು ಮುಚ್ಚಿಸಲಾಯಿತು. ವಾಹನಗಳನ್ನು ತಡೆಹಿಡಿದರು. ಕಾರ್ಯಕರ್ತರು ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು.
ಬಲವಂತವಾಗಿ ಅಂಗಡಿ ಹಾಗೂ ಪೆಟ್ರೋಲ್ ಬಂಕ್ ಮುಚ್ಚಿಸಲು ಯತ್ನಿಸಿದ ಸಂಬಂಧ ಬಿಜೆಪಿ ಮುಖಂಡರು ಹಾಗೂ ಸ್ಥಳೀಯ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಮಾತನಾಡಿ, 'ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಬಲವಂತದಿಂದ ಬಂದ್ ಮಾಡಿ ಸಾರ್ವಜನಿಕರ ಹಕ್ಕನ್ನು ಕಸಿಯಲು ಯತ್ನಿಸುತ್ತಿರುವುದು ಖಂಡನೀಯ. ರಾಜಕೀಯ ಅಥವಾ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಆಯಾ ಪಕ್ಷದ ವೇದಿಕೆಯಲ್ಲಿ ಅಥವಾ ಹೈಕಮಾಂಡ್ ಹಂತದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಾರ್ವಜನಿಕರ ಆಸ್ತಿಗೆ ತೊಂದರೆ ಕೊಡುವುದು ಹಾಗೂ ಬಲವಂತವಾಗಿ ವ್ಯಾಪಾರ, ವಹಿವಾಟು ಬಂದ್ ಮಾಡಿಸುವುದು ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂದ್‌ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ತೀವ್ರ ವಾಗ್ವಾದ ನಡೆದು ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಗೊಂದಲ ಹೆಚ್ಚಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.